





ಪುತ್ತೂರು: ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ನ ವಾರ್ಷಿಕ ಪ್ರಶಸ್ತಿಗೆ ಪವರ್ ಟಿವಿಯ ಸಂಪಾದಕರಾಗಿರುವ ಪುತ್ತೂರಿನ ಸುರೇಶ್ ಎಂ ಆರ್. ಆಯ್ಕೆಯಾಗಿದ್ದಾರೆ.
ಪುತ್ತೂರು ಬೊಳುವಾರು ದಿ. ರಾಮಮೂರ್ತಿ ಮತ್ತು ದಿ. ಶಾರದಾರವರ ಪುತ್ರ ಸುರೇಶ್ ಎಂ.ಆರ್. ಅವರು 1994ರಿಂದ ವಿವಿಧ ಪತ್ರಿಕೆ ಮತ್ತು ಚಾನೆಲ್ ಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.


1994ರಲ್ಲಿ ಹೊಸದಿಗಂತ ಪತ್ರಿಕೆಯ ಮೂಲಕ ಪತ್ರಕರ್ತನಾದ ಸುರೇಶ್ ಎಂ. ಆರ್. ಹೊಸ ದಿಗಂತದಲ್ಲಿ ಕ್ರೀಡಾಪುಟದ ಮುಖ್ಯಸ್ಥರಾಗಿದ್ದರು. ಸಂಯುಕ್ತ ಕರ್ನಾಟಕದಲ್ಲಿ ಸಬ್ ಎಡಿಟರ್, ಈಟಿವಿಯಲ್ಲಿ ಬುಲೆಟಿನ್ ಪ್ರೊಡ್ಯೂಸರ್, ವಿಜಯ ಟೈಮ್ಸ್ ನಲ್ಲಿ ವರದಿಗಾರನಾಗಿದ್ದ ಇವರು ಟಿವಿ 9 ಕನ್ನಡ ಕಟ್ಟಿದ ಮೊದಲ ತಂಡದ ಸದಸ್ಯನಾಗಿದ್ದು ಅಲ್ಲಿ ಇನ್ ಪುಟ್ ಹೆಡ್ ಆಗಿದ್ದರು. ಕಸ್ತೂರಿ ವಾಹಿನಿಯಲ್ಲೂ ಇನ್ ಪುಟ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದರು. ತನ್ನ ನಿಷ್ಪಕ್ಷಪಾತ ನಿಲುವಿನ ಮೂಲಕ ಗುರುತಿಸಿಕೊಂಡ ಸುರೇಶ್ ಎಂ. ಆರ್. ಅವರು ಸಮಯ ಟಿವಿಯ ಸಂಪಾದಕರಾಗಿ ನಂತರ ಪ್ರಜಾ ಟಿವಿಯ ಸಂಪಾದಕರಾಗಿ ಬಳಿಕ ದಿಗ್ವಿಜಯ ನ್ಯೂಸ್ ಚಾನೆಲ್ ನ ಸಂಪಾದಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.





ಪುತ್ತೂರಿನ ಬೊಳುವಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೋರ್ಡ್ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣವನ್ನು ಪಡೆದಿದ್ದ ಸುರೇಶ್ ಎಂ.ಆರ್. ಉತ್ತಮ ಕ್ರಿಕೆಟ್ ಆಟಗಾರನಾಗಿದ್ದರು. ಸ್ಪೋರ್ಟ್ಸ್ ಕೋಟಾದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಪಡೆದ ನಂತರ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಇವರ ಸಹೋದರ ರಮೇಶ್ ಬಹರೇನ್ ನಲ್ಲಿ ಉದ್ಯೋಗದಲ್ಲಿದ್ದು ಮತ್ತೊಬ್ಬ ಸಹೋದರ ಹರೀಶ್ ಪುತ್ತೂರಿನಲ್ಲಿ ನೆಲೆಸಿದ್ದಾರೆ.








