ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು, ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಬೆಂಗಳೂರು ಹಾಗೂ ಸುದಾನ ಸಂಸ್ಥೆಗಳ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯು ಸೆಪ್ಟೆಂಬರ್. 17 ರಂದು ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸುದಾನ ಶಾಲಾ ಸಂಚಾಲಕ ರೆವ. ವಿಜಯ ಹಾರ್ವಿನ್ ರವರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ರಂಗಭೂಮಿಯ ಮೂಲಕ ಬೆಳೆಸುತ್ತಿರುವುದು ಪ್ರಶಂಸನೀಯ ಕಾರ್ಯ. ಸ್ಪರ್ಧೆಗಳು ಸಾಧನೆಗೊಂದು ದಾರಿ. ಇಂತಹ ಪ್ರಯೋಗಗಳು ವಿದ್ಯಾರ್ಥಿಗಳನ್ನು ವಿಜ್ಞಾನಿಯನ್ನಾಗಿಯೋ ಕಲಾವಿದನನ್ನಾಗಿಯೋ ರೂಪಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಈರುಳ್ಳಿಯ ದೀಪವನ್ನು ಬೆಳಗಿದಾಗ ಸುತ್ತುವರಿದಿದ್ದ ಸೊಳ್ಳೆಗಳು ದೂರ ಓಡುವ ನವೀನ ಮಾದರಿಯಲ್ಲಿ ವಿಜ್ಞಾನ ನಾಟಕದ ಉದ್ಘಾಟನಾ ಕಾರ್ಯಕ್ರಮವನ್ನು ರಂಗ ನಟನೆಯ ಮೂಲಕವೇ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವಿಜ್ಞಾನ ನಾಟಕದ ನೋಡೆಲ್ ಅಧಿಕಾರಿ DIET ನ ಚಂದ್ರಾವತಿ ಪಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಸುದಾನ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಸ್ವಾಗತಿಸಿ, ಸಂಯೋಜಕಿ ಪ್ರತಿಮಾ ವಂದಿಸಿದರು.ಸದಾಶಿವ ಭಟ್ ರವರು ಕಾರ್ಯಕ್ರಮ ನಿರೂಪಿಸಿ, ನಾಟಕ ಸ್ಪರ್ಧೆಯ ನೋಡಲ್ ಅಧಿಕಾರಿ DIETನ ಉಪನ್ಯಾಸಕಿ ವಿಜಯಲಕ್ಷ್ಮಿ, ಪುತ್ತೂರಿನ ಇಸಿಓ ಅಮೃತ ಕಲಾ, ತೀರ್ಪುಗಾರರಾದ ನಿರಂಜನ ಜೈನ ಮತ್ತು ದಿನೇಶ್ ಕುಂಪಲರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಂದೆ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬಂಟ್ವಾಳ ಎಸ್.ವಿ.ಎಸ್ ಪ್ರೌಢಶಾಲೆ ಪ್ರಥಮ ಬಹುಮಾನವನ್ನು, ಎಸ್.ಡಿ.ಎಂ ಪ್ರೌಢಶಾಲೆ ಧರ್ಮಸ್ಥಳ ದ್ವಿತೀಯ ಬಹುಮಾನವನ್ನು, ರೋಟರಿ ಪ್ರೌಢಶಾಲೆ ಮೂಡಬಿದ್ರೆ ತೃತೀಯ ಬಹುಮಾನವನ್ನು ಪಡೆದುಕೊಂಡಿವೆ. ಉತ್ತಮ ನಿರ್ದೇಶಕ ಮೋಹನ್ ಹೊಸ್ಮಾರು, ಉತ್ತಮ ನಾಟಕ ರಚನಕಾರ ಆಶಾ ಕುಮಾರಿ, ಉತ್ತಮ ನಟ ಜೀವನ್ ಜಿ ಬಾಳಿಲ, ಉತ್ತಮ ನಟಿ ಚಿನ್ಮಯಿ ರೈ ಧರ್ಮಸ್ಥಳ ಪಡೆದಿರುತ್ತಾರೆ.