ಪುತ್ತೂರು ನಗರ ಸಭೆ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ
ಪುತ್ತೂರು:ಪುತ್ತೂರು ನಗರ ಸಭೆ, ವಿಟ್ಲ ಪಟ್ಟಣ ಪಂಚಾಯತ್, ಕಡಬ ಪಟ್ಟಣ ಪಂಚಾಯತ್ ಸೇರಿದಂತೆ ರಾಜ್ಯದ 61 ನಗರಸಭೆ, 117 ಪಟ್ಟಣ ಪಂಚಾಯತ್ ಹಾಗೂ 123 ಪುರಸಭೆಗಳಿಗೆ ಎರಡನೇ ಅವಽಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಕೊನೆಗೂ ಮೀಸಲಾತಿ ಪ್ರಕಟಗೊಂಡಿದೆ.ಆ ಮೂಲಕ ಒಂದು ವರ್ಷ ಎರಡು ತಿಂಗಳ ಬಳಿಕ ಇದೀಗ ಮತ್ತೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಕಾಣುವ ಭಾಗ್ಯ ಸ್ಥಳೀಯಾಡಳಿತಗಳಿಗೆ ದೊರೆಯುತ್ತಿದೆ.ಹೊಸದಾಗಿ ರಚನೆಯಾಗಿರುವ ಕಡಬ ಪಟ್ಟಣ ಪಂಚಾಯತ್ಗೆ ಇನ್ನೂ ಸದಸ್ಯರ ಆಯ್ಕೆಯೇ ನಡೆದಿಲ್ಲವಾದರೂ ಅಧ್ಯಕ್ಷ,ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಂಡಿರುವುದು ವಿಶೇಷವಾಗಿದೆ.
ಪುತ್ತೂರು ನಗರ ಸಭೆಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷತೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.ವಿಟ್ಲ ಪಟ್ಟಣ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ.ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಫಲಿತಾಂಶ ಪ್ರಕಟಗೊಂಡು 5 ವರ್ಷ 11 ತಿಂಗಳು ಕಳೆಯಿತು.!:
ಪುತ್ತೂರು ನಗರ ಸಭೆಯ 31 ವಾರ್ಡ್ಗಳಿಗೆ 2018ರ ಆಗಸ್ಟ್ 30ರಂದು ಚುನಾವಣೆ ನಡೆದು ಸೆ.3ರಂದು ಫಲಿತಾಂಶ ಪ್ರಕಟವಾಗಿತ್ತು.25 ವಾರ್ಡ್ಗಳಲ್ಲಿ ಬಿಜೆಪಿ, 5
ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಒಂದು ವಾರ್ಡ್ನಿಂದ ಎಸ್ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದ್ದರು.ಫಲಿತಾಂಶದ ಬಳಿಕ ರಾಜ್ಯದ ಅನೇಕ ಪೌರಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟಗೊಂಡಿದ್ದರೂ ಇದರ ವಿರುದ್ಧ ಹೈಕೋರ್ಟ್ಗೆ ಆಕ್ಷೇಪಣೆ ಸಲ್ಲಿಕೆಯಾಗಿದ್ದರಿಂದ ಘೋಷಿತ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.ಈ ಕಾರಣದಿಂದ ಮೊದಲ ಅವಽಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗದೆ ಜನಪ್ರತಿನಿಧಿಗಳ ಆಡಳಿತವಿರಲಿಲ್ಲ.ಫಲಿತಾಂಶ ಪ್ರಕಟವಾಗಿ 26 ತಿಂಗಳ ಬಳಿಕ ಕೊನೆಗೂ ಪ್ರಥಮ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಗೊಂಡಿತ್ತು.ಪ್ರಥಮ ಅವಧಿಗೆ ಪುತ್ತೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಘೋಷಣೆಯಾಗಿ ಜೀವಂಧರ್ ಜೈನ್ ಅಧ್ಯಕ್ಷರಾಗಿ ಮತ್ತು ವಿದ್ಯಾ ಆರ್ ಗೌರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
5 ವರ್ಷ 10 ತಿಂಗಳಲ್ಲಿ 30 ತಿಂಗಳು ಜನಪ್ರತಿನಿಧಿಗಳ ಆಡಳಿತ:
ಮೊದಲನೆಯ ಅವಧಿಯಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದ ಬರೋಬ್ಬರಿ 26 ತಿಂಗಳ ಬಳಿಕ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯಾಗಿತ್ತು.ಚುನಾವಣೆ ನಡೆದ ಬಳಿಕದ 5 ವರ್ಷ 11 ತಿಂಗಳಲ್ಲಿ 30 ತಿಂಗಳು ಮಾತ್ರ ಚುನಾಯಿತ ಜನಪ್ರತಿನಿಧಿಗಳು ಅಧಿಕಾರ ನಡೆಸಿದ್ದಾರೆ.ಪ್ರಥಮ ಅವಧಿಯ ಅಧ್ಯಕ್ಷ,ಉಪಾಧ್ಯಕ್ಷರ ಅಧಿಕಾರದ ಅವಧಿ ಪೂರ್ಣಗೊಂಡ 14 ತಿಂಗಳ ಬಳಿಕ ಇದೀಗ ಎರಡನೇ ಅವಽಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟವಾಗಿದೆ.ಕ್ರಮಬದ್ಧವಾಗಿ ಮೀಸಲಾತಿ ಪ್ರಕಟವಾಗಿ, ಯಾವುದೇ ಆಕ್ಷೇಪಣೆಗಳಿಲ್ಲದೆ ಮುಂದುವರಿಯುತ್ತಿದ್ದರೆ ಪ್ರಥಮ,ದ್ವಿತೀಯ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆದು ಅವರ ಅಧಿಕಾರದ ಅವಧಿ ಪೂರ್ಣಗೊಂಡು ಹೊಸದಾಗಿ ಸದಸ್ಯರ ಆಯ್ಕೆಗೆ ಮತ್ತೆ ಚುನಾವಣೆ ನಡೆಯಬೇಕಿತ್ತು.ಆದರೆ ಪ್ರಥಮ,ದ್ವಿತೀಯ ಎರಡು ಅವಽಗೂ ಅಧ್ಯಕ್ಷ,ಉಪಾಧ್ಯಕ್ಷರ ಮೀಸಲಾತಿ ಪ್ರಕಟ ಬಹಳಷ್ಟು ವಿಳಂಬವಾಗಿರುವುದರಿಂದ ಮುಂದಿನ 16 ತಿಂಗಳ ಬಳಿಕ ಹೊಸದಾಗಿ ಚುನಾವಣೆ ನಡೆಯಲಿದೆ.
ಎರಡನೇ ಅವಧಿಗೆ 16 ತಿಂಗಳು ಮಾತ್ರ ಅಧಿಕಾರ:
2020ರ ನವೆಂಬರ್ 2ರಿಂದ 2023ರ ಮೇ 2ರ ತನಕ ಪುತ್ತೂರು ನಗರಸಭೆಯಲ್ಲಿ ಜೀವಂಧರ್ ಜೈನ್ ಅಧ್ಯಕ್ಷರಾಗಿ, ವಿದ್ಯಾ ಆರ್ ಗೌರಿ ಉಪಾಧ್ಯಕ್ಷರಾಗಿ ಮೊದಲ ಹಂತದ 30 ತಿಂಗಳು ಆಡಳಿತ ನಡೆಸಿದ್ದರು.ಮೊದಲ ಅವಧಿ ಮುಕ್ತಾಯಗೊಂಡಿರುವ ವೇಳೆ ವಿಧಾನಸಭಾ ಚುನಾವಣೆ ಘೋಷಣೆಯಾದ ಕಾರಣ ಎರಡನೆ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗಲಿಲ್ಲ.ಮೊದಲ ಅವಧಿ ಪೂರ್ಣಗೊಂಡು ಹದಿನಾಲ್ಕು ತಿಂಗಳ ಬಳಿಕ ಇದೀಗ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿರುವುದರಿಂದ ಎರಡನೇ ಅವಽಯಲ್ಲಿ 16 ತಿಂಗಳು ಮಾತ್ರ ಅಧ್ಯಕ್ಷ,ಉಪಾಧ್ಯಕ್ಷರಿಗೆ ಅಧಿಕಾರವಿರಲಿದೆ ಎಂದು ಮಾಹಿತಿ ಲಭಿಸಿದೆ.ಚುನಾವಣೆ ನಡೆದು ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಬಳಿಕ ಐದು ವರ್ಷಗಳ ಕಾಲ ಚುನಾಯಿತ ಜನಪ್ರತಿನಿಧಿಗಳಿಗೆ ಆಡಳಿತ ನಡೆಸಲು ಅವಕಾಶವಿರುತ್ತದೆ.ಆದರೆ ಮೊದಲ ಅವಧಿ ಮುಗಿದ ಬಳಿಕ 14 ತಿಂಗಳು ಮೀಸಲಾತಿ ಪ್ರಕಟವಾಗದೇ ಇರುವುದರಿಂದ ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಅಧಿಕಾರದ ಅವಧಿಯಲ್ಲಿ ಹದಿನಾರು ತಿಂಗಳು ಮಾತ್ರ ಆಗಿರುತ್ತದೆ.
ಬಿಜೆಪಿ-25,ಕಾಂಗ್ರೆಸ್-5, ಎಸ್ಡಿಪಿಐ-1:
ಪುತ್ತೂರು ನಗರ ಸಭೆಯ 31 ಸ್ಥಾನಗಳಿಗೆ 2018ರ ಆಗಸ್ಟ್ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್ 5, ಎಸ್ಡಿಪಿಐ 1 ಸ್ಥಾನಗಳಲ್ಲಿ ಜಯಗಳಿಸಿದ್ದರು.ಈ ಪೈಕಿ ಕಬಕ 1ನೇ ವಾರ್ಡ್ನಿಂದ ಬಿಜೆಪಿಯಿಂದ ಚುನಾಯಿತರಾಗಿದ್ದ ಶಿವರಾಮ ಸಪಲ್ಯ ಹಾಗೂ ಕಸಬ 2 ನೆಲ್ಲಿಕಟ್ಟೆ ವಾರ್ಡ್ನಿಂದ ಕಾಂಗ್ರೆಸ್ನಿಂದ ಚುನಾಯಿತರಾಗಿದ್ದ ಶಕ್ತಿ ಸಿನ್ಹಾರವರ ನಿಧನದಿಂದ ತೆರವಾದ ಸ್ಥಾನಗಳಿಗೆ 2023ರ ಡಿಸೆಂಬರ್ 27ರಂದು ಉಪಚುನಾವಣೆ ನಡೆದು ನೆಲ್ಲಿಕಟ್ಟೆ ವಾರ್ಡ್ನಲ್ಲಿ ಬಿಜೆಪಿಯ ರಮೇಶ್ ರೈ ಹಾಗೂ ಕಬಕ 1ನೇ ವಾರ್ಡ್ನಲ್ಲಿ ಕಾಂಗ್ರೆಸ್ನ ದಿನೇಶ್ ಶೇವಿರೆ ವಿಜೇತರಾಗಿದ್ದರು
ಅಧ್ಯಕ್ಷತೆಗೆ ಶಶಿಕಲಾ ಸಿ.ಎಸ್,ಲೀಲಾವತಿಯವರಿಗೆ ಚಾನ್ಸ್
ಎರಡನೇ ಅವಧಿಗೆ ನಗರ ಸಭೆಯ ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ ಮೀಸಲಾಗಿದ್ದು ಬಹುಮತ ಹೊಂದಿರುವ ಬಿಜೆಪಿಯಿಂದ ಕಸಬಾ 13ನೇ ವಾರ್ಡ್ ಸದಸ್ಯೆ ಶಶಿಕಲಾ ಸಿ.ಎಸ್.ಹಾಗೂ ಚಿಕ್ಕಮುಡ್ನೂರು 1ನೇ ವಾರ್ಡ್ ಸದಸ್ಯೆ ಲೀಲಾವತಿ ಕೃಷ್ಣನಗರರವರಿಗೆ ಮಾತ್ರ ಅವಕಾಶವಿದೆ.ಶಶಿಕಲಾ ಸಿ.ಎಸ್.ರವರು ಪುರಸಭೆ ಸದಸ್ಯರಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಉಪಾಧ್ಯಕ್ಷತೆ ಸಾಮಾನ್ಯ ಮೀಸಲಾಗಿರುವುದರಿಂದ ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶವಿದೆ.ಅಧ್ಯಕ್ಷತೆಗೆ ಶಶಿಕಲಾ ಸಿ.ಎಸ್.ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು,ಉಪಾಧ್ಯಕ್ಷತೆಗೆ ಯಾರು ಎನ್ನುವುದು ಸ್ಪಷ್ಟವಾಗಿಲ್ಲ.
ಚುನಾವಣೆಯೇ ನಡೆಯದಿದ್ದರೂ ಕಡಬ ಪಟ್ಟಣ ಪಂಚಾಯತ್ಗೆ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಭಾಗ್ಯ !
ಕಡಬ: ಕಡಬ ಪಟ್ಟಣ ಪಂಚಾಯತ್ನ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ. ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಈ ಆದೇಶವನ್ನು ನೋಡಿದಾಗ ನಿಮಗೆ ಆಶ್ವರ್ಯವಾಗಬಹುದು ಆದರೆ ಸರಕಾರ ಆ.5ರಂದು ರಾಜ್ಯದ ಪಟ್ಟಣ ಪಂಚಾಯತ್ಗಳಿಗೆ ಮೀಸಲಾತಿ ಆದೇಶ ಮಾಡಿ ಪ್ರಕಟಣೆ ಹೊರಡಿಸಿದೆ. ಈ ಪ್ರಕಟಣೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಗೂ ಮೀಸಲಾತಿ ನೀಡಿದ್ದು ಆಶ್ಚರ್ಯ ತಂದಿದೆ.
ಕಡಬ ಕೋಡಿಂಬಾಳ ಕಡಬ ಪಟ್ಟಣ ಪಂಚಾಯತ್ ಆಗಿ ನಾಲ್ಕು ವರ್ಷಗಳು ಕಳೆದು ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ, ಆದರೂ ಇಲ್ಲಿಯವರೆಗೆ ಚುನಾವಣೆ ನಡೆಯದೆ, ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳೇ ಆಡಳಿತ ಮಾಡುತ್ತಿದ್ದಾರೆ. ಈಗಾಗಲೇ 13 ವಾರ್ಡ್ಗಳಾಗಿ ವಿಂಗಡಣೆ ಮಾಡಲಾಗಿದೆ. ಕಡಬದಂತೆ ಹೊಸ ಪಟ್ಟಣ ಪಂಚಾಯತ್ಗಳು ಇದ್ದು ಎಲ್ಲ ಪಂಚಾಯತ್ಗಳಿಗೂ ಮೀಸಲಾತಿ ನಿಗದಿಪಡಿಸಲಾಗಿದೆ. ಕಡಬ ಪಟ್ಟಣ ಪಂಚಾಯತ್ಗೆ ಚುನಾವಣೆಯೇ ನಡೆದಿಲ್ಲ ಎನ್ನುವುದು ಅಧಿಕಾರಿಗಳಿಗೆ ತಿಳಿಯದೆ ಇರುವುದು ಈ ಸಮಸ್ಯೆಗೆ ಕಾರಣವಾಗಿರಬಹುದು, ಇನ್ನಾದರೂ ಚುನಾವಣೆ ನಡೆಯಲಿ ಎಂದು ನಾಗರಿಕರು ಒತ್ತಾಯಿಸಿದ್ದಾರೆ.