ಪುತ್ತೂರು; ಆರೋಗ್ಯ ರಕ್ಷಾ ಸಮಿತಿ ಸಂಪ್ಯ, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ, ನವಚೇತನಾ ಯುವಕ ಮಂಡಲ ಶ್ರೀರಾಮನಗರ ಸಂಪ್ಯ ಇವುಗಳ ನೇತೃತ್ವದಲ್ಲಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿ ತಿಂಗಳು ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರ 32ನೇ ಶಿಬಿರವು ನ.3ರಂದು ನಡೆಯಲಿದೆ. ಈ ಭಾರಿಯ ಶಿಬಿರದಲ್ಲಿ ವಿಶೇಷವಾಗಿ ಕಣ್ಣಿನ ಉಚಿತ ತಪಾಸಣೆ ಹಾಗೂ ಚಿಕಿತ್ಸೆಗಳು ನಡೆಯಲಿದೆ.
ಕಳೆದ 31 ತಿಂಗಳುಗಳಿಂದ ದೇವಸ್ಥಾನದಲ್ಲಿ ಉಚಿತ ವೈದ್ಯಕೀಯ ಶಿಬಿರಗಳು ನಿರಂತರವಾಗಿ ನಡೆಯುತ್ತಿದೆ. ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಉಚಿತ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ. ಜನತೆಯ ಅಪೇಕ್ಷೆಯಂತೆ ಪ್ರತಿ ತಿಂಗಳು ಹೊಸ ಹೊಸ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ನಿರಂತರವಾಗಿ ಶಿಬಿರವು ಮುನ್ನಡೆಯುತ್ತಿದೆ. ತಪಾಷಣೆ, ಚಿಕಿತ್ಸೆ ಹಾಗೂ ಔಷಧಿಗಳು ಜನತೆಗೆ ಸುಲಭವಾಗಿ ಆಸ್ಪತ್ರೆಯ ಮಾದರಿಯಲ್ಲಿ ಒಂದೇ ಸೂರಿನಡಿಯಲ್ಲಿ ಉಚಿತ ಸೇವೆ ನೀಡಲಾಗುತ್ತಿದೆ.
ಈ ಬಾರಿಯ ಶಿಬಿರದಲ್ಲಿ ವಿಶೇಷವಾಗಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ವಿಭಾಗ) ಮಂಗಳೂರು, ಡಾ.ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ) ಸೆಂಚುರಿ ಗ್ರೂಪ್ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿರುವುದು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಆವಶ್ಯಕತೆಯಿರುವ ಬಗ್ಗೆ ವೈದ್ಯರು ಸೂಚಿಸುವ ಫಲಾನುಭವಿಗಳಿಗೆ ಮಂಗಳೂರಿನಲ್ಲಿ ಉಚಿತ ಪೊರೆ ಶಸ್ತ್ರ ಚಿಕಿತ್ಸೆಯೂ ನಡೆಯಲಿದೆ. ಉಳಿದಂತೆ ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಎಲುಬು ಮತ್ತು ಕೀಲು ತಪಾಸಣೆ, ಇ.ಓ.ಖಿ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಔಷಧಿಗಳ ಉಚಿತ ವಿತರಣೆ ನಡೆಯಲಿದೆ ಎಂದು ಆರೋಗ್ಯ ರಕ್ಷಾ ಸಮಿತಿ ಮತ್ತು ದೇವಸ್ಥಾನದ ಪ್ರಕಟಣೆ ತಿಳಿಸಿದೆ.