ಶಿಬಾಜೆ ಬರ್ಗುಳದಲ್ಲಿ ಕಾಣಿಸಿಕೊಂಡ ಕಾಡಾನೆ

0

ನೆಲ್ಯಾಡಿ: ಎರಡು ದಿನದ ಹಿಂದೆ ಶಿಶಿಲ ಗ್ರಾಮದ ಕಳ್ಳಾಜೆ ಎಂಬಲ್ಲಿ ಕಾಣಿಸಿಕೊಂಡ ಕಾಡಾನೆ ನ.23ರಂದು ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ನ.21ರಂದು ಬೆಳಿಗ್ಗೆ ಶಿಶಿಲ ಗ್ರಾಮದ ಕಳ್ಳಾಜೆ ನಿವಾಸಿ ವಸಂತ ಗೌಡ ಅವರು ತನ್ನಿಬ್ಬರು ಮಕ್ಕಳನ್ನು ಪೆರ್ಲ ಶಾಲೆಗೆ ಬಿಡಲು ಬೈಕ್‌ನಲ್ಲಿ ಸಂಚಾರ ಮಾಡುತ್ತಿದ್ದ ವೇಳೆ ಕಳ್ಳಾಜೆ ಸಮೀಪ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು ಅವರು ಬೈಕ್ ಬಿಟ್ಟು ಮಕ್ಕಳೊಂದಿಗೆ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದರು. ಈ ವೇಳೆ ಕಾಂಕ್ರಿಟ್ ರಸ್ತೆಗೆ ಬಿದ್ದು ವಸಂತ ಗೌಡ ಹಾಗೂ ಅವರ ಮಗ ಗಾಯಗೊಂಡಿದ್ದು ಕಾಡಾನೆ ಬೈಕ್ ಹಾನಿಗೊಳಿಸಿ ಮತ್ತೆ ಕಾಡಿನೊಳಗೆ ಹೋಗಿತ್ತು. ಇದೀಗ ನ.23ರಂದು ಸಮೀಪದ ಶಿಬಾಜೆ ಗ್ರಾಮದ ಬರ್ಗುಳ, ಪತ್ತಿಮಾರ್ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಪತ್ತಿಮಾರ್‌ನಲ್ಲಿ ಕೃಷಿಗೆ ಹಾನಿ:
ಶಿಬಾಜೆ ಗ್ರಾಮದ ಪತ್ತಿಮಾರು ನಿವಾಸಿ ರಾಘವೇಂದ್ರ ಅಬ್ಯಂಕರ್ ಎಂಬವರ ಕೃಷಿ ತೋಟಕ್ಕೆ ಕಳೆದ ರಾತ್ರಿ ಕಾಡಾನೆ ದಾಳಿ ನಡೆಸಿದ್ದು ಬಾಳೆ, ತೆಂಗು, ಅಡಿಕೆ ಗಿಡಗಳನ್ನು ಹಾನಿಗೊಳಿಸಿವೆ.

ಮೂರ‍್ನಾಲ್ಕು ಆನೆಗಳಿರುವ ಶಂಕೆ:
ಕಳೆದ ಕೆಲ ಸಮಯಗಳಿಂದ ಶಿಶಿಲ, ಶಿಬಾಜೆ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಪದೇ ಪದೇ ಕೃಷಿ ತೋಟಗಳಿಗೆ ದಾಳಿ ನಡೆಸಿ ಹಾನಿಗೊಳಿಸುತ್ತಿವೆ. ಶಿಬಾಜೆ ಗ್ರಾಮದ ಅಜಿರಡ್ಕ, ಪತ್ತಿಮಾರ್, ಪೆರ್ಗಾಜೆ, ಬರ್ಗುಳ ಮತ್ತು ಹತ್ತಿರದ ಶಿಶಿಲ ಗ್ರಾಮದ ಕಳ್ಳಾಜೆ ಹಾಗೂ ಇನ್ನಿತರ ಕಡೆಗಳಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳು ನಿರಂತರ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ನಾಶಗೊಳಿಸುತ್ತಿವೆ. ಶಿಬಾಜೆ, ಶಿಶಿಲ ಪರಿಸರದಲ್ಲಿ ಮೂರ‍್ನಾಲ್ಕು ಕಾಡಾನೆಗಳು ಬೀಡುಬಿಟ್ಟಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು ಇಲ್ಲಿಂದ ಕಾಡಾನೆಗಳ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here