ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಬಲೀಂದ್ರಪೂಜೆಯಂದು ಬಲಿಹೊರಟು, ಶ್ರೀದೇವರ ವರ್ಷದ ಪ್ರಥಮ ಸವಾರಿಯಾಗಿ ಪೂಕರೆ ಉತ್ಸವವು ಕಾರ್ತಿಕ ಮಾಸದ ಹಸ್ತಾ ನಕ್ಷತ್ರ ಒದಗುವ ನ.26 ರಂದು ಸಂಜೆ ವೈಭವದಿಂದ ನಡೆಯಿತು.
ನಂದಿ ಮುಖವಾಡ ಧರಿಸಿದ ದೈವ ಶ್ರೀ ದೇವರನ್ನು ಪೂಕರೆ ಕಟ್ಟೆಗೆ ಕರೆದುಕೊಂಡು ಬರುವುದೇ ವಿಶೇಷ. ಸಂಜೆ ಶ್ರೀ ದೇವರ ಬಲಿ ಹೊರಟು ದೇಗುಲದ ಪಶ್ಚಿಮ ದ್ವಾರದಿಂದ ರಾಜಮಾರ್ಗದಲ್ಲಿ ಭಂಡಾರದ ಬಿರುದಾವಳಿ, ಛತ್ರ ಚಾಮರ , ಬೇತಾಳ, ಹಸ್ರಕೊಡೆ, ದಂಡುಶಿಲಾಲು , ವಾದ್ಯ ಮೇಳ, ನಂದಿ ಮುಖವಾಡದ ದೈವದೊಂದಿಗೆ ನೇರವಾಗಿ ಪೂಕರೆ ಕಟ್ಟೆಗೆ ತೆರಳಿ, ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ಶ್ರೀ ದೇವರು ಕಟ್ಟೆಯಲ್ಲಿ ವಿರಾಜಮಾನರಾದರು. ವೇ ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು. ತಂತ್ರಿಯವರು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು. ಪ್ರಧಾನ ಅರ್ಚಕ ವೇ ಮೂ ವಿ.ಎಸ್. ಭಟ್ ಮೂಲನಾಗನದಲ್ಲಿ ತಂಬಿಲ ಸೇವೆ ನೆರವೇರಿಸಿದರು.
ಪೂಕರೆ ಸಿದ್ಧಪಡಿಸಿದ ಸ್ಥಳದಲ್ಲಿ ಪ್ರಾರ್ಥನೆ:
ಪೂಕರೆ ಸಿದ್ಧ ಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡ ಅವರ ನೇತೃತ್ವದಲ್ಲಿ ದೈವ ಮಧ್ಯಸ್ತ ನ್ಯಾಯವಾದಿ ಅವರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ಜೋಡು ಪೂಕರೆಯನ್ನು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಿದರು. ಬಳಿಕ ಪೂಕರೆ ಕಟ್ಟೆಯಲ್ಲಿ ಶ್ರೀದೇವರಿಗೆ ದೀವಟಿಕೆ ಪ್ರಣಾಮ್, ಕಟ್ಟೆಪೂಜೆ ನಡೆದು, ಬುಲೆಕಾಣಿಕೆಯನ್ನು ಸಂಪ್ರದಾಯದಂತೆ ಸೀಮಿತ ಭಕ್ತರಿಗೆ ಸೀಯಾಳ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ ನವೀನ್ ಭಂಡಾರಿ ಹೆಚ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ರವೀಂದ್ರ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ಶೇಖರ್ ನಾರಾವಿ, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಪೂಕರೆ ಕಟ್ಟೆಯ ಸೇವೆ ಮಾಡುತ್ತಿರುವ ಬಾಲಕೃಷ್ಣ ಪೈ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುಧಾಕರ್ ಶೆಟ್ಟಿಯವರ ಪತ್ನಿ ಗೀತಾ, ಪುತ್ರ ಅಭಿಜೀತ್, ನಗರಸಭಾ ಸದಸ್ಯರಾಗಿರುವ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ರಾವ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರತ್ನಾಕರ ನಾಕ್, ಶ್ರೀಧರ್ ಪಟ್ಲ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಡಾ. ಅಶೋಕ್ ಪ್ರಭು, ಪ್ರಧಾನ ಅರ್ಚಕ ವೇ ಮೂ ದಿವಾಕರ ಭಟ್, ದಾಮೋದರ್ ಭಂಡಾರ್‌ಕರ್, ಪ್ರವೀಣ್ ನಾಕ್ ಕೆಮ್ಮಾಯಿ, ಸುಧೀರ್ ನೋಂಡಾ, ಹರಿಪ್ರಸಾದ್ ನೆಲ್ಲಿಕಟ್ಟೆ, ಸುದರ್ಶನ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಶ್ರೀ ದೇವರು ದೇವಳದಿಂದ ಹೊರಡುವ ಸಂದರ್ಭ ಒಳಾಂಗಣದಲ್ಲಿ ಎರಡು ಬಲಿ ಉತ್ಸವ ಸುತ್ತು ಬಂದು ಹೊರಾಂಗಣದಲ್ಲಿ ಒಂದೂವರೆ ಸುತ್ತಿನೊಂದಿಗೆ ಪಶ್ಚಿಮ ದ್ವಾರದ ಮೂಲಕ ರಾಜಮಾರ್ಗದಲ್ಲಿ ಪೂಕರೆ ಕಟ್ಟೆಗೆ ನೇರವಾಗಿ ಬರುತ್ತಾರೆ. ಆಗ ಎಲ್ಲಿಯೂ ಆರತಿ ಸ್ವೀಕರಿಸದ ದೇವರು ಮರಳಿ ದೇವಸ್ಥಾನಕ್ಕೆ ಹೋಗುವ ದಾರಿಯುದ್ದಕ್ಕೂ ಭಕ್ತರಿಂದ ಆರತಿ ಸ್ವೀಕರಿಸುತ್ತಾರೆ. ಜೊತೆಗೆ ಪಶ್ಚಿಮದ್ವಾರದಿಂದಲೇ ಹೋರಾಂಗಣದ ಬಲಿ ಉತ್ಸವ ಸುತ್ತು ಪೂರ್ಣ ಮಾಡಿ ಒಳಾಂಗಣಕ್ಕೆ ತೆರಳುತ್ತಾರೆ.
ಪೂಕರೆ ಅಲಂಕಾರವೇ ವಿಶೇಷ
ಸಂಪ್ರದಾಯದಂತೆ ತೆಂಕಿಲದ ಮೋಂಟ ಮೊಗೇರ ಅವರ ಪುತ್ರರಾದ ಲೋಕೇಶ್ ಮತ್ತು ಲೋಹಿತ್ ಮತ್ತಿತರರು ಸೇರಿಕೊಂಡು ಪೂಕರೆ ನಡುತ್ತಾರೆ. ಇದಕ್ಕೂ ಮೊದಲು ಪೂಕರೆಯನ್ನು ಅಡಿಕೆ ಮರದ ಮತ್ತು ಬೆತ್ತವನ್ನು ಉಪಯೋಗಿಸಿ ಕಟ್ಟಲಾಗುತ್ತದೆ ಕೃಷ್ಣನಗರದ ಹರೀಶ್ ಆಚಾರ್ಯ ಅದನ್ನು ನಿರ್ಮಾಣ ಮಾಡಿದ ಬಳಿಕ ದೇವಿಪ್ರಸಾದ್ ಭಂಡಾರಿ ಅವರು ಕೇಪುಳ ಮತ್ತು ಪಾದೆ ಹೂವನ್ನು ಕದಳಿ ಬಾಳೆಗಿಡದ ನಾರಿನಿಂದ ಕಟ್ಟಿ ಪೂಕರೆಯನ್ನು ಶೃಂಗರಿಸುತ್ತಾರೆ. ಕೊನೆಗೆ ಎರಡು ಮಡಲಿನ ಸೂಟೆಯೊಂದಿಗೆ ಪೂಕರೆಯನ್ನು ’ಪೊಳಿಯೇ’ ಎಂದು ಘೋಷಣೆ ಹಾಕಿಕೊಂಡು ಪೂಕರೆ ಗದ್ದೆಗೆ ಕೊಂಡು ಹೋಗಿ ಅಲ್ಲಿ ಇರಿಸಲಾಗುತ್ತದೆ. ದೇವರಮಾರು ಗದ್ದೆಗೆ ಸುಂದರ, ವಸಂತ, ಚನಿಯ, ವಿಜಯ ಮತ್ತು ಬಾಕಿತಮಾರು ಗದ್ದೆಗೆ ದೇವಳದ ಉತ್ಸವ ಸೇವೆಯ ನೌಕರರು ಪೂಕರೆಯನ್ನು ಕೊಂಡೊಯ್ಯುವಲ್ಲಿ ಸಹಕರಿಸಿದರು.
ದೇವರಿಗೆ ಬುಲೆಕಾಣಿಕೆ ಸಮರ್ಪಣೆ
ಶ್ರೀ ದೇವರು ಪೂಕರೆ ಕಟ್ಟೆಯಲ್ಲಿ ಕುಳಿತ ಬಳಿಕ ದೇವರಿಗೆ ಬುಲೆಕಾಣಿಕೆ ಸಮರ್ಪಣೆ ಸಂಪ್ರದಾಯದಂತೆ ಎರಡರೆಡರಂತೆ ಸುಮಾರು 15 ಜೊತೆ ಸಿಯಾಳವನ್ನು ಪೂಕರ ಕಟ್ಟೆಯ ಮುಂದೆ ಆರಂಭದಲ್ಲಿ ಇರಿಸಲಾಗುವುದು. ಶ್ರೀ ದೇವರಿಗೆ ಮಂಗಳಾರತಿಯ ಬಳಿಕ ಎರಡು ಜೊತೆಯಿಂದ ಒಂದು ದೇವಳಕ್ಕೆ ಇನ್ನೊಂದು ದೇವಳದ ಆಡಳಿತ ಮಂಡಳಿ ಮತ್ತು ಮಾಜಿ ಸದಸ್ಯರಿಗೆ ಹಾಗು ಸೀಮಿತ ಭಕ್ತರಿಗೆ ನೀಡುವ ಸಂಪ್ರದಾಯ ನಡೆಯುವುದು ವಿಶೇಷ. ಇದೇ ಸಂದರ್ಭದಲ್ಲಿ ದೇವರ ಪ್ರಸಾದ ರೂಪದಲ್ಲಿ ಅಷ್ಟದ್ರವ್ಯವನ್ನು ಭಕ್ತರಿಗೆ ನಿತ್ಯ ಕರಸೇವಕರು ವಿತರಿಸುತ್ತಾರೆ.
ಒಂದು ದಿನ ಮುಂಚೆ ಭೂಮಿ ತಾಯಿಗೆ ಪೂಜೆ:
ನಂದಿ ಮುಖವಾಡದ ಬಸವ ಯಾನೆ ಎರುಕೋಲ ದೈವವನ್ನು ಸಾಲ್ಮರದ ಅರುಣ್ ಎಂಬವರು ಕಟ್ಟುತ್ತಾರೆ. ಅವರು ಒಂದು ದಿನ ಮುಂಚಿತವಾಗಿ ಮೂಲ ನಾಗಸನ್ನಿಧಿಯಲ್ಲಿ ಸಂಕಲ್ಪ ಮಾಡುವ ಕಾರ್ಯಕ್ರಮ ನಡೆಸುತ್ತಾರೆ. ನ.25ರಂದು ಸಂಜೆ ಮೂಲ ನಾಗ ಸನ್ನಿಧಿಯಲ್ಲಿ ನಾಗ ದೇವರಿ ಪೂಜೆಯ ಬಳಿಕ ಭೂಮಿ ತಾಯಿಗೆ ಮಾಡುವ ಪೂಜೆ ’ಕಂಡ ನಾಗಲ್ಪಿನ’ ಎಂಬ ಕ್ರಮವನ್ನು ಅವರ ಪುತ್ರ ಹಾರಾಡಿ ಶಾಲೆಯ 2ನೇ ತರಗತಿಯ ವಿದ್ಯಾರ್ಥಿ ಇಶೀರ್ ಎಸ್ ಅವರು ನೆರವೇರಿಸಿದರು.