ಪುತ್ತೂರಿನ ಪಾಣಾಜೆ ನಿವಾಸಿ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಿದ ಬಂಟ್ವಾಳ ಪೊಲೀಸರು
ನಿಡ್ಪಳ್ಳಿ; ಕಳೆದ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಪುತ್ತೂರು ಪಾಣಾಜೆಯ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಉಡ್ಡಂಗಲ ನಿವಾಸಿ ಮೊಹಮ್ಮದ್ ಶರೀಫ್ (44) ಬಂಧಿತ ಆರೋಪಿ.
ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2004ರ ನ. 07ರಂದು ನಡೆದ ಕಳ್ಳತನ ಪ್ರಕರಣದಲ್ಲಿ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಕರ್ನಾಟಕದ ಹಲವೆಡೆ ಮತ್ತು ಕೇರಳ ರಾಜ್ಯದ ಹಲವಾರು ಕಡೆ ವಿಳಾಸ ಬದಲಾವಣೆ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ ಶರೀಫ್ ನನ್ನು ನ. 06 ರಂದು ಕೇರಳದ ಕಾಸರಗೋಡಿನಲ್ಲಿ ವಶಕ್ಕೆ ಪಡೆಯಲಾಗಿದೆ.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿಯು ಇತ್ತೀಚಿಗೆ ಕೊಲೆ ಪ್ರಕರಣ ಒಂದರಲ್ಲಿ ಕೇರಳದ ಮಂಜೇಶ್ವರ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಪೊಲೀಸ್ ಉಪ ಅಧೀಕ್ಷಕ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ್ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಹರೀಶ್ ಎಂ ಆರ್ ಮತ್ತು ಮೂರ್ತಿ, ಸಿಬ್ಬಂದಿಗಳಾದ ಹರಿಶ್ಚಂದ್ರ, ಗಣೇಶ ಅವರ ತಂಡ ಕಾರ್ಯಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.