ಕನ್ನಡವನ್ನು ಉಳಿಸಿ ಬೆಳೆಸುವ ಮನಃಸ್ಥಿತಿ ಬೇಕು : ಡಾ.ಸುರೇಶ ನೆಗಳಗುಳಿ
ಪುತ್ತೂರು: ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನಿಗೂ ವೈಭವೋಪೇತವಾದ ಹಬ್ಬವಾಗಿ ಪರಿವರ್ತನೆಗೊಳ್ಳಬೇಕು. ಕನ್ನಡವನ್ನು ಮರೆತು ವ್ಯವಹರಿಸಬಾರದು. ಕನ್ನಡದ ಇತಿಹಾಸ, ವ್ಯಾಪ್ತಿ ಅತ್ಯಂತ ದೊಡ್ಡದೆಂಬುದನ್ನು ಮರೆಯಬಾರದು. ಕನ್ನಡವನ್ನು ಉಳಿಸಿ, ಬೆಳೆಸಿ, ಕೊಂಡಾಡುವ ಮನಃಸ್ಥಿತಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಮೂಲವ್ಯಾದಿ ಹಾಗೂ ಚರ್ಮರೋಗ ತಜ್ಞ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಡಾ.ಸುರೇಶ ನೆಗಳಗುಳಿ ಹೇಳಿದರು. ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ಸುಧಾರ್ಣವ ಸಾಂಸ್ಕೃತಿಕ ವೇದಿಕೆ ನೆಕ್ಲಾಜೆ ಹಾಗೂ ಕನ್ಯಾನದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮತ್ತೋರ್ವ ಅತಿಥಿ ಬಂಟ್ವಾಳ ತಾಲೂಕಿನ ವಿಶ್ರಾಂತ ಕ್ಷೇತ್ರಶಿಕ್ಷಣಾಧಿಕಾರಿ ಶಂಕರನಾರಾಯಣ ಭಟ್ ಕಮ್ಮಜೆ ಮಾತನಾಡಿ, ಭಾಷಾ ಸೌಹಾರ್ದತೆಯನ್ನು ಕರಾವಳಿಯ ಜನರಿಂದ ಕಲಿಯಬೇಕು. ಇಲ್ಲಿ ತುಳು ಹಾಗೂ ಕನ್ನಡ ಎರಡೂ ಭಾಷೆಗಳು ಜತೆ ಜತೆಯಾಗಿ ಸಾಗುತ್ತಿವೆ. ತುಳು ತಿಳಿದವನಿಗೆ ಕನ್ನಡದ ಅರಿವಿದೆ. ಕನ್ನಡ ಮಾತನಾಡುವವನಿಗೆ ತುಳು ಗೊತ್ತಿದೆ. ಇಂತಹ ಸಾಮರಸ್ಯ ಏರ್ಪಟ್ಟಾಗ ಭಾಷಾ ಸಂಘರ್ಷಗಳು ಕೊನೆಯಾಗುತ್ತವೆ. ಯಕ್ಷಗಾನ, ತಾಳಮದ್ದಳೆಗಳಲ್ಲಿ ಶುದ್ಧ ಕನ್ನಡ ಸಾಧ್ಯವಾಗುವುದಾದರೆ ನಿಜಬದುಕಿನಲ್ಲೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ಕವಿ, ಸಂಘಟಕ ನಾರಾಯಣ ಕೆ. ಕುಂಬ್ರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅವರು ಗುರುತಿಸುವವರಿದ್ದಾಗ ಮಾಡುವ ಕೆಲಸಗಳಿಗೆ ಮತ್ತಷ್ಟು ಪ್ರೇರಣೆ ದೊರಕುತ್ತದೆ. ಸಣ್ಣ ಸಣ್ಣ ಸಾಧನೆಗಳನ್ನೂ ಅಭಿನಂದಿಸುವ ಹಿರಿ ಮನಸ್ಸಿನ ವ್ಯಕ್ತಿಗಳು ಇರುವುದು ಅತ್ಯಂತ ಖುಷಿಯ ವಿಚಾರ ಎಂದರು. ಹಿರಿಯ ಕವಿ, ವಿಶ್ರಾಂತ ಶಿಕ್ಷಕ ಗುಣಾಜೆ ರಾಮಚಂದ್ರ ಭಟ್ ಸ್ವರಚಿತ ಕವನ ವಾಚಿಸಿ, ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಮಂಜುನಾಥ್ ಮಾತನಾಡಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮನಃಸ್ಥಿತಿ ಸಮಾಜದಲ್ಲಿ ಬೆಳೆಯಬೇಕಿದೆ. ಕನ್ಯಾನದಂತಹ ಸರ್ಕಾರಿ ಕನ್ನಡ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಾಗುತ್ತಿದೆ. ಅತ್ಯುತ್ತಮ ಶಿಕ್ಷಕರೂ, ವ್ಯವಸ್ಥೆಗಳೂ ಲಭ್ಯ ಇವೆ. ಹಾಗಾಗಿ ಹೆತ್ತವರಲ್ಲಿ ಈ ಕುರಿತಾದ ಜಾಗೃತಿ ಮೂಡಿಸಬೇಕಿದೆ ಎಂದು ನುಡಿದರು.
ಸುಧಾರ್ಣವ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಕಮ್ಮಜೆ ಸುಬ್ರಾಯ ಭಟ್, ಸದಸ್ಯ ಸುಬ್ರಹ್ಮಣ್ಯ ಭಟ್ ಮೂಡೋಡಿ, ಕನ್ಯಾನ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಕನ್ಯಾನದಲ್ಲಿ ಯಕ್ಷಗಾನ ಸಂಘಟಕರಾದ ಕಾರ್ಯನಿರ್ವಹಿಸುತ್ತಿರುವ ನಾರಾಯಣ ನಾಯಕ್ ಉಪಸ್ಥಿತರಿದ್ದರು.
ಸುಧಾರ್ಣವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ ಕಮ್ಮಜೆ ಸ್ವಾಗತಿಸಿ, ಕಾರ್ಯದರ್ಶಿ ರಾಕೇಶ ಕುಮಾರ್ ಕಮ್ಮಜೆ ವಂದಿಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರ್ವಹಿಸಿದರು. ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ವಿನುತಾ, ಶಿಕ್ಷಕರಾದ ಪ್ರದೀಪ್, ಚಂದ್ರಶೇಖರ್, ಸುಧಾರ್ಣವ ಸಾಂಸ್ಕೃತಿಕ ಸಂಘದ ಸದಸ್ಯೆ ಅನನ್ಯಾ ವಿ, ಸೃಜನಶೀಲ ಕೃಷಿಕ ಶ್ರೀನಿವಾಸ ಭಟ್ ಕಮ್ಮಜೆ, ಮಾ.ಋತುಪರ್ಣ ಸಹಕರಿಸಿದರು. ಕನ್ಯಾನದ ಕನಕದಾಸ ಎಂಬ ಬಿರುದು ಹೊಂದಿರುವ ಬಿ.ಆರ್.ಬಂಡಿತ್ತಡ್ಕ ಅವರಿಂದ ಕನ್ನಡ ಗಾಯನ ನಡೆಯಿತು.
ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಕನ್ಯಾನ ಗ್ರಾಮಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಧ್ವಜಾರೋಹಣಗೈದರು. ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈಯಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಂಗೀತ – ಭಾವಗೀತೆ ಕಾರ್ಯಕ್ರಮ ಹಾಗೂ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಯಿತು. ಸಂಗೀತ ಕಾರ್ಯಕ್ರಮದಲ್ಲಿ ಪಂಚಮಿ ಬಾಕಿಲಪದವು ಹಾಗೂ ವಿಧಾತ್ರಿ ಭಟ್ ಅಬ್ರಾಜೆ ಹಾಡುಗಾರರಾಗಿ ಸಹಕರಿಸಿದರೆ ಅಧ್ವೈತಕೃಷ್ಣ ಪುತ್ತೂರು ಮೃದಂಗ ನುಡಿಸಿದರು. ಕೃಷ್ಣಸಂಧಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಚೆಂಡೆವಾದಕರಾಗಿ ಐದನೇ ತರಗತಿಯ ಮಾ.ಅದ್ವೈತ್ ಹಾಗೂ ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು ಸಹಕರಿಸಿದರು. ಮುಮ್ಮೇಳದಲ್ಲಿ ಕೃಷ್ಣನಾಗಿ ವಿಜಯ ಶಂಕರ ಆಳ್ವ ಅಳಿಕೆ, ವಿಧುರನಾಗಿ ರಾಜಗೋಪಾಲ ಭಟ್ ಪೆರ್ನಡ್ಕ ಹಾಗೂ ಕೌರವನಾಗಿ ರಾಕೇಶ ಕುಮಾರ್ ಕಮ್ಮಜೆ ಪಾತ್ರ ನಿರ್ವಹಿಸಿದರು.