ಪುತ್ತೂರು : ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಪ್ರಯತ್ನಶೀಲತೆ ಇದ್ದರೆ ಏನನ್ನು ಸಾಧಿಸಬಹುದು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಕಲಾ ಚಟುವಟಿಕೆಗಳು ಮಕ್ಕಳಿಗೆ ಎಷ್ಟು ಖುಷಿ ನೀಡುತ್ತದೆಯೋ ಅಷ್ಟೇ ಪಾಲಕರಿಗೂ ಹಾಗೂ ಶಿಕ್ಷಕರಿಗೂ ಸಂತಸದ ವಿಷಯವಾಗಿರುತ್ತದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ ಹೇಳಿದರು.
ಅವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಸೆಪ್ಟೆಂಬರ್ 13ರಂದು ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾಮಟ್ಟದ ‘ಫಿಲೋ ಪ್ರತಿಭಾ – 2024’ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತವಾದ ವೇದಿಕೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ಫಿಲೋ ಪ್ರತಿಭಾ -2024’ ಪ್ರೌಢ ಶಾಲಾ ಮಕ್ಕಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ.ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ಏರ್ಪಡಿಸಿರುವ ಈ ‘ಫಿಲೋ ಪ್ರತಿಭಾ 2024’ ಕಾರ್ಯಕ್ರಮ ಮಕ್ಕಳ ಪ್ರತಿಭೆ ಬೆಳಕಿಗೆ ತರಲು ಸಹಕಾರಿಯಾಗಿದೆ. ಇದು ಇಷ್ಟಕ್ಕೆ ನಿಲ್ಲದೆ, ಶಿಕ್ಷಕರು ಹಾಗೂ ಪೋಷಕರು ಇದನ್ನು ಬೆಳೆಸುವತ್ತ ಗಮನ ನೀಡಬೇಕು. ಮಕ್ಕಳನ್ನು ವಿವಿಧ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹವನ್ನು ನೀಡಬೇಕು. ಅವಿರತ ಪ್ರಯತ್ನ ನಿಮ್ಮಲ್ಲಿರಲಿ ಎಂದು ಹೇಳಿದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ಟಾ , ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಡಾ. ಶ್ರೀ ಪ್ರಕಾಶ್ ಬಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ 28 ಪ್ರೌಢಶಾಲೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಸಪ್ರಶ್ನೆ, ಕನ್ನಡ ಹಾಗೂ ಇಂಗ್ಲಿಷ್ ವಿಚಾರ ಸಂಕಿರಣ, ಪೆನ್ಸಿಲ್ ಸ್ಕೆಚ್, ಮಣ್ಣಿನ ಮಾದರಿ ತಯಾರಿ, ವಿಜ್ಞಾನ ಮಾದರಿ ತಯಾರಿ, ಜಾನಪದ ಗಾಯನ ಸ್ಪರ್ಧೆ, ಕೊಲಾಜ್ ತಯಾರಿಕೆ, ಸ್ಟ್ಯಾಂಡ್ ಅಪ್ ಕಾಮಿಡಿ, ಜಾಹೀರಾತು ಸ್ಪರ್ಧೆ, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ , ಫೇಸ್ ಪೈಂಟಿಂಗ್ ಹಾಗೂ ನೃತ್ಯ ಸ್ಪರ್ಧೆ ಹೀಗೆ 13 ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ‘ಫಿಲೋ ಪ್ರತಿಭಾ 2024’ ಇದರ ನಿರ್ದೇಶಕಿ ಡಾ.ಆಶಾ ಸಾವಿತ್ರಿ ವಂದಿಸಿ, ಉಪನ್ಯಾಸಕರಾದ ವಿನೋಲಾ ಅಮಿತಾ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು.