ನೆಲ್ಯಾಡಿ: ಈ ಹಿಂದಿನಂತೆ ಬೆಳಗ್ಗೆ 7.15ಕ್ಕೆ ನೆಲ್ಯಾಡಿಯಿಂದ ಪುತ್ತೂರಿಗೆ ಸಂಚಾರ ಮಾಡುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಓಡಾಟ ಪುನರಾರಂಭಿಸುವಂತೆ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬರುತ್ತಿರುವ ನೆಲ್ಯಾಡಿ ಭಾಗದ ವಿದ್ಯಾರ್ಥಿಗಳು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಮಾಡಿದ್ದಾರೆ.
ನೆಲ್ಯಾಡಿಯಿಂದ ಪುತ್ತೂರಿಗೆ ಈಗ ಬೆಳಗ್ಗೆ 8.15ಕ್ಕೆ ಕೆಎಸ್ಆರ್ಟಿಸಿ ಬಸ್ಸು ಇದ್ದು ಈ ಬಸ್ಸು ಪುತ್ತೂರಿಗೆ ತಲುಪುವಾಗ 9.30 ಆಗುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ವಿದ್ಯಾಲಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ 7.15ಕ್ಕೆ ನೆಲ್ಯಾಡಿಯಿಂದ ಪುತ್ತೂರಿಗೆ ಕೆಎಸ್ಆರ್ಟಿಸಿ ಬಸ್ಸು ಓಡಾಟ ಇತ್ತು. ಆದರೆ ಈ ಬಸ್ಸು ಕೋವಿಡ್ ವೇಳೆ ಸ್ಥಗಿತಗೊಂಡಿದ್ದು ಬಳಿಕ ಓಡಾಟ ಪುನರಾರಂಭಗೊಂಡಿಲ್ಲ. ನೆಲ್ಯಾಡಿಯಿಂದ 7.15ಕ್ಕೆ ಪುತ್ತೂರಿಗೆ ಹೊರಡುವ ಬಸ್ಸು ಇದ್ದಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾಲಯಕ್ಕೆ ಹಾಜರಾಗಲು ಅನುಕೂಲವಾಗುತ್ತದೆ. ನೆಲ್ಯಾಡಿಯಿಂದ ಸುಮಾರು 30ರಿಂದ 40ವಿದ್ಯಾರ್ಥಿಗಳು ಪುತ್ತೂರಿನ ಬೇರೆ ಬೇರೆ ವಿದ್ಯಾಸಂಸ್ಥೆಗಳಿಗೆ ಬರುತ್ತಿದ್ದಾರೆ. ಇವರೆಲ್ಲರಿಗೂ ಅನುಕೂಲವಾಗುವಂತೆ ಬೆಳಿಗ್ಗೆ 7.15ಕ್ಕೆ ನೆಲ್ಯಾಡಿಯಿಂದ ಕೆಎಸ್ಆರ್ಟಿಸಿ ಬಸ್ಸು ಓಡಾಟಕ್ಕೆ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಶಾಸಕರು, ಚಾಲಕ ಮತ್ತು ನಿರ್ವಾಹಕರ ಆಯ್ಕೆಯಾದ ಕೂಡಲೇ ಬಸ್ಸಿನ ವ್ಯವಸ್ಥೆ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.