ಉಪ್ಪಿನಂಗಡಿ: ಇಲ್ಲಿನ ಇಂಡಿಯನ್ ಸ್ಕೂಲ್ನಲ್ಲಿ ಶಾಲಾ 20 ವಾರ್ಷಿಕ ಹಬ್ಬ ‘ನಲಿವು-2024’ ನಡೆಯಿತು.
ಮುಖ್ಯ ಅತಿಥಿಗಳಾಗಿ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಗ್ರಾಮ ಆಡಳಿತಾಧಿಕಾರಿ ಶೈನಾಜ್, ಜನಪ್ರಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯೆ ಡಾ. ಖದೀಜಾರಶಾ, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ ಡಾ. ಶಾಮಿಲ್ ಅಬ್ಬಾಸ್ ಭಾಗವಹಿಸಿದ್ದರು.
ಡಾ. ಶಾಮಿಲ್ ಅಬ್ಬಾಸ್ ಮಾತನಾಡಿ, ಇಂಡಿಯನ್ ಸ್ಕೂಲ್ನ ತನ್ನ ಒಡನಾಟ, ತನ್ನ ಯಶಸ್ಸಿನಲ್ಲಿ ಇಂಡಿಯನ್ ಸ್ಕೂಲ್ನ ಪಾತ್ರದ ಬಗ್ಗೆ ತಿಳಿಸಿದರಲ್ಲದೆ, ನನ್ನ ಇಂದಿನ ಯಶಸ್ಸಿಗೆ ಸೂಕ್ತ ಅಡಿಪಾಯ ಇಲ್ಲಿನ ಎಲ್ಕೆಜಿ ಶಿಕ್ಷಕಿಯಾಗಿದ್ದ ಸ್ವರ್ಣಲತಾ ಟೀಚರ್ ಅವರಿಂದ ಸಿಕ್ಕಿದೆ. ಎಂದಿಗೂ ಗುರುಗಳ ಋಣ ಸಂದಾಯ ಮಾಡಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ಹಾಜಿ ಎಚ್. ಯೂಸುಫ್ ಮಾತನಾಡಿ, ಶಾಲಾ ವಾರ್ಷಿಕೋತ್ಸವವು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತೆಗೆಯಲು ಸೂಕ್ತ ವೇದಿಕೆಯಾಗಿದೆ ಎಂದರು.
20 ವರ್ಷಗಳ ಕಾಲ ಸ್ಥಾಪಕ ಶಿಕ್ಷಕಿಯಾಗಿರುವ ಸ್ವರ್ಣಲತಾ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಹಾಜಿ ಶುಕೂರು, ಕೋಶಾಧಿಕಾರಿ ಮುಹಮ್ಮದ್ ಮುಸ್ತಾಫ, ಕಮಿಟಿ ಸದಸ್ಯರಾದ ಹಾರೂನ್ ರಶೀದ್ ಅಗ್ನಾಡಿ , ಮಹಮ್ಮದ್ ಬಶೀರ್, ಇಬ್ರಾಹೀಂ ಆಚಿ, ಶಬೀರ್ ಕೆಂಪಿ, ತೌಸೀಫ್ ಯು.ಟಿ., ಇಸುಬು ಎನ್ಮಾಡಿಯವರು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲೆ ಸಂಶಾದ್ ಬೇಗಂ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲಾಕ್ಷಿ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.