ಪುತ್ತೂರು:ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಹಾಗೂ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಬಂಟ್ವಾಳ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಬಂಟ್ವಾಳ ತಾಲೂಕಿನ ವಿವಿಧ ರೀತಿಯ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವು ನ.17ರಂದು ಪುಣಚ ಪರಿಯಾಲ್ತಡ್ಕ ಅನುದಾನಿತ ಹಿ.ಪ್ರಾ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಹಕಾರ ಸಪ್ತಾಹದ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ದ.ಕ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿಕ ಮಹಾಲಿಂಗ ನಾಯ್ಕ ಸಹಕಾರಿ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು. ಪರಿಯಾಲ್ತಡ್ಕ ಪೆಟ್ರೋಲ್ ಬಂಕ್ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯರಸ್ತೆಯಲ್ಲಿ ಸಾಗಿ ಸಮಾರಂಭದ ಶಾಲಾ ವಠಾರಕ್ಕೆ ಸಾಗಿ ಬಂತು. ಮಹಿಷಮರ್ದಿನಿ ಸಿಂಗಾರಿ ಮೇಳ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯು ಸಾಗಿಬಂತು. ನಂತರ ಸಹಕಾರಿ ಧ್ವಜಾರೋಹಣ ನೆರವೇರಿತು.
ಸಹಕಾರಿ ಸಪ್ತಾಹದ ಮೆರವಣಿಗೆಯನ್ನು ತೆಂಗಿನ ಕಾಯಿ ಒಡೆದು ಉದ್ಘಾಟಿಸಿದ ದ.ಕ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಗ್ರಾಮ ಭಾರತದ ಕಲ್ಪಣೆಯೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ಸಹಕಾರಿ ಸಂಘಗಳ ಮುಖಾಂತರ ಕಟ್ಟ ಕಡೆಯ ಜನತೆಗೆ ಸೇವೆ ನೀಡಲಾಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿನ ಪರಿವರ್ತನೆ ಜೀವನದ ಎಲ್ಲಾ ಆಯಾಮಗಳಿಗೆ ತಲುಪಬೇಕು. ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ದೊರೆಯಬೇಕು. ಸಹಕಾರಿ ಉದ್ಯಮದ ಮುಖಾಂತರ ಯುವಕರಿಗೆ ಉದ್ಯೋಗ ದೊರೆಯಬೇಕು. ಮೌಲ್ಯ ವರ್ಧನೆ, ತಾಂತ್ರಿಕ ಬದಲಾವಣೆಯಾಗುವ ಮುಖಾಂತರ ಸಹಕಾರಿ ಕ್ಷೇತ್ರವು ಕೈ ಜೋಡಿಸಬೇಕು. ದಕ್ಷ ಮತ್ತು ಪಾರದರ್ಶಕ ಆಡಳಿತ ನಡೆಸಿ ಜನ ಸಾಮಾನ್ಯರ ಬದುಕಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದ ಅವರು ಪುಣಚದಲ್ಲಿ ಸಹಕಾರ, ಶೈಕ್ಷಣಿಕ ಕ್ಷೇತ್ರ ಸಾಹಸಿಗಳಿದ್ದಾರೆ. ಪುಣಚದ ಸಹಕಾರಿ ಸಂಘವು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು.
ಸಹಕಾರಿ ಸಪ್ತಾಹವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಟಿ.ಜಿ ರಾಜಾರಾಮ್ ಭಟ್ ಮಾತನಾಡಿ, ಸಹಕಾರಿ ಕ್ಷೇತ್ರವು ಇದ್ದಂತೆ ಇರುವುದಲ್ಲ. ಬದಲಾವಣೆ ಆಗಬೇಕು. ಸಹಕಾರಿ ಕ್ಷೇತ್ರವು ಜೀವಂತವಾಗಿ ಉಳಿಯಬೇಕಾದರೆ ನಿತ್ಯ ಬದಲಾವಣೆಗಳು ಆವಶ್ಯಕ. ಬದಲಾವಣೆಗಳು ಆದಾಗ ಮಾತ್ರ ಸಾಧನೆಗೆ ಸಹಕಾರಿಯಾಗಲಿದ್ದು ಸಹಕಾರಿ ಕ್ಷೇತ್ರವು ಬದಲಾವಣೆಯ ಪರ್ವದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸಹಕಾರಿ ಇಲಾಖೆ ಸ್ಥಾಪಿಸಿದ ಬಳಿಕ ಸಾಕಷ್ಟು ಬದಲಾವಣೆ ಕಂಡಿದೆ. ಇಡೀ ರಾಷ್ಟ್ರಕ್ಕೆ ಸಾಮಾನ್ಯ ಬೈಲಾವನ್ನು ರಚಿಸಿದೆ. ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಸಾಲದ ಜೊತೆಗೆ ಕೃಷಿಯ ಹೊಸ ಆವಿಷ್ಕಾರಗಳು, ರಾಸಾಯನಿಕ ಗೊಬ್ಬರಗಳು, ಔಷಧಿಗಳ, ಗೋದಾಮ, ಮಾರುಕಟ್ಟೆಗಳ ಸಂಪೂರ್ಣ ಮಾಹಿತಿಗಳನ್ನು ಕಾಲ ಕಾಲಕ್ಕೆ ನೀಡಿದಾಗ ಸಹಕಾರಿ ಕ್ಷೇತ್ರವು ಬಹಳಷ್ಟು ಅರ್ಥಪೂರ್ಣವಾಗಲಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ದ.ಕ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷ ಬೆಳ್ಳೆಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಕೃಷಿಕರ ಸಹಕಾರಕ್ಕಾಗಿ ಸ್ಥಾಪನೆಗೊಂಡ ಸಹಕಾರಿ ಕ್ಷೇತ್ರವು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಸಹಕಾರ ನೀಡುತ್ತಿದೆ. ಸಹಕಾರಿ ಕ್ಷೇತ್ರಗಳ ನಿಯಮಗಳಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಕೃಷಿ, ಹೈನುಗಾರಿಕೆ ಸೇರಿದಂತೆ ಪ್ರತಿಯೊಬ್ಬರ ಅಭಿವೃದ್ಧಿಯಲ್ಲೂ ಸಹಕಾರ ನೀಡುತ್ತದೆ. ಸಮಾಜದಲ್ಲಿ ಯುವಕರು, ಮಹಿಳೆಯರು ಒಗ್ಗೂಡಿಸಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಬ್ಬದ ಮಾದರಿಯಲ್ಲಿ ಸಪ್ತಾಹ ಆಯೋಜಿಸಲಾಗುತ್ತಿದೆ ಎಂದರು. ಬಂಟ್ವಾಳ ತಾಲೂಕಿನಲ್ಲಿ ಸಹಕಾರಿ ಸಪ್ತಾಹವನ್ನು ಪುಣಚದಲ್ಲಿ ನಡೆಸುವಂತೆ ಸಹಕಾರಿ ಯೂನಿಯನ್ನ ಮನವಿಗೆ ಸ್ಪಂದಿಸಿ ಬಹಳಷ್ಟು ಅದ್ಧೂರಿಯಾಗಿ ಆಯೋಜಿಸಿದ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸಹಕಾರಿ ಕ್ಷೇತ್ರ ವ್ಯಾಪ್ತಿಯು ಇಂದು ದೇಶದಾದ್ಯಂತ ವಿಸ್ತಾರಗೊಂಡಿದೆ. ಹಲವು ರೀತಿಯ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಮಾಜದ ಬೆಳವಣಿಗೆಯಲ್ಲಿ ಸಹಕಾರ ನೀಡಿತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳ ಮಾದರಿಯಲ್ಲಿ ಸಹಕಾರಿ ಸಂಘಗಳು ಇಂದು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ತುರ್ತು ಸಂದರ್ಭದಲ್ಲಿ ಸುಲಭ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಯುವ ಜನಾಂಗ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮದ ಸಹಕಾರಿ ಸಂಘದಲ್ಲಿ ವ್ಯವಹರಿಸಿ ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಸಹಕಾರ ಭಾರತಿಯ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಸಹಕಾರಿ ಕ್ಷೇತ್ರವು ಪವಿತ್ರವಾದುದು. ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ಮಂಡಳಿ ರಚನೆಯಾಗಿ ಸಂಘಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಹಕಾರಿ ಕ್ಷೇತ್ರದ ಮುಖಾಂತರ ಭಾರತವು ಧರ್ಮಾದಾರಿತ ಜೀವನ ಪದ್ದತಿಯನ್ನು ಜಗತ್ತಿಗೆ ಕೊಡುಗೆ ನೀಡಿದೆ. ಎಲ್ಲಾ ಹಳ್ಳಿಗಳಲ್ಲಿಯೂ ಸಹಕಾರಿ ಸಂಘಗಳಿದ್ದು ಬಹಳಷ್ಟು ವಿಶ್ವಾಸನೀಯ ಸಂಸ್ಥೆಯಾಗಿದೆ. ಸಹಕಾರಿ ಕ್ಷೇತ್ರವು ದೇಶದ 5ನೇ ಅತೀ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದ್ದು ದೇಶದ ಜಿಡಿಪಿಯಲ್ಲಿ ಶೇ.25 ಸಹಕಾರಿ ಕ್ಷೇತ್ರದ ಪಾಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜನಾರ್ದನ ಭಟ್ ಅಮೈ ಮಾತನಾಡಿ, ಕ್ಯಾಂಪ್ಕೋದ ಪಿತಾಮಹ ವಾರಣಾಸಿ ಸುಬ್ರಾಯ ಭಟ್, ಮಾಜಿ ಅಧ್ಯಕ್ಷರಾದ ಎಸ್.ಆರ್ ರಂಗಮೂರ್ತಿ, ಎಸ್.ಆರ್ ಸತೀಶ್ಚಂದ್ರ, ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ, ಅಂತಾರಾಷ್ಟ್ರೀಯ ಸಂಶೋಧಕ ವಿಘ್ನೇಶ್ವರ ವರ್ಮುಡಿ ಸೇರಿದಂತೆ ಪುಣಚವು ಹಲವು ಸಹಕಾರಿಗಳ ತವರೂರಾಗಿದೆ. ನಮ್ಮ ಸಹಕಾರಿ ಸಂಘದ ಆಶ್ರಯದಲ್ಲಿ ಇದೀಗ ಮೂರನೇ ಬಾರಿಗೆ ಸಹಕಾರಿ ಸಪ್ತಾಹ ನಡೆಯುತ್ತಿದ್ದು ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿದೆ. ಸಹಕಾರಿ ಯೂನಿಯನ್ ಹಾಗೂ ಬಂಟ್ವಾಳ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಕಾರದಿಂದ ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಪದ್ಮಶೇಖರ ಜೈನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿತೇಮಠ, ಬಂಟ್ವಾಳ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ’ಸೋಜ, ಪುಣಚ ಗ್ರಾ.ಪಂ ಅಧ್ಯಕ್ಷೆ ಬೇಬಿ, ಕೇಪು ಗ್ರಾ.ಪಂ ಅಧ್ಯಕ್ಷ ರಾಘವ, ವಿಟ್ಲ ವಲಯ ಮೇಲ್ವಿಚಾರಕ ಯೋಗೀಶ್ ಹೆಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ:
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಶಶಿ ಕುಮಾರ್ ರೈ ಬಾಲ್ಯೊಟ್ಟು, ಟಿ.ಜಿ ರಾಜಾರಾಮ್ ಭಟ್, ಕೃಷಿ ಮತ್ತು ಉದ್ಯಮ ಕ್ಷೇತ್ರದಲ್ಲಿ ರವಿಶಂಕರ ಶಾಸ್ತ್ರೀ ಮಣಿಲ, ದ.ಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿ ಪುರಸ್ಕೃತ ಲಕ್ಷ್ಮಣ ಎಸ್., ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ. ತಿಮ್ಮಪ್ಪ ನಾಯ್ಕ, ದೈವ ನರ್ತಕ ಅಣ್ಣು ಅಜಿಲ, ಘನತ್ಯಾಜ ಘಟಕದ ವಾಹನ ಚಾಲಕರಾದ ಪುಣಚ ಗ್ರಾ.ಪಂನ ಉಷಾ, ಕೇಪು ಗ್ರಾ.ಪಂನ ಶಶಿಕಲಾರವರನ್ನು ಸಪ್ತಾಹ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರಂಜಿತಾ ಕಟ್ಟೆ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಜನಾರ್ದನ ಭಟ್ ಅಮೈ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ, ನಿರ್ದೇಶಕರಾದ ತಾರಾನಾಥ ಆಳ್ವ, ದಯಾನಂದ ಬಿ., ವಿಘ್ನೇಶ್ವರ ಯನ್., ಜಯರಾಮ ನಾಯ್ಕ, ಪ್ರವೀಣ ಪ್ರಭು ಡಿ., ಚಂದಪ್ಪ ನಾಯ್ಕ ಕೆ.ಪಿ., ಶ್ರೀಲತಾ ಬಿ., ಅಕೌಂಟೆಂಟ್ ಪದ್ಮನಾಭ ಗೌಡ, ಅಡ್ಯನಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಪುಣಚ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ರೈ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಿಬಂದಿ ಕವಿತಾ ಸುಬ್ಬ ನಾಯ್ಕ ಸನ್ಮಾನಿತರ ಪರಿಚಯ ಮಾಡಿದರು. ನಿರ್ದೇಶಕ ಬಾಲಚಂದ್ರ ಕಟ್ಟೆ ವಂದಿಸಿದರು. ರಾಮಕೃಷ್ಣ ಮೂಡಂಬೈಲು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಪೂಜಾರಿ ಹಾಗೂ ಸಿಬಂದಿಗಳು ಸಹಕರಿಸಿದರು.
ಸಹಕಾರಿ ಯೂನಿಯನ್ನ ಪದಾಧಿಕಾರಿಗಳು, ಬಂಟ್ವಾಳ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ನವೋದಯ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.