ಸರ್ವರ ಸಹಕಾರದೊಂದಿಗೆ ದಂಪತಿಗೆ ಮನೆ ಹಸ್ತಾಂತರ
ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜ್ಜಾರಡ್ಕದಲ್ಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗವು ತನ್ನ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಯಿತು. ಅರಿಯಡ್ಕ ಗ್ರಾಮ ಪಂಚಾಯತ್ ಸಹಕಾರ ಸೇರಿದಂತೆ ಸರ್ವರ ಸಹಕಾರ ಪಡೆದುಕೊಂಡು ಮಕ್ಕಳಿಲ್ಲದ ದಂಪತಿಗಳಾದ ಭಾಗೀರಥಿ ಕಿಟ್ಟಣ್ಣ ರೈ ಸ್ವಾಮಿನಗರ ಇವರಿಗೆ ಮನೆಯೊಂದನ್ನು ನಿರ್ಮಿಸಿ ಕೊಟ್ಟು ಅದಕ್ಕೆ ಶ್ರೀ ವಿಷ್ಣು ಯುವಶಕ್ತಿ ನಿಲಯ ಎಂಬ ನಾಮಕರಣವನ್ನಿಟ್ಟು ಆ ಮನೆಯ ಹಸ್ತಾಂತರ ಮಾಡುವ ಕಾರ್ಯಕ್ರಮ ಅ.13ರಂದು ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗದ ಮಕ್ಕಳಿಂದ ಕುಣಿತ ಭಜನೆಯ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯಿತು. ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಮನೆಯ ನಾಮಫಲಕ ಅನಾವರಣದೊಂದಿಗೆ ಮನೆಯನ್ನು ಹಸ್ತಾಂತರವನ್ನು ಮಾಡಿದರು. ಬಳಿಕ ಮಾತನಾಡಿದ ಅವರು, ಶ್ರೀ ವಿಷ್ಣು ಯುವಜನ ಬಳಗವು ಯಾವುದೇ ರೀತಿಯ ಸ್ವಾರ್ಥವಿಲ್ಲದೆ ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿದೆ. ಶ್ರೀ ವಿಷ್ಣು ಯುವಶಕ್ತಿ ಬಳಗದಲ್ಲಿ ನಾನು ಒಬ್ಬ ಕಾರ್ಯಕರ್ತ ಎಂದು ಹೇಳಲು ಹೆಮ್ಮೆ ಇದೆ ಎಂದು ಹೇಳಿ ಶುಭ ಹಾರೈಸಿದರು.
ಯುವಜನ ಒಕ್ಕೂಟ ಮಂಗಳೂರು ಇದರ ಜಿಲ್ಲಾಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಯುವಜನ ಸಂಘಟನೆ ಎನ್ನುವುದು ವಿಭಿನ್ನ ರೀತಿಯಲ್ಲಿ ಕಾರ್ಯಗೈಯುತ್ತಿದೆ ಅದರಲ್ಲಿ ಒಂದಾದ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕವು ತಮ್ಮ ಕೈ ಮೀರಿ ಸಮಾಜ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ಸಂಘಟನೆಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷರಾದ ದಿನೇಶ್ ಸಾಲಿಯಾನ್,ಸಂಘಟನೆಯ ಗೌರವ ಸಲಹೆಗಾರದ ಮೋಹನ್‌ದಾಸ್ ರೈ ಕುಂಬ್ರ, ಕಿಶೋರ್ ಶೆಟ್ಟಿ ಅರಿಯಡ್ಕ, ಗಂಗಾರತ್ನ ಮತ್ತು ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷರಾದ ರಘುನಾಥ ಪೂಜಾರಿ ಗೋಳ್ತಿಲ ಉಪಸ್ಥಿತರಿದ್ದರು. ಸಂಪ್ಯ ಪೊಲೀಸ್ ಠಾಣೆಯ ಪ್ರವೀಣ್ ರೈ ನಡುಕೋಟೇಲು, ಅಭಿನವ ಕೇಸರಿ ಮಾಡಾವು ಇದರ ಮನೋಜ್ ರೈ ಮಾಡಾವು ಸೇರಿದಂತೆ ಹಲವು ಮಂದಿ ಆಗಮಿಸಿ ಶುಭ ಹಾರೈಸಿದರು. ಮನೆ ನಿರ್ಮಾಣ ಕಾರ್ಯಕ್ರಮದಲ್ಲಿ ಸಂಘಟನೆಯ ಮನೆ ಬೆಳಕು ಯೋಜನೆಯಲ್ಲಿ ದುಡಿದ ಶ್ರಮಜೀವಿಗಳಿಗೆ ಮತ್ತು ದಾನಿಗಳಿಗೆ ಈ ಸಂದರ್ಭದಲ್ಲಿ ಸ್ಮರಣಿಕೆ ಮತ್ತು ಶಾಲು ನೀಡಿ ಗೌರವಿಸಲಾಯಿತು. ಶೋಭಿತ ಭಂಡಾರಿ ಸ್ವಾಮಿನಗರ ಸ್ವಾಗತಿಸಿ, ವಂದಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭರತ್ ಪೂಜಾರಿ ಓಲ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಪದಾಧಿಕಾರಿಗಳು ಸಹಕರಿಸಿದ್ದರು.
ಕೆಸರುಡೊಂಜಿ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ
ಸಂಘಟನೆಯ ಆಶ್ರಯದಲ್ಲಿ ನಡೆದುಕೊಂಡು ಬರುತ್ತಿರುವ ಕೆಸರುಡೊಂಜಿ ದಿನದ 7 ವರ್ಷದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕೆಸರುಡೊಂಜಿ ದಿನ ಕಾರ್ಯಕ್ರಮ ನ.24 ರಂದು ಮಜ್ಜಾರಡ್ಕದಲ್ಲಿ ನಡೆಯಲಿದೆ. ಈಶ್ವರ್ ಮಲ್ಪೆ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್ ಸೇರಿದಂತೆ ಹಲವು ಮಂದಿ ಭಾಗವಹಿಸಲಿದ್ದಾರೆ. ವಿಜೆ ವಿಖ್ಯಾತ್ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮನೆ ನಿರ್ಮಾಣದಲ್ಲಿ ಕೈ ಜೋಡಿಸಿದರು
ಮನೆ ನಿರ್ಮಾಣದಲ್ಲಿ ಶ್ರೀ ವಿಷ್ಣುಯುವಶಕ್ತಿ ಬಳಗದ ಸದಸ್ಯರು ಒಟ್ಟು 45 ಚೀಲ ಸಿಮೆಂಟ್, ಹಳೆ ಮನೆ ಕೆಡವಲು ಹಾಗೂ ಪಾಯದ ಕೆಲಸಕ್ಕೆ ಶ್ರಮದಾನದ ಮೂಲಕ ಸಹಕಾರ, ಇದಲ್ಲದೆ ಓಲೆಮೊಂಡೋವು ಮೋಹನ್ ರೈ, ಶಾಸಕರಾದ ಅಶೋಕ್ ಕುಮಾರ್ ರೈ, ಸಮಿತ್ ಮಜ್ಜಾರ್,ಸಂದೇಶ್ ಕುಂಬ್ರ,ರಾಜೇಶ್ ಮಯೂರ, ಮನೋಜ್ ರೈ ಮಾಡಾವು, ಶಶಿಧರ ರೈ, ಎಸ್.ಬಿ.ಜಯರಾಮ ರೈ ಬಳಜ್ಜ, ಸದಾಶಿವ ಮಣಿಯಾಣಿ ಗೋಳ್ತಿಲ, ಭವಿತ್ ಕುಮಾರ್ ಪಾಲ್ತಾಡಿ,ಕೃಷ್ಣಪ್ಪ ತಿಂಗಳಾಡಿ, ಮೋಹನದಾಸ ರೈ ಕುಂಬ್ರ, ಮನಿತ್ ಕುಮಾರ್ ಹೊಸಮನೆ,
ಅಭಿನವ ಕೇಸರಿ ಮಾಡಾವು, ಸ್ವಸ್ತಿಕ್ ರಾಜ್ ರೈ ಕುಂಬ್ರ, ಕಸ್ತೂರಿ ಕೋಡಿಯಡ್ಕ, ಭವಿತ್ ರೈ ಬೆಂಗಳೂರು, ಸಂಪತ್ ಕೆಯ್ಯೂರು, ಪದ್ಮನಾಭ ಪೂಜಾರಿ ಪೆರ್ನೆ, ರಾಜೇಶ್ ಕಲ್ಲಡ್ಕ, ಮೋಹನ್ ಬಂಗಾರುಗುಡ್ಡೆ, ಲೋಕೇಶ್ ಸ್ವಾಮಿನಗರ,ಹರಿಣಾಕ್ಷಿ ಸ್ವಾಮಿನಗರ ಇದಲ್ಲದೆ ಎಂಡಿಎಸ್ ಪುತ್ತೂರು ಮತ್ತು ಜಗದೀಶ್ ಕೋಡಿಯಡ್ಕ ಸೌಂಡ್ಸ್ ಉಚಿತವಾಗಿ ನೀಡಿದ್ದರು. ವಾಸುಕಿಯ ದಿನೇಶ್ ಕೆಯ್ಯೂರು ಶಾಮೀಯಾನ ಉಚಿತವಾಗಿ ನೀಡಿದ್ದರು. ಇವರೆಲ್ಲರನ್ನು ಕೂಡ ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
‘ ಅರಿಯಡ್ಕ ಗ್ರಾಪಂನ ಸಹಕಾರದೊಂದಿಗೆ ಗೌರವ ಅಧ್ಯಕ್ಷರ ಮಾರ್ಗದರ್ಶನದೊಂದಿಗೆ ದಾನಿಗಳ ಸಹಕಾರ ಪಡೆದುಕೊಂಡು ಸಂಘಟನೆಯ ಎಲ್ಲಾ ಸದಸ್ಯರುಗಳ ಶ್ರಮದ ಮೂಲಕ ಮಕ್ಕಳಿಲ್ಲದ ದಂಪತಿಗಳಿಗೆ ಸಂಘಟನೆಯ ಯುವಕರು ಮಕ್ಕಳಂತೆ ನಿಂತು ಮನೆಯೊಂದನ್ನು ನಿರ್ಮಿಸಿ ಕೊಡುವ ಕೆಲಸ ಮಾಡಿದ್ದೇವೆ. ಸಂಘಟನೆಯೊಂದಿಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.’
ರಾಜೇಶ್ ಕೆ.ಮಯೂರ,( ಜಿಲ್ಲಾ ಪ್ರಶಸ್ತಿ ಪುರಸ್ಕೃತರು) ಸಂಘಟಕರು.