VCET:ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನವಯುಗ್-2024

0

ಪುತ್ತೂರು: ನೀರು, ಭೂಮಿ, ಗಾಳಿ, ಆಕಾಶ ಮತ್ತು ಬೆಂಕಿ ಇದು ಪಂಚಭೂತಗಳು. ಆಕಾಶದಿಂದ ತೊಡಗಿ ಸ್ಥೂಲಗೊಳ್ಳುತ್ತಾ ಪೃಥ್ವಿಯವರೆಗೆ ಪಂಚಭೂತಗಳು ವಿಸ್ತರಿಸಿವೆ. ಜೀವಿಗಳ ಶರೀರಗಳೂ ಇದರಿಂದ ನಿರ್ಮಿತವಾಗಿವೆ. ಇವು ಸಹಕರಿಸದಿದ್ದರೆ ನಾವೆಷ್ಟು ಹೋರಾಡಿದರೂ ಏನನ್ನೂ ಸಾಧಿಸಲಾಗದು ಎಂದು ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನವಯುಗ್-2024 ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಜೀವನದಲ್ಲಿ ಸುಖ ದುಃಖಗಳನ್ನು ನಿರ್ಲಿಪ್ತತೆಯಿಂದ ಸ್ವೀಕರಿಸಬೇಕು ಇದಕ್ಕಾಗಿ ಶ್ರೀರಾಮನ ಆದರ್ಶವನ್ನು ಮೈಗೂಡಿಸಬೇಕು ಎಂದರು. ದುಶ್ಚಟಗಳಿಗೆ ದಾಸರಾಗದೆ ಇತರರಿಗೆ ದಾರಿದೀಪವಾಗಿ ಸಮಾಜದ ಬದಲಾವಣೆಯ ಹರಿಕಾರರಾಗಬೇಕು ಎಂದು ನುಡಿದರು.


ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ನಮ್ಮ ಕಾಲೇಜು ಮಾತೃ ಸಂಸ್ಥೆಯ ಆಶಯಕ್ಕನುಗುಣವಾಗಿ ಬಹಳ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಲ್ಲಿ ಶಿಸ್ತಿಗೆ ಮತ್ತು ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಸ್ತು ಅನಿಸಿದರೂ ಮುಂದಿನ ಜೀವನಕ್ಕೆ ಇದು ದಾರಿದೀಪವಾಗುತ್ತದೆ ಎಂದರು.
ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಶುಭ ಹಾರೈಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ಅನೇಕ ಅಗ್ನಿಪರೀಕ್ಷೆಗಳನ್ನು ದಾಟಿ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಇಲ್ಲಿ ಬಂದಿದ್ದೀರಿ ಈ ನಾಲ್ಕು ವರ್ಷ ನಿಮ್ಮ ಬದುಕಿನ ನಿರ್ಣಾಯಕ ದಿನಗಳಾಗಿರುತ್ತವೆ ಎಂದರು. ಒಂದು ಕಡೆ ಕನಸುಗಳು ಇನ್ನೊಂದು ಕಡೆ ವಯೋಸಹಜ ಆಕರ್ಷಣೆಗಳು ನಿಮ್ಮ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಮನಸ್ಸಿನ ಈ ಕುರುಕ್ಷೇತ್ರ ಯುದ್ದದಲ್ಲಿ ಗೆದ್ದು ಪಾಂಡವರಾಗಲು ಪ್ರಯತ್ನಿಸಿ ಎಂದರು.


ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ತರಬೇತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಕಾಂಕ್ಷ್ ಸ್ವಾಗತಿಸಿ, ಅಶ್ವಿಜಾ ಪೈ ವಂದಿಸಿದರು. ಸಾಕ್ಷಿ.ಪಿ.ಶೆಟ್ಟಿ ಮತ್ತು ಜೀವಿತ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here