ಮತ್ತಿಬ್ಬರಿಂದ ವಾಸದ ಮನೆ,ಜಾಗ ದೇವಳಕ್ಕೆ ಹಸ್ತಾಂತರ
ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ದೇವಳದ ಸ್ಥಳದಲ್ಲಿ ಮನೆ ಮಾಡಿ ವಾಸ್ತವ್ಯವಿದ್ದವರು ಹಂತಹಂತವಾಗಿ ದೇವಸ್ಥಾನದ ಅಭಿವೃದ್ಧಿಗೆ ತಮ್ಮ ಮನೆ,ಜಮೀನು ಬಿಟ್ಟು ಕೊಡುವ ಸಂದರ್ಭದಲ್ಲಿ,ದೇವಳದ ಪಕ್ಕದ ಬಿದಿರು ಹಳ್ಳ(ತೋಡಿಗೆ)ರೂ.2 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಫೆ.1ರಂದು ಶಿಲಾನ್ಯಾಸ ನಡೆಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದರು.ದೇವಸ್ಥಾನದ ಸ್ಥಳದಲ್ಲಿ ಮನೆ ಮಾಡಿ ವಾಸ್ತವ್ಯವಿರುವವರ ಪೈಕಿ ಮತ್ತೆರಡು ಮನೆಯವರು ದೇವಳದ ಅಭಿವೃದ್ಧಿ ಕೆಲಸಗಳಿಗಾಗಿ ತಮ್ಮ ಮನೆ,ಜಾಗವನ್ನು ದೇವಳಕ್ಕೆ ಹಸ್ತಾಂತರಿಸಿದರು.
ದೇವಸ್ಥಾನದ ಜಾಗದಲ್ಲಿ ವಾಸ್ತವ್ಯವಿದ್ದ ಜಗದೀಶ್ಚಂದ್ರ ರೈ ಬಿ ಮತ್ತು ರೂಪಾ ಬಿ ಅವರು ತಮ್ಮ ಮನೆ,ಜಾಗವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಅವರಿಗೆ ದೇವಳದ ಸತ್ಯಧರ್ಮ ನಡೆಯಲ್ಲಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ಆಗಿರುವ ವೇ.ಮೂ.ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿ ಪ್ರಸಾದ ವಿತರಿಸಿದರು.ಶಾಸಕರು ಶಲ್ಯ ಹೊದಿಸಿ ಗೌರವಿಸಿದರು.ಬಳಿಕ ದೇವಳದ ಬಳಿಯ ತೋಡು ಪಕ್ಕ ಸಣ್ಣ ನೀರಾವರಿ ಇಲಾಖೆಯಿಂದ ರೂ.2 ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆಗೆ ಶಿಲಾನ್ಯಾಸ ನೆರವೇರಿಸಲಾಯಿತು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ.ಶೆಟ್ಟಿ,ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ವಿನಯ ಸುವರ್ಣ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಶಿವರಾಮ ಆಳ್ವ ಬಳ್ಳಮಜಲು,ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರವಿಚಂದ್ರ, ರೈ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಝೇವಿಯರ್ ಡಿ’ಸೋಜ, ರಾಮಣ್ಣ ಪಿಲಿಂಜ, ರಾಜೇಶ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಕೈಮುಗಿದು ವಿನಂತಿ ಮಾಡುತ್ತೇನೆ-ಅಭಿವೃದ್ಧಿಗಾಗಿ ಸಹಕರಿಸಿ:
ಈ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಅವರು ಪತ್ರಕರ್ತರೊಂದಿಗೆ ಮಾತನಾಡಿ, ದೇವಸ್ಥಾನದ ಅಭಿವೃದ್ದಿ ದೃಷ್ಟಿಯಿಂದ ಸುತ್ತಮುತ್ತಲಿನ ಮನೆಯವರಿಗೆ ಮನವರಿಕೆ ಮಾಡಿ ವಿನಂತಿ ಮಾಡಿ ಅವರ ಮನವೊಲಿಸಿ, ಅವರಿಗೆ ಏನಾದರೂ ಆರ್ಥಿಕ ಸಹಾಯವನ್ನು ನಮ್ಮ ವೈಯುಕ್ತಿಕ ನೆಲೆಯಲ್ಲಿ ಕೊಟ್ಟು ಈಗಾಗಲೇ ಮೂರು ಮನೆಗಳನ್ನು ತೆರವು ಮಾಡುವ ಕೆಲಸ ಆಗಿದೆ.ಈ ಭಾಗದ ಅಭಿವೃದ್ಧಿಗೆ ಸ್ವಇಚ್ಚೆಯಿಂದ ಮನೆ,ಜಾಗ ಬಿಟ್ಟು ಕೊಡುವಂತೆ ಮನವಿ ಮಾಡಲಾಗಿದೆ.ಎಲ್ಲಾ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ.ಕೆಲವರು ನಮ್ಮಲ್ಲಿ ಕೇಳಿಲ್ಲ ಎಂದು ಹೇಳುತ್ತಾರೆ.ಯಾರ ಮನೆಯನ್ನೂ ಫೋರ್ಸ್ ಮಾಡಿ ತೆರವು ಮಾಡುವುದಿಲ್ಲ.ನಾವು ಅವರಲ್ಲಿ ಹೋಗಿ ವಿನಂತಿ ಮಾಡಿ ತೆರವುಗೊಳಿಸುವುದು.ಅವರ ಮನಸ್ಸಿನ ವಿಚಾರ ಏನಿದೆಯೋ ಅದು ಮಹಾಲಿಂಗೇಶ್ವರನಿಗೆ ಬಿಟ್ಟದ್ದು.ನಾವು ಯಾರ ವಿರುದ್ದವೂ ಮಾತನಾಡುವುದಿಲ್ಲ.ನೀವು ಮಾತನಾಡುವುದು ಮಹಾಲಿಂಗೇಶ್ವರನ ವಿರುದ್ಧ ಎಂದು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿ.ನಾನು ನನ್ನ ಮನೆಗೆ ಜಾಗ ಕೊಡಬೇಕು.ಬೇರೆ ಕಡೆಗೆ ಜಾಗ ಕೊಡಬೇಕೆಂದು ಕೇಳುತ್ತಿಲ್ಲ.ಬದಲಾಗಿ ದೊಡ್ಡ ಮಟ್ಟದಲ್ಲಿ ದೇವಸ್ಥಾನ ಬೆಳೆಯಬೇಕು.ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳು ಮಹಾಲಿಂಗೇಶ್ವರನ ಕ್ಷೇತ್ರಕ್ಕೂ ಬರಬೇಕು.ಹಾಗಾಗಿ ಇಷ್ಟು ವರ್ಷ ಇಲ್ಲಿ ದೇವಳದ ಜಾಗದಲ್ಲಿ ಮನೆ ಮಾಡಿಕೊಂಡವರು ಇನ್ನಾದರೂ ಬಿಟ್ಟು ಕೊಡಿ.ನಾವು ಯಾವತ್ತೂ ದರ್ಬಾರು ಮಾಡಿಲ್ಲ.ಜೇಸಿಬಿ ಹತ್ತಿಸಿಲ್ಲ.ಅವರಿಗೆ ಫೋರ್ಸ್ ಮಾಡಿಲ್ಲ.ದೊಣ್ಣೆ ಕತ್ತಿಗಳನ್ನು ತೋರಿಸುವ ಕೆಲಸ ಮಾಡಿಲ್ಲ.ಅದನ್ನು ನಾವು ಮಾಡುವುದೂ ಇಲ್ಲ.ಅವರ ಮನಸ್ಸನ್ನು ಒಲಿಸುವ ಕೆಲಸ ಮಾಡುತ್ತೇವೆ.ಯಾರಿಗೆ ಜಾಗವೇ ಇಲ್ಲದಾಗ ದೇವಸ್ಥಾನ ಕೊಡುತ್ತದೆ.ಆದರೆ ಜಾಗ ಇಟ್ಟುಕೊಂಡು ಮೂರು ಮೂರು ಮನೆ ಮಾಡಿಕೊಂಡು ಬಾಡಿಗೆಗೆ ಕೊಟ್ಟು ಅದರಲ್ಲಿ ದುಡ್ಡು ಮಾಡುವುದು ಸರಿಯಲ್ಲ.ಈ ಭಾಗದಲ್ಲಿ ಈಗಾಗಲೇ ರೂ. 2 ಕೋಟಿಯ ತಡೆಗೋಡೆ ಕಾಮಗಾರಿ ನಡೆಯಲಿದೆ.ಬಳಿಕ ರೂ. ೨ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ.ರೂ.14 ಕೋಟಿಯಲ್ಲಿ ಡ್ರೈನೆಜ್ ಸೌಲಭ್ಯ ಬರಲಿದೆ.ಒಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಆಗಬೇಕು.ದೇವಸ್ಥಾನದ ಅಭಿವೃದ್ಧಿಗೆ ಈಗ ಎಷ್ಟು ಜಾಗ ಬೇಕೋ ಅಷ್ಟನ್ನು ಮಾತ್ರ ತೆರವು ಮಾಡುತ್ತೇವೆ ಎಂದರು.
ಖಾತೆ ಪರಿಶೀಲಿಸುತ್ತೇನೆ:
ಕೆಲವರು ಪತ್ರಿಕಾಗೋಷ್ಟಿ ನಡೆಸಿ ಹೇಳಿರುವ ವಿಚಾರವನ್ನು ಮಾಧ್ಯಮದ ಮೂಲಕ ನಾನು ನೋಡಿದಂತೆ, ಕೆಲವರಿಗೆ ಖಾತೆ ಆಗಿದೆ ಎಂದಿದೆ.ಆ ಖಾತೆ ಹೇಗೆ ಆಗಿದೆ ಎಂದು ನಾನು ನೋಡುತ್ತೇನೆ.ಅವರಿಗೆ ಖಾತೆ ಮಾಡಲು ಎಂಡೋಮೆಂಟ್ ಕಮಿಷನರ್ ಆದೇಶ ಕೊಟ್ಟಿದ್ದಾರೋ ನೋಡುತ್ತೇನೆ.ಅವರು ಡುಪ್ಲಿಕೇಟ್ ಖಾತೆ ಮಾಡಿದ್ದಾರಾ ಎಂದು ನೋಡಬೇಕು ಎಂದು ಶಾಸಕರು ಹೇಳಿದರು.
ಹಿಂದುತ್ವವೆಂದು ಭಾಷಣ ಮಾಡಿದರೆ ಸಾಲದು:
ಹಿಂದುತ್ವ ಹಿಂದುತ್ವ ಎಂದು ಮೈಕ್ ತೆಗೆದುಕೊಂಡು ಭಾಷಣ ಮಾಡಿದರೆ ಆಗುವುದಿಲ್ಲ.ನಿಜವಾದ ಹಿಂದುತ್ವಕ್ಕೆ ಏನು ಮಾಡಬೇಕೋ ಅದನ್ನು ಮಾಡಿದರೆ ಹಿಂದುತ್ವ ಕಾಣುತ್ತದೆ.ವಿಷ ಬೀಜ ಬಿತ್ತುವುದು ಹಿಂದುತ್ವ ಅಲ್ಲ.ಅಭಿವೃದ್ಧಿಗೆ ಸಹಕಾರ ಕೊಡಿ.ಅದು ಬಿಟ್ಟು ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್‌ಗೆ ದೂರು ಕೊಡುತ್ತೇವೆ ಎನ್ನುವುದು ಧರ್ಮಕ್ಕೆ ಶೋಭೆ ತರುವ ವಿಚಾರವಲ್ಲ.ಇಲ್ಲಿ ಬೇರೆ ಧರ್ಮದವರು ಇಲ್ಲ.ನಿಮ್ಮಲ್ಲಿ ತೊಂದರೆಗಳಿದ್ದರೆ ಚರ್ಚೆ ಮಾಡಿ ಬಗೆಹರಿಸುವ.ಇಲ್ಲವಾದರೆ ಕೊನೆಗೆ ಕಾನೂನು ಹೋರಾಟ ಮಾಡುವ ಎಂದು ಹೇಳಿದ ಶಾಸಕರು,ಕಟೀಲ್ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಎಷ್ಟೋ ಮನೆ ತೆರವು ಮಾಡಿ ಆಗಿದೆ.ಇವತ್ತು ನಾನು ಶಾಸಕನ ನೆಲೆಯಲ್ಲಿ ನನ್ನ ವಿಚಾರಕ್ಕೆ ಒತ್ತುಕೊಟ್ಟು ಮಾತನಾಡುತ್ತಿದ್ದೇನೆ.ನಾವು ಕೂಡಾ ಸ್ವಲ್ಪ ಬಿಸಿ ರಕ್ತದವರಿದ್ದೇವೆ.ದೇವರ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡರು.ರಾಜೇಶ್ ಬನ್ನೂರು ಅವರ ಪತ್ರಿಕಾಗೋಷ್ಠಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶಾಸಕರು, ನಿಮ್ಮ ತೊಂದರೆಗೆ ಸ್ವಂತ ನೆಲೆಯಲ್ಲಿ ಸ್ಪಂದನೆ ಮಾಡುವ ಎಂದು ಕೈ ಮುಗಿದು, ದೇವಸ್ಥಾನ ಅಭಿವೃದ್ದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಸ್ವಂತ ನೆಲೆಯಲ್ಲಿ ದುಡ್ಡು ಕೊಡುವ ಕೆಲಸ ಮಾಡಿದ್ದೇವೆ:
ಪರಿಸ್ಥಿತಿ ಚೆನ್ನಾಗಿಲ್ಲದವರಿಗೆ ಸ್ವಂತ ನೆಲೆಯಲ್ಲಿ ದುಡ್ಡು ಕೊಡುವ ಕೆಲಸ ಮಾಡಿದ್ದೇವೆ.ಇಷ್ಟರ ತನಕ ಹೇಳಿಲ್ಲ ಯಾಕೆಂದರೆ ಎಲ್ಲಾ ದೊಡ್ಡ ದೊಡ್ಡ ಡಿಮಾಂಡ್ ಶುರುವಾಗುತ್ತದೆ.ದುಡ್ಡಿದ್ದವನೂ ದುಡ್ಡು ಕೇಳುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ.ಬಡ ಮಹಿಳೆ ಇಂದಿರಾ ಅವರ ವಿಚಾರ ತುಲನೆ ಮಾಡಿ ಅವರಿಗೂ ಪರಿಹಾರ ಕೊಡುತ್ತೇವೆ.ಈಗಾಗಲೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಅವರೊಂದಿಗೆ ಮಾತನಾಡಿದ್ದಾರೆ.ಅವರ ಮಗ ಹೇಳಿದಂತೆ ಬಾಡಿಗೆ ಮನೆ ನೋಡಿ ತಿಳಿಸುವುದಾಗಿ ತಿಳಿಸಿದ್ದಾರೆ.ಆದರೂ ಅವರು ಇಲ್ಲಿ ವಾಸ್ತವ್ಯ ಇದ್ದವರು ಎಂದಾದರೆ ಅವರಿಗೆ 3 ಸೆಂಟ್ಸ್ ಜಾಗ ಕೊಟ್ಟು ಮನೆ ಕಟ್ಟಿಕೊಡುವ ಕೆಲಸ ಮಾಡುತ್ತೇವೆ.ಆದರೆ ಮನೆ ಇಲ್ಲೇ ಕಟ್ಟಿಕೊಡುವ ಮತ್ತೊಂದು ತಪ್ಪು ನಾವು ಮಾಡುವುದಿಲ್ಲ.ಬೇರೆ ಕಡೆ ಮನೆ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ ಆಶೋಕ್ ಕುಮಾರ್ ರೈ ಹೇಳಿದರು.
ಮಾಹಿತಿ ನೀಡದೆ ಒಂದು ಹುಲ್ಲು ಕಡ್ಡಿಯನ್ನೂ ಮುಟ್ಟುವುದಿಲ್ಲ
ಪತ್ರಿಕಾಗೋಷ್ಟಿಯಲ್ಲಿದ್ದ ಓರ್ವ ವಕೀಲರು ಮತ್ತು ರಾಜರಾಮ್ ಭಟ್ ಎಂಬವರಿಗೆ ನಾವು ಮೊದಲೇ ಮಾಹಿತಿ ನೀಡಿದ್ದೆವು.ಮಾತನಾಡುವ ಕುರಿತು ಕೇಳಿಕೊಂಡಿದ್ದೆವು.ಅದಲ್ಲದೆ ಅವರಲ್ಲಿ, ನಿಮ್ಮ ಒಪ್ಪಿಗೆ ಇಲ್ಲದೆ ಒಂದು ಹುಲ್ಲು ಕಡ್ಡಿಯನ್ನೂ ಮುಟ್ಟುವುದಿಲ್ಲ ಎಂದು ಹೇಳಿದ್ದೇವೆ.ಜೊತೆಗೆ ಯಾವಾಗಲೂ ಮುಖ ನೋಡುವವರಿಗೆ ನೋಟೀಸ್ ಮಾಡುವುದು ಸರಿಯಲ್ಲ.ಮಾತನಾಡಿ ಮನವೊಲಿಸುವ ಕಾರ್ಯ ಮಾಡುವುದೇ ಸರಿ ಎಂದು ನಾವು ನೋಟೀಸ್ ಕೂಡಾ ಮಾಡಿಲ್ಲ.ಪತ್ರಿಕಾಗೋಷ್ಟಿ ಮಾಡಿದ ದಿನ ರಾಜೇಶ್ ಬನ್ನೂರು ದೇವಸ್ಥಾನದ ಬಳಿ ಕೂತಿದ್ದಾಗ ನಾನೇ ಅವರಲ್ಲಿ, ಬನ್ನಿ ಊಟ ಮಾಡಿ ಎಂದು ಕರೆದಿದ್ದೆ.ಈ ರೀತಿಯಲ್ಲಿ ನಾವು ಇರುವಾಗ ನೋಟೀಸ್ ಮಾಡಿಕೊಂಡು ಒಬ್ಬರ ಮುಖ ಒಬ್ಬರು ನೋಡದಂತೆ ಮಾಡುವುದು ಸರಿಯಲ್ಲ ಎಂಬ ಭಾವನೆ ನಮ್ಮಲ್ಲಿದೆ.ಇವತ್ತಲ್ಲ ನಾಳೆಯಾದರೂ ಅವರ, ದೇವರ ಮೇಲಿನ ಭಕ್ತಿ, ನಂಬಿಕೆಯಿಂದ ಅವರ ಮನ ಬದಲಾಗಬಹುದು ಎಂಬ ನಂಬಿಕೆ ನಮ್ಮಲ್ಲಿ ಇದೆ
-ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು
ನಾವು ಮಾಡುವುದು ತಪ್ಪೆಂದಾದರೆ ಪ್ರಶ್ನಾಚಿಂತನೆ ಮಾಡಿ ಬಿಟ್ಟು ಬಿಡುತ್ತೇವೆ
ರಾಜೇಶ್ ಬನ್ನೂರು ಅವರು ದೇವಸ್ಥಾನದ ಭಕ್ತರು.ದೇವಸ್ಥಾನದ ಅಭಿವೃದ್ಧಿಗಾಗಿ ಕೆಲಸ ಮಾಡಿದವರು.ಅವರು ದೇವಸ್ಥಾನಕ್ಕೆ ವಿರೋಧವಿಲ್ಲ.ಅವರ ಹೃದಯದಲ್ಲಿ ಮನೆ ಬಿಟ್ಟು ಕೊಡುವಂತಿದೆ.ಆದರೆ ಬಾಯಲ್ಲಿ ಏನೋ ಹೇಳಿದ್ದಾರೆ.ಮನೆ ಬಿಟ್ಟು ಕೊಡುವ ವಿಚಾರ ಅವರಿಗೆ ಕನಸ್ಸಲ್ಲೂ ಬಂದಿರಬಹುದು.ಅವರನ್ನು ಮನವೊಲಿಸುವ ಕೆಲಸ ಆಗಲಿದೆ.ಶಾಸಕನಾಗಿ ಬಂದಾಗಲೂ ಅವರಲ್ಲಿ ಮಾತನಾಡಿದಾಗ ಅವರು ವಿರೋಧ ವ್ಯಕ್ತಪಡಿಸಿದ್ದರು.ಅವರು ಪತ್ರಿಕಾಗೋಷ್ಟಿ ಮಾಡಿದ್ದಾರೆಂದು ನನಗೆ ಬೇಸರ ಇಲ್ಲ.ಒಟ್ಟಿಗೆ ಕೂತು ಕರೆದು ಎಲ್ಲರನ್ನೂ ಜೊತೆಯಲ್ಲಿ ಕೊಂಡು ಹೋಗುವುದು ನಿಜವಾದ ಧರ್ಮ.ಆಗುವುದೇ ಇಲ್ಲ ಎಂದಾಗ ಕಾನೂನು ಕಡೆ ನೋಡಬೇಕು.ಮಹಾಲಿಂಗೇಶ್ವರ ದೇವಸ್ಥಾನದ ಪುತ್ತೂರಿನ ಭಕ್ತರು, ನಾವು ಮಾಡುವುದು ತಪ್ಪು ಅದನ್ನು ನಿಲ್ಲಿಸಿ ಎಂದರೆ ನಾವು ಮಹಾಲಿಂಗೇಶ್ವರನಲ್ಲಿ ಪ್ರಶ್ನಾಚಿಂತನೆ ಮಾಡಿ ಬಿಟ್ಟು ಬಿಡುತ್ತೇವೆ
-ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು
ಬೇಸರವಾದರೂ ದೇವರಿಗೆ ಬಿಟ್ಟು ಕೊಟ್ಟದ್ದಕ್ಕೆ ನೆಮ್ಮದಿಯಿದೆ
ಜಾಗ ಬಿಟ್ಟು ಕೊಡುವಾಗ ಬೇಸರ ಆಗುತ್ತದೆ.ಆದರೆ ದೇವರಿಗೆಂದು ಬಿಟ್ಟು ಕೊಟ್ಟಿರುವುದಕ್ಕೆ ನೆಮ್ಮದಿ ಇದೆ.ಸುಮಾರು 70 ವರ್ಷಗಳಿಂದ ಇಲ್ಲೇ ಇದ್ದೆವು ಎಂದು ಮನೆ,ಜಾಗ ಬಿಟ್ಟು ಕೊಟ್ಟ ಜಗದೀಶ್ಚಂದ್ರ ರೈ ಬಿ ಮತ್ತು ರೂಪ ಬಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.