ರಾಮಕುಂಜ: ಗ್ರಾಮ ವಿಕಾಸ ಸಮಿತಿ ರಾಮಕುಂಜ, ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಾಮಕುಂಜ, ಗ್ರಾಮ ಪಂಚಾಯತು ರಾಮಕುಂಜ, ಶಾರದ ಭಜನಾ ಮಂದಿರ ಶಾರದಾನಗರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಗೋಳಿತ್ತೊಟ್ಟು ವಲಯ ಮತ್ತು ಊರವರ ಸಹಯೋಗದೊಂದಿಗೆ ರಾಮಕುಂಜ ಅಮೈ ಕೆರೆಯಲ್ಲಿ ಗಂಗಾ ಆರತಿ ಡಿ.5ರಂದು ನಡೆಯಿತು.
ಮುಖ್ಯ ಅಭ್ಯಾಗತರಾಗಿದ್ದ ಗ್ರಾಮ ವಿಕಾಸ ಅಖಿಲ ಭಾರತ ಸಂಯೋಜಕರಾದ ಗುರುರಾಜ್ ಅವರು ಮಾತನಾಡಿ, ಊರಿನ ಕೆರೆಯನ್ನು ಗಂಗೆಯ ಸ್ವರೂಪದಲ್ಲಿ ಕಂಡಿದ್ದೇವೆ. ಗಂಗಾ ಆರತಿ ವರ್ಷದ ಕಾರ್ಯಕ್ರಮ ಅಲ್ಲ, ದಿನ ದಿನದ ಕಾರ್ಯಕ್ರಮವಾಗಿದೆ. ಗಂಗೆ ಜೀವನಕ್ಕೆ ಆಧಾರವಾಗಿರುವ ಜೀವ ಜಲವಾಗಿದೆ. ನೀರಿನ ಆಶ್ರಯವಿದ್ದಲ್ಲಿಯೇ ನಾಗರಿಕತೆ ಬೆಳೆದಿದೆ. ನೀರಿಗೆ ನಾಗರೀಕತೆಯನ್ನು ಅರಳಿಸುವ ಶಕ್ತಿ ಇದೆ. ಈ ಕಾರಣಕ್ಕಾಗಿಯೇ ನೀರನ್ನು ಪೂಜಿಸುತ್ತೇವೆ ಎಂದು ಹೇಳಿದ ಅವರು ಕೆರೆಯ ಸಂರಕ್ಷಣೆ ಮಾಡುವ, ಆ ಮೂಲಕ ಪ್ರಕೃತಿಯ ಸಂರಕ್ಷಣೆ ಮಾಡುವ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಅವರು ಮಾತನಾಡಿ, ಹಿಂದೂ ಸಮಾಜದಲ್ಲಿ ಜಲದಲ್ಲೂ ದೇವರನ್ನು ಕಾಣುತ್ತೇವೆ. ಮನೆ ಮನೆಯಿಂದ ಜಲವನ್ನು ತಂದು ಕೆರೆಗೆ ಅರ್ಪಿಸಿ ಆರತಿ ಬೆಳಗಿಸಿದ್ದೇವೆ. ಇದೊಂದು ಪುಣ್ಯ ದಿನವಾಗಿದೆ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೋಳಿತ್ತೊಟ್ಟು ವಲಯ ಮೇಲ್ವಿಚಾರಕ ಜಯಶ್ರೀ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ 762 ಕೆರೆಗಳ ಪುನಶ್ಚೇತನ ಕೆಲಸ ನಡೆದಿದೆ. ಇದರಲ್ಲಿ ರಾಮಕುಂಜ ಗ್ರಾಮದ ಅಮೈ ಕೆರೆಯೂ ಸೇರಿದೆ ಎಂದರು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರ್ಷಿತ್ ನೇರೆಂಕಿ ದೇಶ ಭಕ್ತಿಗೀತೆ ಹಾಡಿದರು. ರಾಮಚಂದ್ರ ಹೂಂತಿಲ ಪ್ರಾರ್ಥಿಸಿದರು. ಗ್ರಾಮ ವಿಕಾಸ ಕಡಬ ತಾಲೂಕು ಸಂಯೋಜಕ ಜನಾರ್ದನ ಕದ್ರ ವಂದಿಸಿದರು. ಮಹೇಶ್ ಹಳೆನೇರೆಂಕಿ ನಿರೂಪಿಸಿದರು.
ಕೆರೆಗೆ ಆರತಿ:
ಅಮೈ ಕೆರೆಯ ಸುತ್ತ ಹಣತೆ ದೀಪ ಹಚ್ಚಲಾಯಿತು. ಗ್ರಾಮದ ಮನೆಯವರು ತಮ್ಮ ಮನೆಯಿಂದ 1 ಕಲಶ ನೀರು ತಂದು ಕೆರೆಗೆ ಅರ್ಪಿಸಿದರು. ಬಳಿಕ ಹಣತೆಯ ದೀಪದ ಬೆಳಕಿನಲ್ಲಿ ಅಮೈ ಕೆರೆಗೆ ಗಂಗಾ ಆರತಿ ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಅರ್ಚಕ ಶ್ರೀನಿಧಿ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.