ಪುತ್ತೂರು : ಪುತ್ತೂರಿನ ಮುರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಕೆದಿಲ -ಮುರ ಸಂಪರ್ಕ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು ಇದರಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು ಸಾವು ನೋವುಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಮುರ ಜಂಕ್ಷನ್ ಬಳಿ ಡಿ.19ರಂದು “ಮುರ ನಾಗರಿಕ ಒಕ್ಕೂಟ”ದ ವತಿಯಿಂದ ಪ್ರತಿಭಟನೆ ನಡೆಸಿ, ಪುತ್ತೂರು ಸರ್ಕಲ್ ಇನ್ಸ್ಪೆಕ್ಟರ್ ಮೂಲಕ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದರು.
ಡಿ.19 ರಂದು ಮಧ್ಯಾಹ್ನ ಈ ಸ್ಥಳದಲ್ಲಿ ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ಪಡ್ನೂರು ಗ್ರಾಮದ ರಾಮನಗರ ನಿವಾಸಿ ಅಬ್ದುಲ್ ಕುಂಞ(66.ವ) ಎಂಬವರು ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು,19ರ ಸಂಜೆ ಪ್ರತಿಭಟನೆ ನಡೆಸಿ ಪರ್ಯಾಯ ವ್ಯವಸ್ಥೆಗೆ ಬೇಡಿಕೆ ಸಲ್ಲಿಸಿದ್ದಾರೆ.
ಅವೈಜ್ಞಾನಿಕ ರಸ್ತೆ ಕಾಮಾಗಾರಿಯಿಂದಾಗಿ ಇಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದೆ. ಇದರಿಂದ ಸಾವು ನೋವುಗಳು ಸಂಭವಿಸುತ್ತಿದೆ. ಜನರು ಜೀವಭಯದಿಂದ ಈ ರಸ್ತೆಯನ್ನು ಬಳಕೆ ಮಾಡುತ್ತಿದ್ದು ಮುರ ಪೇಟೆಗೆ ಬಂದವರು ವಾಪಸ್ಸು ಮನೆ ಸೇರುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಭಯಭೀತಿ ಈ ಸ್ಥಳದಲ್ಲಿ ಉಂಟಾಗಿದ್ದು, ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.