*ಮಕ್ಕಳಲ್ಲಿ ಉತ್ತಮ ಸಂವಹನ ಕ್ರಿಯೆಯನ್ನು ಪೋಷಕರು ಕಲಿಸಬೇಕು-ತನುಜಾ ಝೇವಿಯರ್
*ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಪೋಷಕರು ಮಕ್ಕಳನ್ನು ಬೆಳೆಸಿ-ಭಾಗ್ಯೇಶ್ ರೈ
*ವಿದ್ಯೆಯನ್ನು ಕಲಿಯುತ್ತಾ ಹೋದಂತೆ ನಮ್ಮಲ್ಲಿ ವಿನಯತೆಯು ಇರಬೇಕು-ಮನೋಹರ್ ಕೆ
ಪುತ್ತೂರು: ಪೋಷಕರು ತಮ್ಮ ಮಕ್ಕಳಲ್ಲಿ ಹಿರಿಯರನ್ನು, ನೆರೆಹೊರೆಯವರನ್ನು, ಹೆತ್ತವರನ್ನು, ಗುರುಗಳನ್ನು ಹೇಗೆ ಮಾತನಾಡಿಸಬೇಕು ಎನ್ನುವ ಸಂವಹನ ಕ್ರಿಯೆಯ ಜೊತೆಗೆ ಅಶಕ್ತರಿಗೆ, ದುರ್ಬಲರಿಗೆ ಸಹಾಯಹಸ್ತ ನೀಡುವ ಕಲೆಯನ್ನು ಕೂಡ ಕಲಿಸುವಂತಾಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ತನುಜಾ ಝೇವಿಯರ್ರವರು ಹೇಳಿದರು.
ನೆಹರುನಗರದ ಸುದಾನ ವಸತಿಯುತ ಶಾಲೆಯಲ್ಲಿ ಡಿ.19ರಿಂದ 21ರ ವರೆಗೆ ನಡೆಯುವ ಶಾಲಾ ವಾರ್ಷಿಕೋತ್ಸವದ ಸಂದರ್ಭ ಡಿ.19ರಂದು ನಡೆದ ಶಾಲಾ ವಾರ್ಷಿಕೋತ್ಸವದ ಉದ್ಘಾಟನೆ, ಯು.ಕೆ.ಜಿ ಮಕ್ಕಳ ಘಟಿಕೋತ್ಸವ ಹಾಗೂ ಸಾಧಕರ ಪುರಸ್ಕಾರ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪೋಷಕರು ತಮ್ಮ ಮಕ್ಕಳ ಬಗೆಗಿನ ಸಣ್ಣ ಪುಟ್ಟ ದೂರುಗಳನ್ನು ತರಬೇಡಿ. ಇದರಲ್ಲಿ ಹಾಳಾಗುವುದು ತಮ್ಮ ಮಕ್ಕಳೇ ವಿನಹ ಅಧಿಕಾರಿಗಳಲ್ಲ, ಶಿಕ್ಷಕರು ಶಿಕ್ಷಣ ಸಂಸ್ಥೆಯಲ್ಲ. ಮಕ್ಕಳನ್ನು ಅಂಕಗಳ ಆಧಾರದಲ್ಲಿ ಅಳೆಯಬೇಡಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಲಿಸುವಿಕೆಯತ್ತ ಪ್ರೋತ್ಸಾಹಿಸಿ. ಮಾತು ಹಿತ, ಮಿತ, ಮತಿಯಿಂದ ಬಂದಿರಬೇಕೇ ವಿನಹ ಮತೀಯವಾಗಿ ಇರಕೂಡದು ಎಂದರು.
ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಪೋಷಕರು ಮಕ್ಕಳನ್ನು ಬೆಳೆಸಿ-ಭಾಗ್ಯೇಶ್ ರೈ:
ವಿದ್ಯಾಮಾತಾ ಅಕಾಡೆಮಿ ನಿರ್ದೇಶಕರಾದ ಭಾಗ್ಯೇಶ್ ರೈ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವರ್ಗದ ಮಕ್ಕಳಿದ್ದಾರೆ. ತಮ್ಮ ಮಕ್ಕಳನ್ನು ಶಿಕ್ಷಣ ಸಂಸ್ಥೆಗೆ ದಾಖಲು ಮಾಡಿದ ಬಳಿಕ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ಪೋಷಕರು ತಿಳಿಯಬಾರದು. ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸಬೇಕು ಹಾಗೂ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಪೋಷಕರು ಮಕ್ಕಳನ್ನು ಬೆಳೆಸಬೇಕು ಎಂದ ಅವರು ಪೋಷಕರು ತಮ್ಮ ಪ್ರೀತಿಯ ಧಾರಾವಾಹಿಗಳು, ಬಿಗ್ ಬಾಸ್ ಮುಂತಾದ ಕಾರ್ಯಕ್ರಮಗಳತ್ತ ಗಮನ ಕೊಡುವುದಕ್ಕಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬಾರದು. ಮಕ್ಕಳಿಗೆ ಬರೆಯುವುದನ್ನು, ಓದುವುದನ್ನು ಕಲಿಸುವಂತಾಗಬೇಕು. ಮಕ್ಕಳ ಎದುರು ಶಿಕ್ಷಣ ಸಂಸ್ಥೆಗಳ ಬಗ್ಗೆ ಅವಮಾನಿಸಬೇಡಿ. ಮುಂದೊಂದು ದಿನ ತಮ್ಮ ಮಕ್ಕಳಿಂದಲೇ ತೊಂದರೆ ಅನುಭವಿಸಬೇಕಾದಾಗ ಕಾಲ ಮಿಂಚಿ ಹೋಗಿರುತ್ತದೆ ಎಂದು ಅವರು ಹೇಳಿದರು.
ವಿದ್ಯೆಯನ್ನು ಕಲಿಯುತ್ತಾ ಹೋದಂತೆ ನಮ್ಮಲ್ಲಿ ವಿನಯತೆಯು ಇರಬೇಕು-ಮನೋಹರ್ ಕೆ:
ಸುದಾನ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮನೋಹರ್ ಕೆ. ಮಾತನಾಡಿ, ಹೆತ್ತವರ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ನಾವು ಸದಾ ಬೆಳೆಯುತ್ತೇವೆ. ವಿದ್ಯೆಯು ವಿನಯವನ್ನು ಕೊಡುತ್ತದೆ, ವಿನಯದಿಂದ ಅರ್ಹತೆ, ಜನರ ಪ್ರೀತಿ, ಸುಖವೂ ಪ್ರಾಪ್ತಿಯಾಗುತ್ತದೆ. ವಿದ್ಯೆಯನ್ನು ಕಲಿಯುತ್ತಾ ಹೋದಂತೆ ನಮ್ಮಲ್ಲಿ ವಿನಯತೆಯು ಇರಲೇಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರೆ|ವಿಜಯ ಹಾರ್ವಿನ್, ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಶಾಲಾ ಶೈಕ್ಷಣಿಕ ಸಲಹೆಗಾರ ಡಾ.ಮಾಧವ ಭಟ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ವಿನುತಾ ಶೆಟ್ಟಿ, ಸುರಕ್ಷಾ ಸಮಿತಿ ಅಧ್ಯಕ್ಷ ಮಾಮಚ್ಚನ್ ಎಂ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಬಳಗ ಪ್ರಾರ್ಥಿಸಿದರು. ಸಹ ಮುಖ್ಯ ಶಿಕ್ಷಕಿ ನವೀನ ರೋಸ್ಲಿನ್ ಹನ್ಸ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶೋಭಾ ನಾಗಾರಾಜ್ ವಾರ್ಷಿಕ ವರದಿ ಮಂಡಿಸಿದರು. ಕಿಂಡರ್ ಗಾರ್ಟನ್ ಶಿಕ್ಷಕಿ ಗ್ಲ್ಯಾಡೀಸ್ ಶರೋನ್, ಸಹ ಶಿಕ್ಷಕಿಯರಾದ ಸರಸ್ವತಿ ಎಂ.ಬಿ, ಗೀತಾ ಆಚಾರ್ಯ, ನಿರ್ಮಲ, ನಿವೇದಿತಾ ಭಟ್ರವರು ಕಿಂಡರ್ ಗಾರ್ಟನ್ ಪುಟಾಣಿಗಳ ಹಾಗೂ ಸಾಧಕ ವಿದ್ಯಾರ್ಥಿಗಳ ಹೆಸರನ್ನು ಓದಿದರು. ಶಿಕ್ಷಕಿ ಗಾಯತ್ರಿ ಕೆ ವಂದಿಸಿದರು. ಶಿಕ್ಷಕಿಯರಾದ ಶ್ಯಾಮಲ ಬಂಗೇರ ಹಾಗೂ ಜೀವಿತ ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಲಾತ್ಮಕ ವೇದಿಕೆಯ ಬಗ್ಗೆ..
ಹಿಂದೆ ಸುಖ-ಸೌಲಭ್ಯಗಳು ಕಡಿಮೆ ಇತ್ತು. ಜನಪದ ಸಂಸ್ಕೃತಿ ಇತ್ತು. ಜನರು ಕಷ್ಟ-ಸುಖದಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರೀತಿ-ವಿಶ್ಚಾಸವು ಜೀವಜಗತ್ತನ್ನು ಒಂದಾಗಿಸುತ್ತಿತ್ತು. ಆಧುನಿಕತೆಗೆ ಮನುಷ್ಯ ತೆರೆದುಕೊಳ್ಳುತ್ತಿದ್ದಂತೆ ಪ್ರಕೃತಿಯ ಮಹತ್ತ್ವವನ್ನು ಮರೆತುಬಿಟ್ಟ. ಪ್ರಾಕೃತಿಕ ಸಂಪನ್ಮೂಲಗಳೆಲ್ಲವೂ ತನ್ನ ಸುಖ-ಭೋಗಕ್ಕೆ ಇರುವುದೆಂದು ಭಾವಿಸಿದ್ದರಿಂದ ವಿನಾಶದತ್ತ ಸರಿಯುತ್ತಿದ್ದಾನೆ. ರೋಬೋಟ್,ಕೃತಕ ಬುದ್ಧಿಮತ್ತೆ, ಉಪಗ್ರಹಗಳಂಥ ನೂತನ ತಂತ್ರಜ್ಞಾನಗಳ ನಿರ್ಮಾತೃವಾಗಿದ್ದಾನೆ. ಆದರೆ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಭಾವವಿಲ್ಲದೆ ಬದುಕಿಲ್ಲ. ವಿಜ್ಞಾನವನ್ನು ಬದುಕಾಗಿಸಿಕೊಂಡ ಪರಿಣಾಮವಾಗಿ ಮನುಷ್ಯ ಯಾಂತ್ರಿಕವಾಗುತ್ತಿದ್ದಾನೆ. ಈ ಬದುಕು ಹೀಗೆಯೆ ಮುಂದುವರಿದರೆ ಮುಂದೇನು? ಹಳೆಯದನ್ನು ಕಡೆಗಣಿಸಿದ್ದಾಗಿದೆ, ಹೊಸದರಿಂದ ಬದುಕು ತಲ್ಲಣಗೊಂಡಿದೆ. ಮುಂದೆ ಯಾವುದನ್ನು ಅನುಸರಿಸಬೇಕು? ಈ ಚಿಂತನೆಯನ್ನು ವೀಕ್ಷಕರಲ್ಲಿ ಮೂಡಿಸುವಂಥ ಕಲಾತ್ಮಕ ವೇದಿಕೆಯನ್ನು ನಿರ್ಮಿಸಲಾಗಿತ್ತು.
ನಿಮ್ಮ ವಿಳಾಸವೇನು? ರೂಪಕ..
ಮನುಷ್ಯ ಪರಿಸರದ ಮಗು. ನೀರು, ಗಾಳಿ, ಭೂಮಿ, ಆಕಾಶ, ಅಗ್ನಿಗಳೆಂಬ ಪಂಚಭೂತಾತ್ಮಕವಾದ ಪ್ರಕೃತಿಯನ್ನು ಅವಲಂಬಿಸಿಯೇ ಅವನ ಜೀವಿತ. ನಾವು ಪಡೆಯುವ ಶಿಕ್ಷಣವು ಮನುಷ್ಯನಲ್ಲಿ ತನ್ನ ಅಸ್ತಿತ್ವದ ಅರಿವನ್ನು ಜಾಗೃತಗೊಳಿಸಬೇಕು. ಈ ಅರಿವು ನಮಗಿದೆಯೇ? ನಮ್ಮನ್ನು ಪೊರೆಯುವ ಈ ಭುವಿಯ ಬಗೆಗೆ ಒಂದರೆ ಕ್ಷಣವಾದರೂ ಯೋಚಿಸಿದ್ದೇವೆಯೇ? ನಮ್ಮ ನಿಜವಾದ ವಿಳಾಸ ಯಾವುದು?, ವೀಕ್ಷಕ ಬಂಧುಗಳೇ?, ಎಂಬ ಬಗ್ಗೆ ಶಿಕ್ಷಕಿ ಕವಿತಾ ಅಡೂರು ರಚನೆ ಹಾಗೂ ಪರಿಕಲ್ಪನೆಯ, ಸಹ ಶಿಕ್ಷಕಿ ಅನಿತಾರವರ ಗಾಯನ, ಕಲಾ ಶಿಕ್ಷಕ ಶಿವಗಿರಿ ಕಲ್ಲಡ್ಕರವರ ನಿರ್ದೇಶನ, ವಿದ್ಯಾರ್ಥಿಗಳಾದ ಧೃತಿ ಎಚ್ ರೈ, ಸಂಶ್ರುತ, ಅಕ್ಷರ ಕೆ.ಸಿ, ಕ್ಷಮ, ಲಾವ್ಯ ಮತ್ತು ಬಿಂದು ಅಭಿನಯದ ರೂಪಕ “ನಿಮ್ಮ ವಿಳಾಸವೇನು?” ಪ್ರಸ್ತುತಗೊಂಡಿತು.
ಇಂದು ಶಾಲೆಯಲ್ಲಿ..
ಡಿ.20ರಂದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕೋತ್ಸವವು ನಡೆಯಲಿದ್ದು, ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ.ವಾಸ್ತವಿ ಎಚ್.ಶೆಟ್ಟಿ ಮತ್ತು ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಮಾಸ್ಟರ್ ಅರ್ಮಾನ್ ರಿಯಾಜ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.