ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ದರ್ಬೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಸಹಯೋಗದಲ್ಲಿ ಪ್ರೌಢಶಾಲಾ ವಿಭಾಗದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿ-2024 “ಫಿಲೋ ಅಮೃತ ಸಿಂಚನಾ” ನ.8ರಂದು ಸಂತ ಫಿಲೋಮಿನ ಅನುದಾನಿತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಈ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಹಾಗೂ ಜೀವನದಲ್ಲಿ ಸಾರ್ಥಕತೆಯ ಮೆಟ್ಟಿಲುಗಳನ್ನು ಏರಿ ಯಶಸ್ಸನ್ನು ಕಾಣುವಂತಾಗಲಿ ಎಂದು ಶುಭ ಹಾರೈಸಿದರು. ಪುತ್ತೂರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ ಮಾತನಾಡಿ ಸರ್ವರೂ ಪ್ರತಿಭೆಗಳಿಂದಲೇ ಕೂಡಿರುತ್ತಾರೆ.
ಈ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಬಹಳ ಸಂತೋಷದಿಂದ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಗುರು ಫಾ.|ಮ್ಯಾಕ್ಸಿಮ್ ಡಿಸೋಜ ಸ್ವಾಗತಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳಲು ಸೂಕ್ತವಾದ ವೇದಿಕೆ ಅಗತ್ಯ. ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕ್ಷೇತ್ರಸಂಪನ್ಮೂಲ ಕೇಂದ್ರದ ಸಂಯೋಜಕ ನವೀನ್ ವೇಗಸ್, ಪುತ್ತೂರು ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಮ್, ಪುತ್ತೂರು ವಲಯ ಪ್ರತಿಭಾ ಕಾರಂಜಿ ಸಂಯೋಜಕಿ ಅಮೃತ ಕಲಾ, ಸಿಅರ್ಪಿ ಶಶಿಕಲಾ, ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸೌಮ್ಯ ಭಟ್, ಪುತ್ತೂರು ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಸಂತ ಮೂಲ್ಯ, ಪ್ರಧಾನ ಮಂತ್ರಿ ಪೋಷಣ್ ಅಭಿಯಾನ್ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ಫಾ|ಮ್ಯಾಕ್ಸಿಮ್ ಡಿಸೋಜಾ ಅತಿಥಿ ಅಭ್ಯಾಗತರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಶಿಕ್ಷಕಿ ಮೋಲಿ ಪೆರ್ನಾಂಡಿಸ್ ವಂದಿಸಿದರು. ಶಿಕ್ಷಕಿ ಕಾರ್ಮಿನ್ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಲಘು ಉಪಹಾರ ಮತ್ತು ಮಧ್ಯಾಹ್ನ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಲೆಯ ವಿವಿಧ ಕೊಠಡಿಗಳಲ್ಲಿ ಸ್ಪರ್ಧೆಗಳು ನಡೆದವು.
ತೆಂಕಿಲ ವಿವೇಕಾನಂದ ಆ.ಮಾ.ಶಾಲೆ ಸಮಗ್ರ ಪ್ರಶಸ್ತಿ, ಕ.ಮಾ.ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ
ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪಡೆದುಕೊಂಡಿದೆ. ದ್ವಿತೀಯ ಸಮಗ್ರ ತಂಡ ಪ್ರಶಸ್ತಿಯನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪಡೆದುಕೊಂಡರು.