ಪೆರ್ನೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ- ಶಾಸಕರಿಂದ ಪರಿಶೀಲನೆ

0

6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ


ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಮಾಣಿಯಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಉಂಟಾದ ಅವ್ಯವಸ್ಥೆಯ ಬಗ್ಗೆ ಗ್ರಾಮಸ್ಥರು ಶಾಸಕ ಅಶೋಕ್ ರೈ ಅವರಲ್ಲಿ ದೂರು ನೀಡಿದ್ದು ಮಂಗಳವಾರ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮಗಾರಿಯಿಂದ ಆಗಿರುವ ತೊಂದರೆಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.


ಹೆದ್ದಾರಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ವೇಗ ಪಡೆದುಕೊಳ್ಳದೇ ಇದ್ದರೆ ನಾವು ನಿತ್ಯ ನರಕಯಾತನೆ ಅನುಭವಿಸಬೇಕಾಗುತ್ತದೆ, ಸಂಪರ್ಕ ರಸ್ತೆಗಳನ್ನು ಕಡಿತ ಮಾಡಿದ್ದಾರೆ, ಬಸ್ಸು ತಂಗುದಾನವನ್ನು ನಿರ್ಮಾಣ ಮಾಡಿಲ್ಲ , ಬಂಡೆಗಳನ್ನು ಸ್ಪೋಟ ಮಾಡಿದ್ದರಿಂದ ನಮ್ಮ ಮನೆಗಳು ಬಿರುಕು ಬಿಟ್ಟಿದೆ. ತಡ ರಾತ್ರಿ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿದ್ದಾರೆ, ರಾತ್ರಿ ನಮಗೆ ನಿದ್ದೆಯಿಲ್ಲ ಇವರನ್ನು ಹೇಳುವವರು ಕೇಳುವವರೇ ಇಲ್ಲದಂತಾಗಿದೆ ಎಂದು ಶಾಸಕರಲ್ಲಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಗ್ರಾಮಸ್ಥರ ಆರೋಪಗಳ ಬಗ್ಗೆ ಶಾಸಕರು ಇಂಜನಿಯರ್ ಮತ್ತು ಗುತ್ತಿಗೆದಾರರ ಜೊತೆ ಚರ್ಚೆ ನಡೆಸಿದರು.

6 ತಿಂಗಳ ಗಡುವು ನೀಡಿದ ಶಾಸಕರು
ಮಂಗಳೂರು- ಬೆಂಗಳೂರು ರಾ. ಹೆದ್ದಾರಿ ಕಾಮಗಾರಿ 8 ರಿಂದ 10 ವರ್ಷಗಳಿಂದ ನಡೆಯುತ್ತಿದೆ. ಎಲ್ಲೂ ಕಾಮಗಾರಿ ಪೂರ್ಣ ಎಂಬುದು ಆಗಿಲ್ಲ, ಕಲ್ಲಡ್ಕದಲ್ಲಿ ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ಬಂದಾಗ ಹಳ್ಳದಂತಾಗಿ ರಸ್ತೆಯಲ್ಲಿ ಕೆಸರು ತುಂಬಿಕೊಂಡಿದೆ. ಕಳೆದ ಏಳೆಂಟು ವರ್ಷದಲ್ಲಿ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಾಮಗಾರಿ ವೇಳೆ ಪೆರ್ನೆಯಲ್ಲಿ ಜನರಿಗೆ ತೊಂದರೆಯಾಗಿದೆ ಎಂಬ ದೂರುಗಳು ಬಂದಿದೆ. ಸ್ಥಳೀಯರನ್ನು ಕರೆಸಿ ಜೊತೆಗೆ ಇಂಜಿನಿಯರ್‌ಗಳನ್ನು ಕರೆಸಿ ಚರ್ಚೆ ಮಾಡಿದ್ದೇನೆ. ಸಂಪರ್ಕ ರಸ್ತೆಗಳನ್ನು ವ್ಯವಸ್ಥಿತವಾಗಿ ಮಾಡುವಂತೆ ಸೂಚನೆಯನ್ನು ನೀಡಿದ್ದೇನೆ. ಕೆಲವು ಕಡೆಗಳಲ್ಲಿ ಬಸ್ಸು ತಂಗುದಾನವನ್ನು ಒಡೆದು ಹಾಕಿದ್ದು ಅದು ಎಲ್ಲಿ ಬೇಕೋ ಅಲ್ಲಿ ನಿರ್ಮಾಣ ಮಾಡುವಂತೆ ತಿಳಿಸಿದ್ದೇನೆ. ತಡ ರಾತ್ರಿ ವೇಳೆ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿದ್ದಾರೆ ಎಂಬ ದೂರುಗಳು ಇದೆ, ರಾತ್ರಿ ವೇಳೆ ಯಾವುದೇ ಕಾರಣಕ್ಕೂ ಬಂಡೆ ಒಡೆಯದಂತೆ ತಿಳಿಸಿದ್ದೇನೆ. ಜನರಿಗೆ ಯಾವುದೇ ತೊಂದರೆ ನೀಡದಂತೆ ಖಡಕ್ ಸೂಚನೆಯನ್ನು ನೀಡಿದ್ದೇನೆ. ಜನರಿಗೆ ಯಾವುದೇ ರೀರಿಯ ತೊಂದರೆ ಆಗದಂತೆ ಕಾಮಗಾರಿಯನ್ನು ನಡೆಸುವಂತೆ ತಿಳಿಸಿದ್ದು ಆ ಪ್ರಕಾರ ಕಾಮಗಾರಿ ನಡೆಸಬೇಕು ಮತ್ತು ಕಾಮಗಾರಿಯಲ್ಲಿ ವೇಗತೆಯನ್ನು ಹೆಚ್ಚಿಸುವಂತೆ ಸೂಚಿಸಿದ್ದೇನೆ ಎಂದು ಶಾಸಕರು ತಿಳಿಸಿದರು.

ಪ್ರತಿಭಟನೆಯ ಎಚ್ಚರಿಕೆ
ಮುಂದಿನ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ಭಾರೀ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ. ಜನ ಹತ್ತು ವರ್ಷದಿಂದ ಏನೆಲ್ಲಾ ಕಷ್ಟ ನೋವನ್ನು ಕಾಮಗಾರಿಯಿಂದಾಗಿ ಅನುಭವಿಸಿದ್ದಾರೆ. ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನು ನೀಡಬೇಕಿದೆ. ಆದಷ್ಟು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಸೂಚನೆಯನ್ನು ನೀಡಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಮೆನೆಜರ್ ರಘುನಾಥ ರೆಡ್ಡಿ, ಇಂಜನಿಯರ್ ನವೀನ್, ಕ್ವಾಲಿಟಿ ಕಂಟ್ರೋಲರ್ ಶಿವಯೋಗಿ, ಸ್ಥಳೀಯರಾದ ಗ್ರಾಪಂ ಸದಸ್ಯರುಗಳಾದ ಫಾರೂಕ್ ಪೆರ್ನೆ, ಸುನಿಲ್‌ಪಿಂಟೋ, ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ಲ ಶಾಳಿ, ಕಾಂಗ್ರೆಸ್ ಮುಖಂಡ ಫಾರೂಕ್ ಬಾಯಬ್ಬೆ, ಕೋಡಿಂಬಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಉಮೇಶ್ ಬಾಕಿಮಾರ್, ಪುಷ್ಕರ ಪುಜಾರಿ, ಚೇತನ್ ಮಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here