ಬೆಟ್ಟಂಪಾಡಿ: ಇಲ್ಲಿನ ಮಿತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ 14 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಮಿತ್ತಡ್ಕ ಕುಟುಂಬದ ತರವಾಡು ಮನೆಯ ಆವರಣದಲ್ಲಿ ಸೆ. 26 ರಂದು ನಡೆಯಿತು.
ಬೆಳಿಗ್ಗೆ ಊರಿನ ಹಿರಿಯರಾದ ಯಮುನಾ ದರ್ಖಾಸುರವರು ದೀಪ ಪ್ರಜ್ವಲಿಸಿ, ತೆಂಗಿನಕಾಯಿ ಒಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಿತ್ತಡ್ಕ ಶಾಲಾ ಮುಖ್ಯಗುರು ಮುತ್ತಪ್ಪ ಪೂಜಾರಿಯವರು ಉಪಸ್ಥಿತರಿದ್ದರು. ಬಳಿಕ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳು ಜರಗಿದವು. ಅಂಗನವಾಡಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಜರಗಿತು.
ಸಭಾ ಕಾರ್ಯಕ್ರಮ
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುರಂದರ ಗೌಡ ನಾಯರಡ್ಕರವರು ವಹಿಸಿದ್ದರು. ಪ್ರಧಾನ ಅಭ್ಯಾಗತರಾಗಿ ಆಗಮಿಸಿದ ಪುತ್ತೂರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಹಶಿಕ್ಷಕ ಗಣೇಶ್ ಏತಡ್ಕ ವಿಶೇಷ ಉಪನ್ಯಾಸ ನೀಡಿ ‘ಧಾರ್ಮಿಕ ಆಚರಣೆಗಳಲ್ಲಿ ಮಕ್ಕಳು, ಯುವಕರು ಸಕ್ರಿಯವಾಗಿ ಭಾಗವಹಿಸಬೇಕಾದ ಅವಶ್ಯಕತೆಯ ಕುರಿತು ಮಾತನಾಡಿದರು. ಪುರಾಣ ಕಥೆಗಳ ಮೂಲಕ ಮಕ್ಕಳಿಗೆ ಆಚರಣೆಗಳ ಮಹತ್ವದ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಬೈಲಾಡಿ ನೋವಿನೆಣ್ಣೆ ವಂಶಪಾರಂಪರ್ಯ ನಾಟಿ ವೈದ್ಯ ದೇವಿಪ್ರಸಾದ್ ಬೈಲಾಡಿ, ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ನವೋದಯ ಪ್ರೌಢಶಾಲೆಯ ಸಹಶಿಕ್ಷಕ, ಜೇನು ತರಬೇತುದಾರ ರಾಧಾಕೃಷ್ಣ ಆರ್. ಕೋಡಿ ಮಾತನಾಡಿ ವಿದ್ಯಾರ್ಥಿಗಳಿಗೆ, ಯುವಕರು ಮತ್ತು ಮಹಿಳೆಯರು ಸಾಮಾಜಿಕವಾಗಿ ಅನುಸರಿಸಬೇಕಾದ ಕುರಿತು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಮಿತ್ತಡ್ಕ ಕುಟುಂಬದ ಯಜಮಾನ ಸೀತಾರಾಮ ಗೌಡ ಮಿತ್ಯಡ್ಕ, ಕೇಸರಿ ಮಿತ್ರವೃಂದ ಕೇಸರಿನಗರ ಇದರ ಅಧ್ಯಕ್ಷ ರಾಧಾಕೃಷ್ಣ ಗೌಡ ಮಿತ್ತಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಜಯ್ ಕುಲಾಲ್, ಕೋಶಾಧಿಕಾರಿ ರಕ್ಷಣ್ ಬೇಂಗತ್ತಡ್ಕ ಉಪಸ್ಥಿತರಿದ್ದರು.
ಭವಿಷ್ಯ, ಸಿಂಚನಾ, ಸಮೀಕ್ಷಾ ಹಾಗೂ ಹವ್ಯ ಪ್ರಾರ್ಥಿಸಿದರು. ಸಂಘದ ಸದಸ್ಯ ಶಿವಪ್ರಸಾದ್ ತಲೆಪ್ಪಾಡಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು.