ಪುತ್ತೂರು: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ತಿಂಗಳಾಡಿ ಸಮೀಪದ ತ್ಯಾಗರಾಜ ನಗರದಲ್ಲಿ ಅ.23ರಂದು ರಾತ್ರಿ ನಡೆದಿದೆ. ಕೆದಂಬಾಡಿ ಗ್ರಾಮದ ಕನ್ನಡಮೂಲೆ ದಿ.ತಿಮ್ಮಪ್ಪ ಗೌಡರ ಪುತ್ರ ವನೀಶ್ ಎಂಬವರು ಗಾಯಗೊಂಡವರಾಗಿದ್ದಾರೆ. ತಿಮ್ಮಪ್ಪ ಗೌಡ ರವರು ಕೆಲವು ದಿನಗಳ ಹಿಂದೆ ನಿಧನ ಹೊಂದಿದ್ದು ಅವರ ಉತ್ತರಕ್ರಿಯೆ ಅ.24 ರಂದು ನಡೆಯಬೇಕಿದ್ದು ತಂದೆಯ ಉತ್ತರಕ್ರಿಯಾಧಿ ಕಾರ್ಯಕ್ರಮಕ್ಕೆ ಕೋಳಿ ಮಾಂಸ ತರಲು ವನೀಶ್ ರವರು ತನ್ನ ಪಲ್ಸರ್ ಬೈಕ್ ನಲ್ಲಿ ಕುಂಬ್ರಕ್ಕೆ ಬಂದಿದ್ದು ಕುಂಬ್ರದಿಂದ ತಿರುಗಿ ಮನೆಗೆ ಹೋಗುತ್ತಿದ್ದ ಸಂದರ್ಭ ಅಮೈ ತಿರುವಿನಿಂದ ಮುಂದಕ್ಕೆ ರಸ್ತೆ ಗುಂಡಿಗೆ ಬೈಕ್ ಬಿದ್ದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ದಾರಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವನೀಶ್ ರವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ರಸ್ತೆಯಲ್ಲೆ ಇದೆ ಸಾವಿನ ಗುಂಡಿ ?!
ಕುಂಬ್ರ ತಿಂಗಳಾಡಿ ರಸ್ತೆಯಲ್ಲಿ ಅಮೈ ತಿರುವಿನಿಂದ ಸ್ವಲ್ಪ ಮುಂದಕ್ಕೆ ರಸ್ತೆಯಲ್ಲೇ ಗುಂಡಿ ನಿರ್ಮಾಣಗೊಂಡಿದೆ. ರಸ್ತೆ ಬದಿಯ ಡಾಂಬರು ಸಂಪೂರ್ಣ ಕೊರೆದು ಹೋಗಿದ್ದು ಗುಂಡಿಯಾಗಿದೆ. ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಇದು ಸಾವಿನ ಗುಂಡಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು
ವನೀಶ್ ರವರು ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯಲ್ಲಿ ಬಿದ್ದಿದ್ದರು ಅವರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಯಾರೂ ಮುಂದಕ್ಕೆ ಬರಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದು, ಸುಮಾರು ಹೊತ್ತು ರಸ್ತೆ ಬದಿಯಲ್ಲೇ ಬಿದ್ದಿದ್ಜರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಅರಿಯಡ್ಕ ಗ್ರಾಪಂ ಸದಸ್ಯ ರಾಜೇಶ್ ಮಣಿಯಾಣಿ, ಹಿಂದೂ ಜಾಗರಣ ವೇದಿಕೆಯ ಅಶೋಕ್ ತ್ಯಾಗರಾಜ ನಗರ, ಶಮೀತ್ ರವರು ಸೇರಿಕೊಂಡು ಕೃಷ್ಣಪ್ಪ ಅಜಿಲರವರು ಓಮ್ನಿಯಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.