*ಶೈನಿಂಗ್ ಸ್ಟಾರ್ ನೊಂದಿಗೆ ಗೈಡಿಂಗ್ ಸ್ಟಾರ್ ಆಗಿ-ವಂ|ಲಾರೆನ್ಸ್ ಮಸ್ಕರೇನ್ಹಸ್
*ಸಮುದಾಯದಲ್ಲಿ ಯುವಕರ ಒಗ್ಗಟ್ಟು ಪ್ರದರ್ಶಿಸಲು ಸಿ.ಎಲ್.ಸಿಯಿಂದ ವೇದಿಕೆ-ರಾಕೇಶ್ ಮಸ್ಕರೇನ್ಹಸ್
*ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ-ಜೆರಾಲ್ಡ್ ಡಿ’ಕೋಸ್ಟ
ಪುತ್ತೂರು: ದೇವರು ಪ್ರತಿಯೋರ್ವರಲ್ಲೂ ಪ್ರತಿಭೆಯನ್ನು ಕರುಣಿಸಿರುತ್ತಾನೆ. ಆದರೆ ಆ ಪ್ರತಿಭೆಯು ಪಲಾಯನ ಹೊಂದದೆ ಕ್ಲಪ್ತ ಸಮಯದಲ್ಲಿ ಊರ್ಜಿತಗೊಳಿಸಬೇಕು. ಸೂಪರ್ ಸ್ಟಾರ್, ಸ್ಪೋರ್ಟ್ಸ್ ಸ್ಟಾರ್, ಶೈನಿಂಗ್ ಸ್ಟಾರ್ ನೊಂದಿಗೆ ಎಲ್ಲರನ್ನು ಹುರಿದುಂಬಿಸುವ ಗೈಡಿಂಗ್ ಸ್ಟಾರ್ ಎನಿಸಿಕೊಳ್ಳಬೇಕು ಎಂದು ಸಿ.ಎಲ್.ಸಿ ಸಂಘಟನೆಯ ಆತ್ಮೀಕ ನಿರ್ದೇಶಕ ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಅಧೀನದಲ್ಲಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್ಸಿ) ಸಂಸ್ಥೆಯ ವತಿಯಿಂದ ‘ಒಗ್ಗಟ್ಟಿಗಾಗಿ ಕ್ರೀಡೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ವರ್ಷಂಪ್ರತಿ ಹಮ್ಮಿಕೊಳ್ಳುವ ಮೊ|ಆಂಟನಿ ಪತ್ರಾವೋ ಸ್ಮರಣಾರ್ಥ 32ನೇ ವರ್ಷದ ಅಂತರ್-ವಾಳೆ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಜ.5 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್ನ ಕ್ರೀಡಾಂಗಣದಲ್ಲಿ ಜರಗಿದ್ದು, ಈ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೋರ್ವ ಕ್ರೀಡಾಪಟುವು ಕ್ರೀಡಾಸ್ಫೂರ್ತಿಯೊಂದಿಗೆ ಆಡಿ ಎಲ್ಲರ ಮನಸ್ಸು ಗೆಲ್ಲಬೇಕು. ನಮ್ಮಲ್ಲಿ ಆಧ್ಯಾತ್ಮಿಕ ಬೆಳಕು ಹಾಗೂ ಉತ್ತಮ ತರಹದ ಲೌಕಿಕ ಬೆಳಕನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಬೆಳಕನ್ನು ಪಡೆಯುತ್ತದೆ. ನಮ್ಮಲ್ಲಿನ ಪ್ರತಿಭೆಯು ಸಮಾಜ ಹಾಗೂ ದೇಶ ಕಟ್ಟಲು ಸಹಾಯವಾಗಬೇಕು ಎಂದರು
ಸಮುದಾಯದಲ್ಲಿ ಯುವಕರ ಒಗ್ಗಟ್ಟು ಪ್ರದರ್ಶಿಸಲು ಸಿ.ಎಲ್.ಸಿಯಿಂದ ವೇದಿಕೆ-ರಾಕೇಶ್ ಮಸ್ಕರೇನ್ಹಸ್:
ಮುಖ್ಯ ಅತಿಥಿ, ನ್ಯಾಯವಾದಿ ಹಾಗೂ ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿ ರಾಕೇಶ್ ಮಸ್ಕರೇನ್ಹಸ್ ಮಾತನಾಡಿ, ಸಮುದಾಯದಲ್ಲಿನ ಯುವಕರ ನಡುವೆ ಒಗ್ಗಟ್ಟು ಪ್ರದರ್ಶಿಸಲು ಸಿ.ಎಲ್.ಸಿ ಸಂಸ್ಥೆಯ ಪ್ರಯತ್ನ ಮೆಚ್ಚುವಂತಹುದು ಜೊತೆಗೆ ಮಹಿಳೆಯರಿಗೂ ತ್ರೋಬಾಲ್, ವಾಲಿಬಾಲ್ ಪಂದ್ಯವನ್ನು ಏರ್ಪಡಿಸುವಂತಾಗಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಸಿ.ಎಲ್.ಸಿ ಸಂಸ್ಥೆಯು ಹಲವು ವರ್ಷಗಳಿಂದ ಫಲಾನುಭವಿಗಳಿಗೆ ಆಧಾರದ ಸಹಾಯಹಸ್ತ ನೀಡುತ್ತಾ ಬಂದಿದ್ದಾರೆ ಎಂದರು.
ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ-ಜೆರಾಲ್ಡ್ ಡಿ’ಕೋಸ್ಟ:
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ ಮಾತನಾಡಿ, ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಹೆಸರಿನಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಕ್ರಿಕೆಟ್ ಪಂದ್ಯಾಟವು ಸಮಾಜದಲ್ಲಿ ಉತ್ತಮವಾದ ಹೆಸರನ್ನು ಗಳಿಸಿದೆ. ಕ್ರೀಡೆಯಿಂದ ನಮಗೆ ದೈಹಿಕ ಹಾಗೂ ಮಾನಸಿಕವಾದ ಆರೋಗ್ಯ ಲಭಿಸುತ್ತದೆ. ಸೋಲು- ಗೆಲುವು ಮುಖ್ಯವಲ್ಲ, ಬದಲಾಗಿ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಆಡುವುದು ಬಹಳ ಮುಖ್ಯವಾಗಿದೆ, ಈ ಕ್ರಿಕೆಟ್ ಪಂದ್ಯವು ನಿರಂತರವಾಗಿ ಮುಂದುವರೆಯಲಿ ಎಂದರು.
ವೇದಿಕೆಯಲ್ಲಿ ಸಿ.ಎಲ್.ಸಿ ಕಾರ್ಯದರ್ಶಿ ರುಡಾಲ್ಫ್ ಪಿಂಟೊ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ.ಎಲ್.ಸಿ ಸದಸ್ಯರು ಸಿ.ಎಲ್ಸು ಗೀತೆಯನ್ನಾಡಿದರು. ಸಿ.ಎಲ್.ಸಿ ಅಧ್ಯಕ್ಷ ಡಾ|ಎಲ್ಯಾಸ್ ಪಿಂಟೊ ಸ್ವಾಗತಿಸಿ, ಉಪಾಧ್ಯಕ್ಷ ದೀಪಕ್ ಮಿನೇಜಸ್ ವಂದಿಸಿದರು. ಸದಸ್ಯ ವಿಲಿಯಂ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು.
ಮೊ|ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ…
32 ವರ್ಷಗಳಿಂದ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಹೆಸರಿನಲ್ಲಿ ಸಿ.ಎಲ್.ಸಿ ಸಂಸ್ಥೆಯು ಶಿಸ್ತುಬದ್ಧವಾಗಿ ಯಶಸ್ವಿಯಾಗಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಾ ಬಂದಿರುತ್ತದೆ ಮಾತ್ರವಲ್ಲ ಕ್ರಿಕೆಟ್ ಪಂದ್ಯಾಟ ಆರಂಭಕ್ಕೆ ಮುಂಚಿತವಾಗಿ ಫಿಲೋಮಿನಾ ಪ್ರೌಢಶಾಲೆಯ ಬಳಿಯಿರುವ ಮೊ|ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ ಹಾಕಿ ಗೌರವ ಸಲ್ಲಿಸುವುದು ವಾಡಿಕೆ. ಅದರಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿ.ಎಲ್.ಸಿ ಸಂಸ್ಥೆಯ ಆತ್ಮೀಕ ನಿರ್ದೇಶಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್, ಅತಿಥಿ ರಾಕೇಶ್ ಮಸ್ಕರೇನ್ಹಸ್, ಅಧ್ಯಕ್ಷ ಡಾ|ಎಲ್ಯಾಸ್ ಪಿಂಟೊ, ಕಾರ್ಯದರ್ಶಿ ರುಡಾಲ್ಫ್ ಪಿಂಟೊ, ಉಪಾಧ್ಯಕ್ಷ ದೀಪಕ್ ಮಿನೇಜಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟರವರು ಜೊತೆಗೂಡಿ ಮೊ|ಪತ್ರಾವೋರವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿ.ಎಲ್.ಸಿ ಸಂಸ್ಥೆಯ ಸದಸ್ಯರು ಸಿ.ಎಲ್.ಸಿ ಲೋಗೊದೊಂದಿಗೆ ನೀಲಿ-ಹಳದಿ ಬಣ್ಣದ ಜೆರ್ಸಿಯೊಂದಿಗೆ ಉಪಸ್ಥಿತರಿದ್ದರು.
16 ವಾಳೆಗಳು..
ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ 19 ವಾಳೆಗಳ ಪೈಕಿ 16 ವಾಳೆಗಳಾದ ಬಲ್ನಾಡು, ದರ್ಬೆ, ಗುಂಡ್ಯಡ್ಕ, ಹಾರಾಡಿ, ಕಲ್ಲಾರೆ, ಪದವು, ಪಾಂಗ್ಲಾಯಿ, ನಿತ್ಯಾಧರ್, ಪುತ್ತೂರು, ರೋಟರಿಪುರ, ಸಾಲ್ಮರ, ಸಾಮೆತ್ತಡ್ಕ, ಸಂಟ್ಯಾರು, ಶಿಂಗಾಣಿ, ತೆಂಕಿಲ, ಮಿತ್ತೂರು ವಾಳೆ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿದೆ.
ಸಾಂಕೇತಿಕವಾಗಿ ಚಾಲನೆ..
ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಗಣ್ಯರು ಕ್ರೀಡಾಂಗಣಕ್ಕೆ ತೆರಳಿ ಬ್ಯಾಟ್ ಬೀಸುವ ಮೂಲಕ, ಬೌಲಿಂಗ್ ಮಾಡುವ ಮೂಲಕ ಸಾಂಕೇತಿಕವಾಗಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.