ವಿಟ್ಲ: ವಿಶ್ವಹಿಂದೂ ಪರಿಷತ್ ಷಷ್ಠಿ ಪೂರ್ತಿ ಆಚರಣೆ ಸಮಿತಿ ವಿಟ್ಲ ಪ್ರಖಂಡ ಮತ್ತು ಬಾಲಗೋಕುಲ ಸಮಿತಿ ವತಿಯಿಂದ 17ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಮತ್ತು ಶ್ರೀ ವಿದ್ಯಾಗೋಪಾಲ ಹವನ ಆ. 25 ರಂದು ಜರಗಲಿದೆ ಎಂದು ಆಚರಣೆ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಬೆಂಞಂತಿಮಾರ್ ರವರು ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಶ್ರೀ ವಿದ್ಯಾ ಗೋಪಾಲಹವನ ಬೆಳಿಗ್ಗೆ 7.30ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪಂಚಲಿಂಗೇಶ್ವರ ಸದನದಲ್ಲಿ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಸಭಾ ಕಾರ್ಯಕ್ರಮ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಜರಗಲಿದೆ. ಶ್ರೀ ವಿದ್ಯಾ ಗೋಪಾಲಹವನವು ವೇದ ಮೂರ್ತಿ ಉದಯೇಶ ಕೆದಿಲಾಯರವ ಪೌರೋಹಿತ್ಯದಲ್ಲಿ ನಡೆಯಲಿದೆ. ಕುಂಟಾರು ರವೀಶ್ ತಂತ್ರಿರವರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ಜರಗಲಿದೆ.
ಶೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರಡುವ ಶೋಭಾಯಾತ್ರೆಗೆ ಸಾಮಾಜಿಕ ಕಾರ್ಯಕರ್ತ ಕುಂಡಕೋಳಿ ರಾಜೀವ್ ಭಂಡಾರಿ ಚಾಲನೆ ನೀಡುವರು. ಕುದ್ದುಪದವು ದಿವ್ಯ ಶಕ್ತಿ ಮಕ್ಕಳ ಕುಣಿತ ಭಜನೆ ತಂಡದಿಂದ ಭಜನೆ ಜರಗಲಿದೆ.
ಶೋಭಾಯಾತ್ರೆತ ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ಮನೋರಂಜನ್ ಕರೈರವರು ವಹಿಸಲಿದ್ದಾರೆ. ಹಿರಿಯ ಸ್ವಯಂ ಸೇವಕ ತನಿಯಪ್ಪ ಮೂಲ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಶ್ವಹಿಂದೂ ಪರಿಷದ್ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ ಮುಖ್ಯ ಭಾಷಣ ಮಾಡಲಿದ್ದಾರೆ. ಕೃಷಿ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕೆ.ಜಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಉಪನ್ಯಾಸಕಿ, ಕಲಾವಿದೆ ವಸುಧಾ ಉಪಸ್ಥಿತರಿರಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜೇಶ್ ಮಳಿ ಅವರಿಂದ ಜಾದೂ ಪ್ರದರ್ಶನ ಮತ್ತು ಬಾಲಗೋಕುಲದ ಮಕ್ಕಳಿಂದ ನೈತ್ಯ ವೈವಿಧ್ಯ ನಡೆಯಲಿದೆ ಎಂದರು.
ಬಾಲಗೋಕುಲ ಮತ್ತು ವಿಶ್ವಹಿಂದೂ ಪರಿಷದ್ ನ ಕಾರ್ಯಚಟುವಟಿಕೆಗಳ ಬಗ್ಗೆ ಉಪಸ್ಥಿತ ಪದಾಧಿಕಾರಿಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ, ಶ್ರೀಕಂಠ ವರ್ಮ, ಪದ್ಮನಾಭ ಕಟ್ಟೆ, ಶಿಶಿರ ಗೌಡ, ಈಶ್ವರ ಕೂಜಪಾಡಿ, ಜಗದೀಶ್ ಪಾಣೆಮಜಲು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.