ಉಪ್ಪಿನಂಗಡಿ: ಪುತ್ತೂರು ಶಾಸಕರ ಬಗ್ಗೆ ನಾವು ಅವಹೇಳಕಾರಿಯಾಗಿ ಮಾತನಾಡಿದ್ದೇವೆ ಎಂಬ ಆರೋಪವು ಸಂಪೂರ್ಣ ಸುಳ್ಳಾಗಿದ್ದು, ಶಾಸಕರ ಬಗ್ಗೆ ನಮಗೆ ಗೌರವವಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಮತ್ತು ಶಾಸಕರೊಳಗಿನ ವೈರುದ್ದ್ಯದಿಂದಾಗಿ ಅವರ ಭಾವನೆಗಳನ್ನು ನಾವಾಡಿದ್ದೇವೆ ಎಂದು ಸುಳ್ಳಾಗಿ ಆರೋಪಿಸಿ ದೂರು ಸಲ್ಲಿಸಲಾಗಿದೆ ಎಂದು ಹಿರೆಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ ಸ್ಪಷ್ಟನೆ ನೀಡಿದರು.
ಹಿರೇಬಂಡಾಡಿ ಗ್ರಾಮದ ಸಾಮಾನ್ಯ ಸಭೆಯಲ್ಲಿ ಪುತ್ತೂರು ಶಾಸಕರಿಗೆ ನಿಂದಿಸಲಾಗಿದೆ ಎಂದು ದೂರು ಸಲ್ಲಿಸಲಾದ ಸಂಬಂಧ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ನಲ್ಲಿ ಕಾಂಗ್ರೆಸ್ ಬೆಂಬಲಿತರೆನ್ನಲಾದ ಸದಸ್ಯೆಯೋರ್ವರಿಗೆ ಸಭಾ ನಡವಳಿಯ ಜ್ಞಾನದ ಕೊರತೆ ಇದೆ. ಸಭೆಯು ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದರೂ, ” ನಾನು ಅಧ್ಯಕ್ಷರಲ್ಲಿ ಮಾತನಾಡುತ್ತಿಲ್ಲ ಪಿಡಿಒ ನಲ್ಲಿ ಮಾತ್ರ ಮಾತನಾಡುತ್ತಿದ್ದೇನೆ” ಎಂದು ಚಿಕ್ಕ ಮಕ್ಕಳಾಟದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಲಭ್ಯ ಸಣ್ಣ ಅನುದಾನದಲ್ಲಿ ಗ್ರಾಮದ ಅತೀ ಅಗತ್ಯದ ಕಡೆಗೆ ಹೂಳು ತೆಗೆಯಲು ಅನುದಾನವಿರಿಸಿದರೆ, ನನ್ನ ವಾರ್ಡ್ ನಲ್ಲಿಯೂ ತೋಡು ಇದೆ ಅಲ್ಲಿಗೂ ಹೂಳು ತೆಗೆಯಲು ಅನುದಾನ ಕೊಡಿ ಎಂದು ಮನಸೋ ಇಚ್ಚೆ ವಾದಿಸುವ ಆ ಸದಸ್ಯೆ ಅನಗತ್ಯ ಶಾಸಕರನ್ನು ಎಳೆದುತಂದಾಗ ಶಾಸಕರು ಗ್ರಾಮಕ್ಕೆ ಈ ಒಂದುವರೆ ವರ್ಷದಲ್ಲಿ ಯಾವುದೇ ಅನುದಾನ ಕೊಟ್ಟಿಲ್ಲ ಎನ್ನುವುದನ್ನು ಗೌರವಪೂರ್ವಕವಾಗಿ ಹೇಳಿದ್ದೇವೆಯೇ ವಿನಹ , ಅವರು ದೂರಿನಲ್ಲಿ ಆಪಾದಿಸಿದಂತೆ ಏಕವಚನದ ಪದಗಳನ್ನು ಬಳಸಿ ಎಂದಿಗೂ ನಿಂದನೆ ಮಾಡಿಲ್ಲ. ಲಭ್ಯ ಅನುದಾನದಲ್ಲಿ ಗ್ರಾಮದ ಎಲ್ಲಾ ವಾರ್ಡ್ ಗಳಿಗೆ ಸ್ವಲ್ಪ ಸ್ವಲ್ಪ ಹಂಚುವ ಪರಿಪಾಠ ನಮ್ಮಲ್ಲಿ ಇಲ್ಲ. ಯಾವುದೇ ಕೆಲಸವಾದರೂ ಅದು ಪರಿಣಾಮಕಾರಿಯಾಗಬೇಕು. ಉಪಯೋಗವಾಗದ ರೀತಿಯಲ್ಲಿ ಹತ್ತು ಕೆಲಸ ಮಾಡಿದ್ದೇವೆ ಎನ್ನುವುದಕ್ಕಿಂತ ಉಪಯೋಗವಾಗುವ ಒಂದು ಕೆಲಸವಾದರೂ ಉತ್ತಮವಾಗಿ ಮಾಡಬೇಕೆಂಬ ನಿಲುವಿನಲ್ಲಿ ಪಂಚಾಯತ್ ಕಾರ್ಯನಿರ್ವಹಿಸುತ್ತಿದೆ ಎಂದರು.
ದೂರು ನೀಡಿರುವ ಸದಸ್ಯೆ ಪ್ರತಿನಿಧಿಸುವ ವಾರ್ಡಿನ ಹರಿನಗರ, ನಂದಿನಿ ನಗರ, ಅತ್ತಾಜೆ ಯಲ್ಲಿ ಕಳೆದ ಹತ್ತು ವರ್ಷದಲ್ಲಿ ಒಂದು ಕೋಟಿಗೂ ಮಿಗಿಲಾದ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಜಲಜೀವನ್ ಮಿಷನ್ , ರಸ್ತೆ ಯೋಜನೆಗಳನ್ನು ಅನುಷ್ಠಾನಿಸಲಾಗಿದೆ. ತಾರತಮ್ಯ ನಮ್ಮಿಂದಾಗಿಲ್ಲ. ಈ ಹಿಂದಿನ ಶಾಸಕರು ಕಾವೇರಿ ನಿಗಮದಿಂದ 25 ಲಕ್ಷ ರೂಪಾಯಿ ವೆಚ್ಚದ ಯೋಜನೆಯನ್ನು ಇದೇ ನಂದಿನಿ ನಗರಕ್ಕೆ ಮಂಜೂರುಗೊಳಿಸಿದ್ದು, ಸಿದ್ದರಾಮಯ್ಯ ಸರಕಾರ ಬಂದಾಕ್ಷಣ ಅದನ್ನು ಬ್ಲಾಕ್ ಮಾಡಿರುವುದೇಕೆ ಎಂದು ಪ್ರಶ್ನಿಸಿದ ಅವರು, ಪಂಚಾಯತ್ ಆಡಳಿತ ವ್ಯವಸ್ಥೆಯ ನಿಯಮಗಳನ್ನು ಅಧ್ಯಯನ ಮಾಡದೆ, ಗ್ರಾಮದ ಅಭಿವೃದ್ಧಿಯನ್ನು ಬದಿಗಿರಿಸಿ ವೃಥಾ ಸಂಘರ್ಷಕ್ಕೆ ಇಳಿಯುವ ನಡೆಯಿಂದ ಈ ಎಲ್ಲಾ ಗೊಂದಲಗಳು ನಡೆದಿದೆ. ನರೇಗಾದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶವಿದ್ದು, ಅದರ ಕಡೆಗೆ ಅವರ ಆಸಕ್ತಿ ಇಲ್ಲ. ನಾವು ಹೇಳಿದ್ದೇವೆ ಎಂದು ಸುಳ್ಳು ಆರೋಪ ಹೊರಿಸಿ ಅವರು ದೂರಿನಲ್ಲಿ ಶಾಸಕರ ಬಗ್ಗೆ ಬಳಸಿದ ಪದಗಳೇ ನಮಗೆ ನೋವು ತರಿಸುವಂತಿತ್ತು ಎಂದು ಹೇಳಿದ ಅವರು, ಸದ್ರಿ ದೂರು ಅರ್ಜಿಯಲ್ಲಿ ಉಲ್ಲೇಖಿಸಿದಂತೆ ಗ್ರಾ.ಪಂ. ಸಿಬ್ಬಂದಿಗಳ ಬಗ್ಗೆ, ಸದ್ರಿ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯವೈಖರಿಯ ಬಗ್ಗೆ ತಾಲೂಕು ಪಂಚಾಯತ್ ಆಡಳಿತ ಹಲವು ವರ್ಷಗಳಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸಿರುವುದು ಹಾಗೂ ಅಭಿನಂದಿಸಿರುವುದು ಅವರ ಉತ್ತಮ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ನಮ್ಮ ಗ್ರಾ.ಪಂ.ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾಗಲೀ, ಕಾರ್ಯದರ್ಶಿ ಮತ್ತು ಯಾವುದೇ ಸಿಬ್ಬಂದಿ ಅವರು ಕೊಟ್ಟಿರುವ ದೂರಿನಂತೆ ಯಾವುದೇ ರಾಜಕೀಯ ಪಕ್ಷದ ಪರವಾಗಲೀ, ಪಕ್ಷಪಾತರಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮಸ್ಥರ ಸಹಕಾರದೊಂದಿಗೆ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳು ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳ ಅಂಕಿ ಅಂಶಗಳೇ ಸಾಕ್ಷಿಯಾಗಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶಾಂಭವಿ, ಸದಸ್ಯರುಗಳಾದ ಹಮ್ಮಬ್ಬ ಶೌಕಲಿ ಅಲಿ, ಚಂದ್ರಾವತಿ, ಲಕ್ಷ್ಮೀಶ ನಿಡ್ಡೆಂಕಿ, ನಿತಿನ್ ತಾರಿಪಡ್ಪು ಉಪಸ್ಥಿತರಿದ್ದರು.