ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಕರ್ವೇಲು ಎಂಬಲ್ಲಿ ಮಾಡತ್ತಾರು ಹೋಗುವ ರಸ್ತೆಯು ಹೊಂಡ-ಗುಂಡಿಗಳಿಂದ ಕೂಡಿ ಕೆಸರುಮಯವಾಗಿದ್ದು, ನಡೆದಾದಲೂ ಕಷ್ಟಕರವಾಗಿದೆ. ಚರಂಡಿಯಿಲ್ಲದೆ ಇಲ್ಲಿ ಮಳೆ ನೀರು ರಸ್ತೆಯ ಮೇಲೆಯೇ ಹರಿದು ಹೋಗುತ್ತಿದ್ದು, ಹಲವು ಬಾರಿ ಈ ಬಗ್ಗೆ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದರೂ ಗ್ರಾ.ಪಂ.ನಿಂದ ಯಾವುದೇ ಸ್ಪಂದನೆ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ವೇಲು- ಮಾಡತ್ತಾರು ರಸ್ತೆಯಲ್ಲಿ ಕರ್ವೇಲು ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ಇಳಿಜಾರಾಗಿ ಮಣ್ಣಿನ ರಸ್ತೆಯಿದ್ದು, ಇಲ್ಲಿ ಯಾವುದೇ ಚರಂಡಿ ವ್ಯವಸ್ಥೆಯಿಲ್ಲ. ಈ ಪರಿಸರದಲ್ಲಿ ಬೀಳುವ ಮಳೆ ನೀರು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯ ಮೇಲೆಯೇ ಹರಿಯುವಂತಾಗಿದೆ. ಇದರಿಂದ ರಸ್ತೆಯು ಹೊಂಡ ಬಿದ್ದಿದ್ದು, ಸಂಪೂರ್ಣ ಕೆಸರುಮಯವಾಗಿ ಜಾರುತ್ತಿದೆ. ಆದ್ದರಿಂದ ಈ ರಸ್ತೆಯಲ್ಲಿ ನಡೆದಾಡಲೂ ಕಷ್ಟಕರವಾಗಿದೆ. ದ್ವಿಚಕ್ರ ವಾಹನಗಳು ಹೋಗುವಾಗ ಸ್ಕಿಡ್ ಆಗಿ ಬೀಳುವ ಸ್ಥಿತಿ ಎದುರಾಗಿದೆ. ಈ ರಸ್ತೆಯ ಮೂಲಕ ಹಲವು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುತ್ತಿದ್ದು ರಸ್ತೆಯು ಕೆಸರುಮಯವಾಗಿರುವುದರಿಂದ ಇವರೆಲ್ಲಾ ಸಂಕಷ್ಟ ಎದುರಿಸುವಂತಾಗಿದೆ.
ಸಿಗದ ಸ್ಪಂದನೆ:
ಈ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಯ ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಗ್ರಾ.ಪಂ.ಗೆ ಮನವಿ ಮಾಡಿಕೊಂಡರೂ, ಗ್ರಾ.ಪಂ.ನಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಒಟ್ಟಿನಲ್ಲಿ ರಸ್ತೆ ಹದಗೆಟ್ಟಿರುವುದರಿಂದ ಇಲ್ಲಿ ಓಡಾಟ ನಡೆಸುವವರು ಜಾರುತ್ತಾ ಬೀಳುತ್ತಾ ಕೆಸರನ್ನು ಮೆತ್ತಿಸಿಕೊಂಡು ಓಡಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಮುಖ್ಯವಾಗಿ ಬೇಕಾಗಿರುವುದು ಮಳೆ ನೀರು ಹರಿದು ಹೋಗಲು ಚರಂಡಿಯ ವ್ಯವಸ್ಥೆ. ಆದರೆ ಕರ್ವೇಲು ಬಳಿ ಮಾಡತ್ತಾರು ಹೋಗುವ ರಸ್ತೆಗೆ ಚರಂಡಿಯ ವ್ಯವಸ್ಥೆಯೇ ಇಲ್ಲ. ಇದು ಇಳಿಜಾರು ಪ್ರದೇಶವಾಗಿರುವುದರಿಂದ ಎತ್ತರದ ಪ್ರದೇಶದಿಂದ ಬರುವ ನೀರೆಲ್ಲಾ ಈ ರಸ್ತೆಯ ಮೂಲಕವೇ ಹಾದು ಹೋಗುತ್ತವೆ. ಮಳೆಯ ಸಂದರ್ಭ ಈ ರಸ್ತೆಯೇ ತೋಡಾಗಿ ಪರಿವರ್ತನೆಯಾಗುತ್ತದೆ. ಮಳೆ ನೀರು ಹರಿದು ಹೋಗಿರುವುದರಿಂದ ಈ ಮಣ್ಣಿನ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ರಸ್ತೆಯು ಸಂಪೂರ್ಣ ಕೆಸರುಮಯವಾಗಿ ಕಾಲಿಟ್ಟಲ್ಲಿ ಜಾರುತ್ತಿದೆ. ಈ ರಸ್ತೆಗೆ ಚರಂಡಿಯ ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಗ್ರಾ.ಪಂ.ನವರಿಗೆ ಹೇಳಿದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ದ್ವಿಚಕ್ರ ವಾಹನಗಳಿಗೂ ಇಲ್ಲಿ ಸಂಚಾರ ಕಷ್ಟಸಾಧ್ಯವಾಗಿದೆ. ಇನ್ನು ಪಾದಚಾರಿಗಳ ಅವಸ್ಥೆ ಹೇಳೋದೇ ಬೇಡ. ನಿಧಾನಕ್ಕೆ ಒಂದೊಂದೇ ಹೆಜ್ಜೆಯಿಡುತ್ತಾ, ಜಾರುತ್ತಾ ಕೆಸರು ಮೆತ್ತಿಸಿಕೊಂಡು ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಶರೀಫ್ ಕರ್ವೇಲು
ಸ್ಥಳೀಯರು