ವೀರಮಂಗಲದಲ್ಲಿ ಸಂಭ್ರಮಿಸಿದ ಶ್ರೀಕೃಷ್ಣ ಕಲಾಕೇಂದ್ರದಿಂದ 4ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವ

0

ಪುತ್ತೂರು: ವೀರಮಂಗಲ ಶ್ರೀ ಕೃಷ್ಣ ಕಲಾ ಕೇಂದ್ರ ವೀರಮಂಗಲ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸೆ.1ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಮನೋರಂಜನಾ ಸ್ಪರ್ಧೆಗಳೊಂದಿಗೆ ನಡೆದ ನಾಲ್ಕನೇ ವರ್ಷದ ಶ್ರೀಕೃಷ್ಣ ಲೀಲೋತ್ಸವವು ನೋಡುಗರನ್ನು ಮನರಂಜಿಸಿತು.


ಬೆಳಿಗ್ಗೆ ಶ್ರೀವಿಷ್ಣು ಸಹಸ್ರನಾಮಾರ್ಚನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಂತರ ವೀರಮಂಗಲ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ ನಡೆದ ಬಳಿಕ ಸಾರ್ವಜನಿಕರಿಗೆ ವವಿಧ ಮನರಂಜನಾ ಸ್ಪರ್ಧೆಗಳು ಪ್ರಾರಂಭಗೊಂಡಿತು. ಮನರಂಜನಾ ಸ್ಪರ್ಧೆಗಳನ್ನು ಪ್ರಗತಿಪರ ಕೃಷಿಕ ಶೇಷಪ್ಪ ಗೌಡ ಕಾಂತಿಲ ಉದ್ಘಾಟಿಸಿದರು.

ಬಳಿಕ ಅಂಗನವಾಡಿ ಪುಟಾಣಿಗಳು, ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಿತು. ಪುರುಷರ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ವಿಶೇಷವಾಗಿತ್ತು. ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ನೂರಾರು ಮಂದಿ ಭಾಗವಹಿಸಿ ಸ್ಪರ್ಧೆಯ ಜೊತೆಗೆ ಮನೋರಂಜನೆಯು ದೊರೆಯಿತು. ಮಧ್ಯಾಹ್ನ ಸವಣೂರು ಶ್ರವಣರಂಗ ಪ್ರತಿಷ್ಠಾನದ ತಾರಾನಾಥ ಸವಣೂರು ನಿರ್ದೇಶನದಲ್ಲಿ ವೀರಮಂಗಲ ಪಿಎಂಶ್ರೀ ಶಾಲಾ ವಿದ್ಯಾರ್ಥಿಗಳಿಂದ ರಾಣಿ ಶಶಿಪ್ರಭೆ’ ಎಂಬ ಯಕ್ಷಗಾನ, ಸಂಜೆ ಗೋಪೂಜೆ, ಇನ್ನೂರಕ್ಕೂ ಅಧಿಕ ಮಂದಿ ಮುದ್ದುಕೃಷ್ಣ ಆಕರ್ಷಕ ಮೆರವಣಿಗೆ ನಂತರ ನೃತ್ಯಾರ್ಚನೆ ನಡೆಯಿತು.

ಧಾರ್ಮಿಕ ಸಭೆ:
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಸಂತ ಮೂಲ್ಯ ಪಿ.ಮಾತನಾಡಿ, ಕಲೆಯನ್ನು ಕರಗತ ಮಾಡಿಕೊಂಡಿರುವ ನೃತ್ಯಗುರು ಗೋಪಾಲಕೃಷ್ಣರವರು ಕಲಾ ಕೇಂದ್ರದ ಮೂಲಕ ಇತರರಿಗೂ ಉಣಬಡಿಸುತ್ತಿದ್ದಾರೆ. ತನ್ನ ಶಿಷ್ಯರ ಮೇಲೆ ಮುತುವರ್ಜಿಯಿಂದ ಕಲಾಸೇವೆ ನೀಡುತ್ತಿದ್ದಾರೆ. ಶಾಖೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುತ್ತಿದ್ದು ಇನ್ನಷ್ಟು ಶಾಖೆಗಳು ಪ್ರಾರಂಭಗೊಳ್ಳಲಿ ಆ ಮೂಲಕ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಲಿ. ಇಲ್ಲಿ ಎಲ್ಲರೂ ಒಟ್ಟು ಸೇರುವ ಮೂಲಕ ವೀರಮಂಗಲ ಸರ್ವಧರ್ಮಗಳ ಊರಾಗಲಿ ಎಂದರು.

ವೀರಮಂಗಲ ಪಿಎಂಶ್ರೀ ಸರಕಾರಿ ಹಿ.ಪ್ರಾ ಶಾಲೆಯ ಸಹಶಿಕ್ಷಕಿ ಶೋಭಾ ಪಿ.ಮಾತನಾಡಿ, ವಿವಿಧ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ನಡೆದ 4ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವದಲ್ಲಿ ಎಲ್ಲರೂ ಭಾಗಿಗಳಾಗುವ ಮೂಲಕ ಅದ್ಬುತವಾಗಿ ಮೂಡಿಬಂದಿದೆ. ಈ ಕಾರ್ಯಕ್ರಮವು ಪ್ರತಿವರ್ಷ ಇನ್ನಷ್ಟು ವೈಭವದಿಂದ ನಡೆಯಲಿ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಪೂರ್ವಾಧ್ಯಕ್ಷ ವಾಸುದೇವ ಇಡ್ಯಾಡಿ ಮಾತನಾಡಿ, ಶ್ರೀಕೃಷ್ಣನು ಹುಟ್ಟಿದ ದಿನದ ಬಳಿಕ ಅಷ್ಟಮಿ ಆಚರಣೆ ಮಾಡಲಾಗುತ್ತಿದೆ. ಕೃಷ್ಣನ್ನು ಜಾತಿಯವರು ವಿರೋದಿಸುವುದಿಲ್ಲ. ವಿಷ್ಣುವಿನ 8ನೇ ಅವತಾರವಾಗಿರುವ ಶ್ರೀಕೃಷ್ಣ ಜೀವನ ವಿಧಾನದಲ್ಲಿ ಹಲವು ಸಂದೇಶ, ತತ್ವಗಳನ್ನು ನೀಡಿದ್ದು ಅವುಗಳನ್ನು ನಮ್ಮ ಜೀವನದಲ್ಲಿ ಅಳಡಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಕೊಡುಗೆ ನೀಡಬೇಕು ಎಂದರು.

ಶ್ರೀಕೃಷ್ಣ ಕಲಾ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಹಾಗೂ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕಳೆದ 22 ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ವೀರಮಂಗಲದಲ್ಲಿ ಶ್ರೀಕೃಷ್ಣ ಕಲಾ ಕೇಂದ್ರ ಪ್ರಾರಂಭಿಸಲಾಗಿದೆ. ಈಗ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುವುದಲ್ಲದೆ ಅವರಿಗೆ ಸೂಕ್ತವಾದ ವೇದಿಕೆ ಒದಗಿಸಲಾಗುತ್ತಿದೆ. ಪ್ರಸ್ತುತ ಭಕ್ತಕೋಡಿ ಹಾಗೂ ಕಾಣಿಯೂರಿನಲ್ಲಿ ಸಂಸ್ಥೆಯ ಶಾಖೆಯ ಮೂಲಕ ತರಗತಿ ನಡೆಸುವ ಮೂಲಕ ನೂರಾರು ಪ್ರತಿಭೆಗಳಿಗೆ ಗೆಜ್ಜಕಟ್ಟಿ ಅವರ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಶ್ರೀಕೃಷ್ಣ ಲೀಲೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದ್ದು ಇದಕ್ಕೆ ಸಂಘ ಸಂಸ್ಥೆಗಳು ಹಾಗೂ ಊರವರ ಸಹಕಾರ ದೊರೆತಿದೆ ಎಂದರು.

ಪ್ರಗತಿಪರ ಕೃಷಿಕ ಶೇಷಪ್ಪ ಗೌಡ ಕಾಂತಿಲ, ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ವೆಂಕಟಸುಬ್ರಾಯ ಮರಡಿತ್ತಾಯ ಹೊರಳಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ:
ಭರತನಾಟ್ಯದಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಆಯ್ಕೆಯಾದ ಶ್ರೀಕೃಷ್ಣ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯಗುರು ಗೋಪಾಲಕೃಷ್ಣ ವೀರಮಂಗಲರವರನ್ನು ಗೌರವಿಸಿದರು. ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ವೆಂಕಟಸುಬ್ರಾಯ ಮರಡಿತ್ತಾಯ ಹೊರಳಾಡಿಯವರನ್ನು ಗೌರವಿಸಲಾಯಿತು. ಶ್ರೀಕೃಷ್ಣ ಕಲಾಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ಸ್ವಾಗತಿಸಿದರು. ಅಕ್ಷತಾ ಆನಾಜೆ ಕಾರ್ಯಕ್ರಮ ನಿರೂಪಿಸಿದರು. ಹರ್ಷಗುತ್ತು ವಂದಿಸಿದರು. ಸಂದೀಪ್ ಕಾಂತಿಲ, ವೈಷ್ಣವೀ ಮಹಿಳಾ ಮಂಡಲದ ಅಧ್ಯಕ್ಷೆ ಉಷಾ ಜೆ.ರೈ, ಯೋಗೀಶ್, ಹರೀಶ್ ಆಚಾರ್ಯ, ಪ್ರೀಯ, ಭಾರತಿ ಕಾಡಮನೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿದ ಕೃಷ್ಣಾವತಾರ’ಎಂಬ ನೃತ್ಯರೂಪಕದ ಜೊತೆಗೆ ಗೋಪಾಲಕೃಷ್ಣರವರ ಶಿಷ್ಯ ಕೌಶಿಕ್ ಆಚಾರ್ಯ ವೀರಮಂಗಲರವರಿಂದ ಶ್ರೀಕೃಷ್ಣ ಭಾವಚಿತ್ರ ರಚನೆ ಮಾಡುವ ಮೂಲಕ ಒಂದೇ ವೇದಿಕೆಯಲ್ಲಿ ಸಂಗೀತ, ನೃತ್ಯ, ಚಿತ್ರಕಲೆ ಏಕ ಕಾಲದಲ್ಲಿ ನಡೆಯುವ ಮೂಲಕ ಪ್ರೇಕ್ಷಕರ ಕಣ್ಮನ ಸೆಳೆಯಿತು. ರಾತ್ರಿ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.






LEAVE A REPLY

Please enter your comment!
Please enter your name here