ಕುಡಿಯುವ ನೀರಿನ ಸಮಿತಿ ಸಭೆ ನಡೆಸಿ ತಿಂಗಳೊಳಗೆ ಫಲಾನುಭವಿಗಳು ಬಿಲ್ ಪಾವತಿಸುವಂತೆ ಒತ್ತಾಯಿಸುವುದು.ಕಟ್ಟದಿದ್ದರೆ ಸಂಪರ್ಕ ಕಡಿತ ಗೊಳಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಣಯ
ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ನ.20 ರಂದು ನಡೆಯಿತು.ಕುಡಿಯುವ ನೀರಿನ ಮೀಟರ್ ರೀಡಿಂಗ್ ನಡೆಸಿ ಬಿಲ್ ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಯಿಂದ ಬಂದ ಸುತ್ತೋಲೆಯನ್ನು ಪಿಡಿಒ ಸಂಧ್ಯಾಲಕ್ಷ್ಮೀ ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ಚರ್ಚೆ ನಡೆಸಿದ ಸದಸ್ಯರು ಹೆಚ್ಚಿನ ಫಲಾನುಭವಿಗಳು ನೀರಿನ ಬಿಲ್ ಪಾವತಿ ಮಾಡುತ್ತಿಲ್ಲ. ಕೆಲವರು ಮಾತ್ರ ಪಾವತಿ ಮಾಡುತ್ತಿದ್ದಾರೆ.ಇದರಿಂದ ವಿದ್ಯುತ್ ಬಿಲ್ ಕಟ್ಟಲು ಮತ್ತು ದುರಸ್ತಿ ನಿರ್ವಹಣೆ ಬಹಳ ಕಷ್ಟವಾಗುತ್ತಿದೆ ಎಂಬ ಬಗ್ಗೆ ಚರ್ಚೆ ನಡೆದು ನೀರಿನ ಸ್ಥಾವರದ ವ್ಯಾಪ್ತಿಯಲ್ಲಿ ಆಯಾ ಸಮಿತಿಯ ಸಭೆ ಕರೆದು ಬಿಲ್ ಕಟ್ಟುವಂತೆ ಮನವರಿಕೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬರಲಾಯಿತು.ಆದುದರಿಂದ ಡಿ.2 ರಂದು ಬೆಳಿಗ್ಗೆ ಕುಡ್ಚಿಲ- ಬಾರೆತ್ತಡ್ಕ ಮತ್ತು ಮಧ್ಯಾಹ್ನ ನಂತರ ನೀರುಕ್ಕು- ಚೂರಿಪದವು ಸ್ಥಾವರದ ವ್ಯಾಪ್ತಿಯ ಸಮಿತಿ ಸಭೆ ಕರೆದು ಫಲಾನುಭವಿಗಳಿಗೆ ಬಿಲ್ ಕಟ್ಟುವಂತೆ ಮನವರಿಕೆ ಮಾಡುವುದು. ಬಿಲ್ಲು ಕಟ್ಟಲು ಒಂದು ತಿಂಗಳ ಕಾಲಾವಕಾಶ ನೀಡುವುದು ಆ ಮೇಲೂ ಬಿಲ್ ಕಟ್ಟದಿದ್ದರೆ ಅಂತವರ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಕೂಟೇಲು ಕುಕ್ಕುಪುಣಿ ರಸ್ತೆ ಅಗಲಗೊಳಿಸಿ ಡಾಮರೀಕರಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಬರೆಯಲು ನಿರ್ಧಾರ.ರೆಂಜದಿಂದ ಮುಡಿಪುನಡ್ಕ ಹೋಗುವ ಲೋಕೋಪಯೋಗಿ ರಸ್ತೆಯ ಕೂಟೇಲಿನಿಂದ ಕುಕ್ಕುಪುಣಿವರೆಗೆ ಸುಮಾರು ಒಂದು ಕಿಲೋಮೀಟರ್ ಉದ್ದ ರಸ್ತೆ ಬಹಳ ಕಿರಿದಾಗಿದ್ದು ರಸ್ತೆ ಅಗಲ ಗೊಳಿಸಿ ಅಭಿವೃದ್ಧಿ ಮಾಡಲು ಬಾಕಿ ಇದೆ ಎಂದು ಸದಸ್ಯ ಅವಿನಾಶ್ ರೈ ಸಭೆಯಲ್ಲಿ ಪ್ರಸ್ತಾಪಿಸಿದರು.ಮುಡಿಪುನಡ್ಕದಿಂದ ಕುಕ್ಕುಪುಣಿವರೆಗೆ ಅಗಲಗೊಳಿಸಿ ಡಾಮರು ಹಾಕಿ ಅಭಿವೃದ್ಧಿ ಗೊಳಿಸಲಾಗಿದೆ. ಆದರೆ ಬಾಕಿಯಾಗಿರುವ ರಸ್ತೆ ತೀರಾ ಕಿರಿದಾಗಿದೆ. ಅಲ್ಲದೆ ರಸ್ತೆ ಬದಿ ಮಳೆ ನೀರು ಹರಿದು ಗುಂಡಿ ಬಿದ್ದ ಕಾರಣ ಕೆ.ಎಸ್.ಅರ್.ಟಿ.ಸಿ ಬಸ್ ಇನ್ನೀತರ ಘನ ಗಾತ್ರದ ವಾಹನಗಳನ್ನು ಇಳಿಸಿ ಸೈಡ್ ಕೊಡಲು ಬಹಳ ಸಮಸ್ಯೆಯಾಗಿದೆ. ಆದುದರಿಂದ ತಕ್ಷಣ ಇಲಾಖೆ ಇದನ್ನು ಅಗಲಗೊಳಿಸಿ ಅಭಿವೃದ್ಧಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವಂತೆ ಅವರು ಹೇಳಿದಾಗ ಧ್ವನಿಗೂಡಿಸಿದ ಅಧ್ಯಕ್ಷರು ಮತ್ತು ಇತರ ಸದಸ್ಯರು ಸಮ್ಮತಿ ಸೂಚಿಸಿ ಪತ್ರ ಬರೆಯಲು ನಿರ್ಣಯಿಸಲಾಯಿತು.
ಗ್ರಂಥಾಲಯ ಸಲಹಾ ಸಮಿತಿ ರಚನೆಗೆ ಕ್ರಮ- ಪಂಚಾಯತ್ ನಲ್ಲಿರುವ ಗ್ರಂಥಾಲಯಗಳ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಲಹಾ ಸಮಿತಿ ರಚಿಸುವಂತೆ ಇಲಾಖೆಯಿಂದ ಬಂದ ಸುತ್ತೋಲೆ ಬಗ್ಗೆ ಪಿಡಿಒ ಸಭೆಯಲ್ಲಿ ಪ್ರಸ್ತಾಪಿಸಿದರು. ಸಮಿತಿಯಲ್ಲಿ ಪಂಚಾಯತ್ ಅಧ್ಯಕ್ಷರು ಅಧ್ಯಕ್ಷರಾಗಿದ್ದು ಶಾಲಾ ಮುಖ್ಯ ಗುರುಗಳು ಮತ್ತು ಪತ್ರಕರ್ತರು ಸದಸ್ಯರಾಗಿರುತ್ತಾರೆ ಎಂದು ಪಿಡಿಒ ತಿಳಿಸಿದರು.ಈ ಸಮಿತಿಯನ್ನು ರಚಿಸಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ದರಿಸಲಾಯಿತು.
ಉಪಾಧ್ಯಕ್ಷೆ ಸೀತಾ, ಸದಸ್ಯರಾದ ಅವಿನಾಶ್ ರೈ, ಸತೀಶ್ ಶೆಟ್ಟಿ, ಬಾಲಚಂದ್ರ ನಾಯ್ಕ, ನಂದಿನಿ ಅರ್.ರೈ, ಗ್ರೆಟಾ ಡಿ’ ಸೋಜಾ, ತುಳಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯಕುಮಾರಿ ಸಹಕರಿಸಿದರು.