ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿ ಮಹೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಪೂರ್ಣ ಪ್ರಮಾಣದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಬುಧವಾರ ಭೇಟಿ ನೀಡಿದ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರೊಂದಿದೆ ಮಾತನಾಡಿ ಮಾಹಿತಿ ನೀಡಿದರು. ಚಂಪಾಷಷ್ಠಿ ಮಹೋತ್ಸವದ ಲಕ್ಷದೀಪೋತ್ಸವ ಹಾಗೂ ರಥೋತ್ಸವ ಸಂದರ್ಭದಲ್ಲಿ ಭಕ್ತರಿಗೆ ಅನುಕೂಲ ಆಗುವ ರೀತಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲೂ ಕೂಡ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು. ಕುಕ್ಕೆಗೆ ಆಗಮಿಸುವ ಭಕ್ತರಿಗೆ ಕ್ಷೇತ್ರದಲ್ಲಿ ಸಮರ್ಪಕವಾಗಿ ಪಾರ್ಕಿಂಗ್ ವ್ಯವಸ್ಥೆ, ಸೇರಿದಂತೆ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ದೇವಳದ ಆಡಳಿತ ಮಂಡಳಿ ಜೊತೆಗೂಡಿ ಕಾರ್ಯನಿರ್ವಹಿಸಲಿದೆ ಎಂದರು. ಜಾತ್ರೆ ಸಂದರ್ಭದಲ್ಲಿ ಸಮರ್ಪಕ ಪಾರ್ಕಿಂಗ್ ಹಾಗೂ ಭಕ್ತರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ವತಿಯಿಂದ ಕೆಲವೊಂದು ಸೂಚನೆ, ನಿಯಮಾವಳಿಗಳನ್ನು ನೀಡುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಭಕ್ತರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿಬೇಕು ಎಂದು ಎಸ್.ಪಿ.ಯತೀಶ್ ವಿನಂತಿಸಿದರು.
ಪರಿಶೀಲನೆ ನಡೆದಸಿದ ಎಸ್.ಪಿ.:
ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಎಸ್.ಪಿ. ಪಾರ್ಕಿಂಗ್ ಮತ್ತಿತರ ವಿಚಾರದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಯತೀಶ್ ಅವರು ಠಾಣೆಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಹಾಗೂ ಶೀಘ್ರ ಉದ್ಘಾಟನೆಗೊಳ್ಳಲಿರುವ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೊಸ ಕಟ್ಟಡವನ್ನು ವೀಕ್ಷಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಜೇಂದ್ರ, ಪುತ್ತೂರು ಡಿವೈಎಸ್ಪಿ ಡಾ.ಅರುಣ್ನಾಗೇಗೌಡ, ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಸುಬ್ರಹ್ಮಣ್ಯ ಎಸೈ ಕಾರ್ತಿಕ್ ಹಾಗೂ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.