ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಮಹಾಸಭೆ

0

ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಪುತ್ತೂರು ವಲಯದ ವಾರ್ಷಿಕ ಮಹಾಸಭೆಯು ಆ.12ರಂದು ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಮಾತನಾಡಿ, ಫೋಟೋಗ್ರಾಫರ್ ಗಳದ್ದು ವೃತ್ತಿ ಅವಲಂಬಿತ ಬದುಕು. ತನ್ನ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸ ತೊಡಗಿಸಿಕೊಂಡಿದೆ. ವರ್ಷದ 3-4ತಿಂಗಳ ಕೆಲಸ ಮಾಡಿ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.

ಜಿಲ್ಲಾ ಸಂಘದ 14 ವಲಯಗಳಲ್ಲಿ ಪುತ್ತೂರು ಶಿಸ್ತು, ಪ್ರತಿಷ್ಠಿತ ಹಾಗೂ ಮಾದರಿ ವಲಯವಾಗಿದೆ. ಛಾಯ ಸುರಕ್ಷಾ ಯೋಜನೆ, ನಿವೇಶನ ಖರೀದಿ, ಕಟ್ಟಡ ನಿರ್ಮಾಣದಲ್ಲಿ ಪುತ್ತೂರಿನ ಸಹಕಾರ ಪ್ರಥಮವಾಗಿದೆ. ಜಿಲ್ಲಾ ಸಂಘದ ಯೋಜನೆಗಳಿಗೆ ಇನ್ನಷ್ಟು ಸಹಕಾರ ನೀಡಬೇಕು. ನಮ್ಮದೇ ಸಹಕಾರ ಸಂಘವಿದ್ದು ಸದಸ್ಯರು ಸಂಘದಲ್ಲೇ ಎಲ್ಲಾ ರೀತಿಯ ವ್ಯವಹಾರ ನಡೆಸಬೇಕು. ವಾಣಿಜ್ಯ ಸಂಕೀರ್ಣ ನಿರ್ಮಾಣ ಆಗಿ ಅದರ ಲಾಭವು ಸಂಘದ ಸದಸ್ಯರಿಗೆ ದೊರೆಯಲಿದ್ದು ಸದಸ್ಯರು ಸಹಕರಿಸುವಂತೆ ವಿನಂತಿಸಿದರು.


ಸ್ಟುಡಿಯೋ ದರ ಪಟ್ಟಿ ಬದಲಾವಣೆ:
ಜಿಲ್ಲಾ ಸಂಘದ ವಾರ್ಷಿಕ ಮಹಾಸಭೆಯು ಸೆ.29ರಂದು ಮಂಗಳೂರಿನಲ್ಲಿ ನಡೆಯಲಿದ್ದು ಎಲ್ಲಾ ಸದಸ್ಯರು ಭಾಗವಹಿಸಬೇಕು. ಸ್ಟುಡಿಯೋಗಳ ದರಪಟ್ಟಿ ಬದಲಾವಣೆ ಮಾಡಲಾಗಿದ್ದು ಮಹಾಸಭೆಯಲ್ಲಿ ಘೋಷಣೆ ಮಾಡಲಾಗುವುದು. ಹೊಸ ದರ ಪಟ್ಟಿಯನ್ನು ಎಲ್ಲಾ ಸದಸ್ಯರು ಕಡ್ಡಾಯವಾಗಿ ಅನುಸರಿಸಬೇಕು ಎಂದು ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ ಮಾತನಾಡಿ, ಪುತ್ತೂರು ವಲಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆ ಬಲೀಷ್ಠಗೊಳ್ಳುತ್ತಿದೆ. ಸಂಘಟನೆ ಮೂಲಕ ವಲಯದ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಪುತ್ತೂರಿನ ಹೆಸರು ರಾರಾಜಿಸುತ್ತಿದೆ ಎಂದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ ಮಾತನಾಡಿ, ಸಂಘಟನೆಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಾಗಬೇಕು. ಸದಸ್ಯರ ಕಷ್ಟ ಸುಖಗಳನ್ನು ಭಾಗಿಗಳಾಗುವುದೇ ಸಂಘಟನೆ. ನಮಗೆ ನಾವೇ ಪ್ರತಿಸ್ಪರ್ಧಿಗಳಾಗಬಾರದು. ದರದಲ್ಲಿ ಸ್ಪರ್ಧೆ ಮಾಡಬಾರದು. ಗುಣಮಟ್ಟದಲ್ಲಿ ಸ್ಪರ್ಧೆ ನೀಡಬೇಕು ಎಂದರು.


ಕಟ್ಟಡ ಸಮಿತಿಯ ಪುತ್ತೂರು ವಲಯದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡಿ, ಹಿರಿಯರ ಕನಸು ಯುವ ಪೀಳಿಗೆಯ ಪ್ರೇರಣೆಯಾಗಿ ಜಿಲ್ಲಾ ಸಂಘದಿಂದ ಸುಸಜ್ಜಿತ ಕಟ್ಟಡ, ನಿರ್ಮಾಣವಾಗಲಿದೆ. ಪುತ್ತೂರು ವಲಯದಿಂದ ಕನಿಷ್ಠ ರೂ.25 ಲಕ್ಷ ಕೊಡುಗೆ ನೀಡಲಿದ್ದು ಪ್ರತಿಯೊಬ್ಬ ಸದಸ್ಯರು ಕನಿಷ್ಟ ರೂ.10,000 ನೀಡಿ ಸಹಕರಿಸುವಂತೆ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ವಲಯದ ಅಧ್ಯಕ್ಷ ರಘು ಶೆಟ್ಟಿ ಮಾತನಾಡಿ, ಒಂದು ಬಲಿಷ್ಠ ಸಂಘಟನೆಯ ಪುತ್ತೂರು ವಲಯದ ಅಧ್ಯಕ್ಷನಾಗಿ ಆಯ್ಕೆ ಆಗಿರುವುದು ನನ್ನ ಭಾಗ್ಯ. ಸಂಘಟನೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡಾಗ ಸಂಘದ ಮಹತ್ವ ನಮಗೆ ತಿಳಿಯುತ್ತದೆ, ಆದುದರಿಂದ ಎಲ್ಲಾ ಸದಸ್ಯರು ನಮ್ಮ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ತಿಳಿಸಿದರು.
ಎಸ್.ಕೆ.ಪಿ.ಎ ಸೌಹಾರ್ದ ಸಹಕಾರಿಯ ನಿರ್ದೇಶಕ ಸುದರ್ಶನ್ ರಾವ್, ಪುತ್ತೂರು ವಲಯದ ಗೌರವಾಧ್ಯಕ್ಷ ಹರೀಶ್ ಎಲಿಯ ಸಂದರ್ಭೋಚಿತವಾಗಿ ಮಾತನಾಡಿದರು.


ಪ್ರತಿಭಾ ಪುರಸ್ಕಾರ:
2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಲಯದಲ್ಲಿ ನೂತನ ಗೃಹ ನಿರ್ಮಾಣ ಮತ್ತು ನೂತನ ಸ್ಟುಡಿಯೋ ಮಾಡಿದವರನ್ನು ಅಭಿನಂದಿಸಲಾಯಿತು.


ಉಚಿತ ನೇತ್ರಾ ಚಿಕಿತ್ಸಾ ಶಿಬಿರ:
ಮಹಾಸಭೆಯಲ್ಲಿ ಪುತ್ತೂರು ವಲಯದ ಸದಸ್ಯರಿಗಾಗಿ ಉಚಿತ ಕಣ್ಣಿನ ತಪಾಸನ ಶಿಬಿರವನ್ನು ನಡೆಸಲಾಯಿತು. ಅಸೋಸಿಯೇಷನ್ ಸದಸ್ಯರು ಶಿಬಿರ ಪ್ರಯೋಜನ ಪಡೆದುಕೊಂಡರು.
ವಲಯದ ಮಾಜಿ ಅಧ್ಯಕ್ಷ ಶಾಂತ ಕುಮಾರ್ ಪ್ರಾರ್ಥಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಮೋದ್ ಸಾಲ್ಯಾನ್ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಗಣೇಶ್ ಕಟ್ಟಪುಣಿ ವಾರ್ಷಿಕ ವರದಿ ವಾಚಿಸಿದರು. ರವಿಚಂದ್ರ ರೈ ಮುಂಡೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ವಂದಿಸಿದರು. ವಿನಯ ಪಂಜಳ, ಗಿರಿಧರ ಭಟ್, ಸುಸ್ರುತ್ ರೈ, ರವಿಕಿರಣ್, ಪ್ರವೀಣ್ ವಿಟ್ಲ, ಸಂತೋಷ ಬನ್ನೂರು, ಗಿರೀಶ್, ವಸಂತ, ಗಣೇಶ್ ಕಟ್ಟಪುಣಿ, ಸುಪ್ರೀತ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here