ಶಿಕ್ಷಕನಿಂದ ಸರಕಾರದ ಪಂಚ ಗ್ಯಾರಂಟಿ ಯೋಜನೆಯ ನಿಂದನೆ ಆರೋಪ: ಬಿಇಒಗೆ ದೂರು ನೀಡಿದ ಕಾವು ಹೇಮನಾಥ ಶೆಟ್ಟಿ

0

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ನಿಂದಿಸಿ ಪೋಸ್ಟ್ ಹಾಕಿದ್ದು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.


‌ಶಿಕ್ಷಕರಾದ ಹರಿಪ್ರಸಾದ್ ಎಂಬವರು ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಓರ್ವ ಶಿಕ್ಷಕನಾಗಿ ಮಕ್ಕಳಿಗೆ ಪಾಠ ಮಾಡಬೇಕಾದವರು ರಾಜಕೀಯ ದುರುದ್ದೇಶದಿಂದ ಸಾಮಾಜಿಕ ತಾಣದಲ್ಲಿ ಸರಕಾರವನ್ನು ಟೀಕಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಸರಕಾರದಿಂದ ಸಂಬಳ ಪಡೆದು ಅದೇ ಸರಕಾರದ ವಿರುದ್ಧ ಮಾತನಾಡುವ ಸರಕಾರಿ ನೌಕರ ಆ ಹುದ್ದೆಯಲ್ಲಿ ಮುಂದುವರೆಯಲು ಅರ್ಹನಲ್ಲ ಎಂದು ದೂರಿನಲ್ಲಿ ತಿಳಿಸಿದ್ದು ಶಿಕ್ಷಕನನ್ನು ಸಸ್ಪೆಂಡ್ ಮಾಡುವಂತೆ ಆಗ್ರಹಿಸಿದ್ದಾರೆ.

ಸರಕಾರಿ ನೌಕರರು ಯಾರೇ ಆಗಲಿ ಯಾವುದೇ ಸಚಿವರನ್ನಾಗಲಿ, ಶಾಸಕ,ಸಂಸದರನ್ನಾಗಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಯಾರನ್ನೂ ಟೀಕಿಸಬಾರದು ಮತ್ತು ಅವಹೇಳನ ಮಾಡುವುದ ಖಂಡನೀಯವಾಗಿದೆ. ರಾಜಕೀಯ ದುರುದ್ದೇಶದಿಂದ ಕೃತ್ಯ ಎಸಗಿದ ಶಿಕ್ಷಕನನ್ನು ಅಮಾನತು ಮಾಡಬೇಕು ಇಲ್ಲವಾದರೆ ಶಾಸಕರ ಮೂಲಕ ಸರಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದು ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here