ಪುತ್ತೂರು: ಕಳೆದ 11 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವ ಕಾಣಿಯೂರು ಗ್ರಾಮದ ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 12ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಆಯ್ದ ಸ್ಥಳೀಯ ಆಟಗಾರರ ನಿಗದಿತ 12 ತಂಡಗಳ ಪ್ರೊ ವಾಲಿಬಾಲ್ ಪಂದ್ಯಾಟ ಮತ್ತು ಸ್ಥಳೀಯರಿಗೆ ಆಟೋಟ ಸ್ಪರ್ಧೆ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಅಶಕ್ತ ಬಡ ಕುಟುಂಬಗಳಿಗೆ ಸಹಾಯಧನ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅ.31ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯ ದಿನೇಶ್ ಮಾಲ ಅವರು ಮಾತನಾಡಿ ನಮ್ಮ ಸಂಘದಲ್ಲಿ ಸುಮಾರು 250 ಮಂದಿ ಸದಸ್ಯರಿದ್ದಾರೆ. ಸಮಾಜಕ್ಕೆ ಏನಾದರೂ ಕೊಡುವ ಉದ್ದೇಶದಿಂದ ಸಂಘ ವಿವಿಧ ಕಾರ್ಯಕ್ರಮ ಆಯೋಜಿಸುತ್ತದೆ. ಕಳೆದ 11 ವರ್ಷದಿಂದ ಸುಮಾರು ರೂ. 20ಲಕ್ಷದಷ್ಟು ನಾವು ಸಮಾಜಕ್ಕೆ ನೀಡಿದ್ದೇವೆ. ಈ ಭಾರಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 12 ತಂಡದ ಪ್ರೊ ಕಬಡ್ಡಿ ಪಂದ್ಯಾಟ ಮತ್ತು ವಿವಿಧ ಅಟೋಟ ಸ್ಪರ್ಧೆಗಳು ನಡೆಯಲಿದೆ. ಇದರ ಮೂಲಕ ಬಡ ಅಶಕ್ತ ಕುಟುಂಬಕ್ಕೆ ಮತ್ತು ಜೀರ್ಣೋದ್ದಾರಗೊಳ್ಳುತ್ತಿರುವ ಸ್ಥಳೀಯ ಭಜನಾ ಮಂದಿರಕ್ಕೆ ದೇಣಿಗೆ ನೀಡಲಿದ್ದೇವೆ. ಬೆಳ್ಳಾರೆ ಪೊಲೀಸ್ ಠಾಣೆಯ ಉಪನೀರಿಕ್ಷಕ ಈರಯ್ಯ ಡಿ.ಎನ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀಹರಿ ಭಜನಾ ಮಂಡಳಿಯ ಅಧ್ಯಕ್ಷ ಐ ನಾರಾಯಣ ಗೌಡ ಇಡ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀಹರಿ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ, ಡಿವೈಎಸ್ಪಿ ಅರುಣ್ ನಾಗೇಗೌಡ, ಸಮಾಜ ಸೇವಕ ರವಿ ಕಟಪಾಡಿ ಸಹಿತ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸನ್ಮಾನ:
ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೃಜನ್ ರೈ ಕೊಡ್ಡೊಳು ಮತ್ತು ತಿಲಕ್‌ಚಂದ್ರ ಜಾಲುಮನೆ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಜಯ್, ನಿವೃತ್ತಿ ಕೃಷಿ ಅಧಿಕಾರಿ ವಿಠಲ್ ರೈ ಪಿಜಕ್ಕಳ ದೋಳ್ಪಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾಣಿಯೂರು ಸ.ಪ್ರೌ.ಶಾಲೆಯ ಕಚೇರಿ ಸಹಾಯಕ ಕರಿಯಪ್ಪ ಮಾದೋಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚರಣ್ ಕಟ್ಟತ್ತಾರು, ಹರೀಶ್ ಕಾಯರ್ತಡ್ಕ, ದಿವಾಕರ ಮಠತ್ತಾರು, ಕ್ರೀಡಾಕೇತ್ರದ ಸಾಧಕ ಅಹಿಜಿತ್ ಕಟ್ಟತ್ತಾರು ಅವರನ್ನು ಸನ್ಮಾನಿಸಲಾಗುವುದು. 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬೊಬ್ಬೆಕೇರಿಯ ಸ.ಹಿ.ಪ್ರಾ.ಶಾಲೆಯ ಕು.ಹವ್ಯಶ್ರೀ ನಿಡ್ಡಾಜೆ, 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾಣಿಯೂರು ಸ.ಪ್ರೌ.ಶಾಲೆಯ ಕು.ಸಹನಾ ಪ್ರಭು ನೇರೋಳ್ತಡ್ಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ದಿನೇಶ್ ಮಾಲ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ರಾಧಾಕೃಷ್ಣ ಪೈಕ, ಅಧ್ಯಕ್ಷ ಹರೀಶ್ ಪೈಕ(ಕಟೀಲ್), ಪ್ರಧಾನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಸದ್ಯ ಅಶ್ವಿನ್ ಉಪಸ್ಥಿತರಿದ್ದರು.