@ ವಿಶಾಲಾಕ್ಷಿ ಕೆ, ಶಿಕ್ಷಕರು ಸ.ಹಿ.ಪ್ರಾ ಶಾಲೆ ಆನಡ್ಕ
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
ಅಕ್ಕರೆಯ ತೈಲವನ್ನೆರೆದು ಜ್ಞಾನ ದೀವಿಗೆಯನ್ನು ಬೆಳಗಿ, ನನ್ನ ಜೀವನಕ್ಕೆ ಬೆಳಕು ತೋರಿ, ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟು, ಮತ್ತೆ ಅಕ್ಕರೆಯ ತೈಲವೆರೆಸಿ, ಕಿರು ಹಣತೆಗಳ ಬೆಳಗಲು ದಾರಿ ತೋರಿದ ಪರಬ್ರಹ್ಮ ಸ್ವರೂಪಿ ನನ್ನೆಲ್ಲ ಗುರುಗಳಿಗೆ ಸಾಷ್ಟಾಂಗ ನಮಿಸುತ್ತ, ಶಿಕ್ಷಕ ವೃತ್ತಿ ಬದುಕಿನ ಧನ್ಯತೆಯ ಅಭಿಮಾನವನ್ನು ಹಂಚಿಕೊಳ್ಳಬಯಸುತ್ತಿರುವೆನು.
ವೃತ್ತಿಗಳಲ್ಲಿ ಅತ್ಯಂತ ಗೌರವಾನ್ವಿತ ಮತ್ತು ತೃಪ್ತಿ ನೀಡಬಲ್ಲ ಹೆಮ್ಮೆಯ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಎಂದರೆ ತಪ್ಪಾಗಲಾರದು. ಏಕೆಂದರೆ ಉಳಿದೆಲ್ಲ ವೃತ್ತಿಗಳಲ್ಲಿರುವವರು ಕೇವಲ ಸಮಾಜದೊಡನೆ ಅಥವಾ ಯಾಂತ್ರಿಕ ಜಗತ್ತಿನಲ್ಲಿ ವ್ಯವಹರಿಸುತ್ತಿದ್ದರೆ, ಶಿಕ್ಷಕರು ಜೀವಂತ ದೇವರುಗಳೆಂಬ ಹೂ ಮನಸಿನ ಮಕ್ಕಳ ಜೊತೆ ಸದಾ ಸಂತೋಷದಿಂದಿರುವವರು. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ತುಂಬಾ ಭಾಗ್ಯವಂತರು ಎಂದೇ ಹೇಳಬಹುದು.
ಸುಮಾರು ಮೂರು ವರ್ಷದ ನಂತರ ಅಮ್ಮನ ಬೆಚ್ಚನೆಯ ಮಡಿಲಿನಿಂದ ಶಾಲೆ ಎನ್ನುವ ಹೊಸ ಪರಿಸರವನ್ನು ಕುತೂಹಲದಿಂದ, ಭಯದಿಂದ ಪ್ರವೇಶಿಸುವ ಮಗುವಿಗೆ ಅಲ್ಲಿನ ಶಿಕ್ಷಕಿಯೇ ಸರ್ವಸ್ವವಾಗಿ ಕಾಣುತ್ತಾಳೆ. ಅದು ತನ್ನ ತಾಯಿ ಸ್ವರೂಪವನ್ನು ಶಿಕ್ಷಕಿಯಲ್ಲಿ ಕಾಣುತ್ತಾ ತಾಯಿಯ ಮಮತೆಯನ್ನು ನಿರೀಕ್ಷಿಸುತ್ತಿರುತ್ತದೆ. ಆ ಸಮಯದಲ್ಲಿ ಶಿಕ್ಷಕರಾದ ನಾವು ಕೊಡುವ ಧೈರ್ಯ ಭರವಸೆ ಪ್ರೀತಿ ಕಾಳಜಿಯು ಮಗು ನಮ್ಮನ್ನು ಸದಾ ಅನುಕರಿಸುವಂತೆ ಮಾಡುತ್ತದೆ. ಒಮ್ಮೆ ಮಕ್ಕಳು ಶಿಕ್ಷಕರಡೆಗೆ ಆಕರ್ಷಿತರಾದರೆ ಮುಂದೆ ಅವರು ಶಿಕ್ಷಕರು ಕಲಿಸುವ ಯಾವುದೇ ವಿಷಯವನ್ನು ತುಂಬಾ ಇಷ್ಟಪಟ್ಟು ಮತ್ತು ಶ್ರದ್ಧೆಯಿಂದ ಕಲಿಯುತ್ತಾರೆ .
ಶಿಕ್ಷಕ ತನ್ನ ವೃತ್ತಿ ಜೀವನವನ್ನು ಪ್ರೀತಿಸಿದರೆ ಮಾತ್ರ ಅದು ಅವನಿಗೆ ಸಂತೃಪ್ತಿಯನ್ನು ನೀಡಬಲ್ಲದು. ಸಣ್ಣ ಸಣ್ಣ ಮಕ್ಕಳು ಶಿಕ್ಷಕರನ್ನು ಬಹಳಷ್ಟು ಹಚ್ಚಿಕೊಂಡಿರುತ್ತಾರೆ. ತರಗತಿಗೆ ಶಿಕ್ಷಕಿಯ ಬರುವಿಕೆಯನ್ನು ಕಾಯುವುದು, ಅವರ ಮಾತಿಗಾಗಿ ಹಾತೊರೆಯುವುದು, ಮುಕ್ತವಾಗಿ ಮತ್ತು ಮುಗ್ಧತೆಯಿಂದ ಮಾತನಾಡುವುದು, ಶ್ರದ್ದೆಯಿಂದ ಕೊಟ್ಟ ಕೆಲಸಗಳನ್ನು ಮಾಡುವುದು, ಶಿಕ್ಷಕರು ಶಾಲೆಗೆ ಬಾರದಿದ್ದಾಗ ಅವರ ಬಗ್ಗೆ ವಿಚಾರಿಸುವುದು, ಅನಾರೋಗ್ಯದ ಸಂದರ್ಭದಲ್ಲಿ ಮುಗ್ಧ ಕಾಳಜಿ ತೋರಿಸುವುದು, ಇವೆಲ್ಲವೂ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳು ಒಬ್ಬ ವಿದ್ಯಾರ್ಥಿ ಸ್ನೇಹಿ ಶಿಕ್ಷಕರಲ್ಲಿ ತೋರಿಸುವ ಉತ್ತಮ ಮೌಲ್ಯಗಳಾಗಿವೆ. ಹಾಗೆಯೇ ಒಬ್ಬ ಉತ್ತಮ ಶಿಕ್ಷಕನಾದವನಿಗೆ ಸಹ ಅವನದೇ ಆದ ಕರ್ತವ್ಯ ಪ್ರಜ್ಞೆಗಳಿರಬೇಕು. ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಕಾಳಜಿ, ಮಗುವಿನ ಕಲಿಕೆಯ ವೇಗ, ಅವನಲ್ಲಿರುವ ನ್ಯೂನತೆಗಳು, ಪರಿಹಾರ ನೀಡುವ ಪ್ರಯತ್ನ, ಮಗು ಮತ್ತು ಅವನ ಕೌಟುಂಬಿಕ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳುವುದು, ಅವನಲ್ಲಿ ಧನಾತ್ಮಕ ಅಂಶಗಳನ್ನು ಬೆಳೆಸುವುದು, ತಾಳ್ಮೆಗೆಡದೆ ಜಾಣ್ಮೆಯಿಂದ ತಿದ್ದುವುದು ಮತ್ತು ಅವನು ತನ್ನ ಜೀವನದ ದಾರಿಯಲ್ಲಿ ಉತ್ತಮನಾಗಿ ಸಾಗಲು ಮಾರ್ಗದರ್ಶಿಸುವುದು, ಸಮಾಜದಲ್ಲಿ ಅವನು ಒಬ್ಬ ಸತ್ಪ್ರಜೆಯಾಗಿ, ಸ್ವಾವಲಂಬಿ ದೇಶಪ್ರೇಮಿಯಾಗಿ ಬದುಕು ಕಟ್ಟಿಕೊಳ್ಳಲು ಅವಕಾಶಗಳನ್ನು ಸೃಜಿಸಬೇಕಾಗಿರುವುದು ಶಿಕ್ಷಕರಾದವರ ಆದ್ಯ ಕರ್ತವ್ಯವಾಗಿದೆ. ತಾನು ಉಣ್ಣುತ್ತಿರುವ ಪ್ರತಿ ಅನ್ನದ ಅಗುಳು ಕೂಡ ನನ್ನ ಶಾಲೆಯ ಮಕ್ಕಳ ಋಣವಾಗಿದೆ ಎಂಬುದನ್ನು ಮನಗಂಡು ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕಾಗಿದೆ.
ಶಿಷ್ಯನು ಗುರುವನ್ನು ಮೀರಿ ನಿಂತು ಬೆಳೆದಾಗ ಅವನಿಗೆ ಕಲಿಸಿದ ಗುರುಗಳೇ ಶ್ರೇಷ್ಠರು ಎನಿಸಿಕೊಳ್ಳುತ್ತಾರೆ. ಒಬ್ಬ ಉತ್ತಮ ಶಿಕ್ಷಕ ಸದಾ ಒಬ್ಬ ವಿದ್ಯಾರ್ಥಿಯಂತೆ ಅಧ್ಯಯನದಲ್ಲಿ ತೊಡಗಿರುತ್ತಾನೆ. ಶಿಕ್ಷಕನೊಬ್ಬ ಒಂದು ಉತ್ತಮ ಸಮಾಜವನ್ನು ಕಟ್ಟಬಲ್ಲ, ಹಾಗೆ ಆರೋಗ್ಯವಂತ ಸಮಾಜವನ್ನು ಕೆಡಿಸಲೂ ಬಲ್ಲ. ಏಕೆಂದರೆ ಶಿಕ್ಷಕ ಏನೇ ಮಾಡಿದರು ಅದು ಸಮಾಜದ ಒಳಿತಿಗಾಗಿಯೇ ಎನ್ನುವ ನಂಬಿಕೆ ಮತ್ತು ಸಮಾಜವು ಶಿಕ್ಷಕ ವೃತ್ತಿಗೆ ನೀಡಿದ ಗೌರವವಾಗಿದೆ. ಶಿಕ್ಷಕ ಕೇವಲ ಶಾಲೆಗಷ್ಟೇ ಸೀಮಿತವಾಗಿರದೆ ಆತ ಸುತ್ತಲಿನ ಸಮಾಜಕ್ಕೂ ಅನುಕರಣೀಯ ನಾಗಿರಬೇಕು. ಕೆಲವೊಂದು ಬಾರಿ ಒಂದೊಂದು ಅಪಶ್ರುತಿಗಳು ಇಡೀ ಶಿಕ್ಷಕ ಸಮುದಾಯಕ್ಕೆ ಕಪ್ಪು ಚುಕ್ಕಿಯನ್ನು ಉಂಟುಮಾಡುತ್ತದೆ. ಹೀಗಿರುವಾಗ ಶಿಕ್ಷಕ ತನ್ನ ವೈಯಕ್ತಿಕ ಬದುಕಿನಲ್ಲೂ, ವೃತ್ತಿ ಬದುಕಿನಲ್ಲೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾದುದು ಅತ್ಯಂತ ಗಮನಾರ್ಹ ವಿಷಯವಾಗಿದೆ. ಶಿಕ್ಷಕನೊಬ್ಬ ಕೇವಲ ಅಧ್ಯಾಪನವಲ್ಲದೆ, ಇಲಾಖೆಯ ಎಲ್ಲಾ ಆದೇಶಗಳನ್ನು ಪಾಲಿಸುತ್ತಾ, ಮಕ್ಕಳ ರಕ್ಷಕನಾಗಿ, ಪೋಷಕನಾಗಿ, ಭವ್ಯ ಭವಿಷ್ಯದ ನಿರ್ಮಾತೃವಾಗಿ, ಓರ್ವ ಜವಾಬ್ದಾರಿಯುತ ಹಾಗೂ ಗುರುತರ ಸ್ಥಾನದಲ್ಲಿದ್ದಾನೆ. ಇಂತಹ ಶಿಕ್ಷಕರನ್ನು ಇಂದಿನ ಶಿಕ್ಷಕರ ದಿನ ಮಾತ್ರವಲ್ಲದೆ ಜೀವನದುದ್ದಕ್ಕೂ ನೆನಪಿಸಿಕೊಳ್ಳಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ನಮ್ಮ ವಿದ್ಯಾರ್ಥಿಗಳು ಎಂದಾದರೊಂದು ದಿನ ತನ್ನ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಳ್ಳುವಾಗ ಅವರ ಸವಿ ನೆನಪಿನಂಗಳದಲ್ಲಿ ನಮ್ಮ ಹೆಸರು ಉಳಿದಿದ್ದರೆ ಅದೇ ನಮಗೆ ಸಿಗುವ ದೊಡ್ಡ ಬಹುಮಾನ. ಎಂದಾದರೂ ಒಮ್ಮೆ ಭೇಟಿಯಾದಾಗ ನಮ್ಮ ಜೊತೆ ಪ್ರೀತಿ ಇಟ್ಟು ಮಾತನಾಡಿದಾಗ ಅದೇ ನಮಗೆ ದೊಡ್ಡ ಸಂತೋಷ. ನಮ್ಮ ಮಕ್ಕಳು ಸಮಾಜದಲ್ಲಿ ಸತ್ಪ್ರಜೆಯಾಗಿ, ಸ್ವಾವಲಂಬಿ ಬದುಕನ್ನು ಸಾಗಿಸುವುದನ್ನು ಕಂಡಾಗ, ಯಾವ ಶಿಕ್ಷಕ ತಾನೇ ಹೆಮ್ಮೆಪಡುವುದಿಲ್ಲ? ನಮ್ಮ ಮಕ್ಕಳು ಚೆನ್ನಾಗಿರಬೇಕು, ಉನ್ನತ ವಿದ್ಯಾಭ್ಯಾಸ ಪಡೆಯಬೇಕು, ಉನ್ನತ ಹುದ್ದೆಗೇರಬೇಕು ಎಂಬುವುದೇ ಉತ್ತಮ ಶಿಕ್ಷಕನ ಮೂಲ ಮಂತ್ರವಾಗಿದೆ. ಎಂದಾದರೂ ಒಂದು ದಿನ ತನ್ನ ಇಂದಿನ ಉತ್ತಮ ಸ್ಥಿತಿಗೆ ದಾರಿದೀಪವಾದ ಎಲ್ಲಾ ಶಿಕ್ಷಕರನ್ನೊಮ್ಮೆ ಅವರು ಕೃತಜ್ಞತೆಯಿಂದ ಸ್ಮರಿಸಿಕೊಂಡಲ್ಲಿ ಅದರಲ್ಲಿ ನಮ್ಮ ಹೆಸರೂ ಸೇರಿಕೊಂಡಿದ್ದರೆ ನಮ್ಮ ಜೀವನ ಸಾರ್ಥಕವೇ ಸರಿ..
ಬದಲಾಗುತ್ತಿರುವ ಸಮಾಜದ ಸ್ಥಿತಿಗತಿಗಳು, ಮಾಧ್ಯಮಗಳ ಪ್ರಭಾವ, ದಾರಿ ತಪ್ಪುತ್ತಿರುವ ಯುವ ಪೀಳಿಗೆ, ದುಶ್ಚಟಗಳ ಪ್ರಭಾವ, ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ತೊಡಕುಗಳು, ಏಕಾಗ್ರತೆಯ ಕೊರತೆ, ಇವೆಲ್ಲವುಗಳ ಪ್ರಭಾವದಿಂದ ನಮ್ಮ ಮಕ್ಕಳನ್ನು ಎಚ್ಚರ ತಪ್ಪದಂತೆ ಜೋಪಾನವಾಗಿ ಕಾಪಾಡಿಕೊಂಡು ಬರುವುದು ಇಂದಿನ ಶಿಕ್ಷಕ ಸಮುದಾಯಕ್ಕೆ ಒಂದು ದೊಡ್ಡ ಸವಾಲಾಗಿ ನಿಂತಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮವಹಿಸಿ ಸ್ವಸ್ಥ ಸಮಾಜದ ನಿರ್ಮಾಣವೇ ನಮ್ಮೆಲ್ಲರ ಗುರಿಯಾಗಲಿ ಎಂಬುದೇ ನನ್ನ ಆಶಯ.