ವಿಟ್ಲ: ತನ್ನದೇ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಕಾಂಗ್ರೆಸ್ ಮುಖಂಡರೊಬ್ಬರು ಗಾಯಗೊಂಡ ಘಟನೆ ಜ.4ರಂದು ಸಾಯಂಕಾಲ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ನಡೆದಿದೆ.
ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಬಿ.ಸಿ. ರೋಡು ಅಜ್ಜಿಬೆಟ್ಟು ನಿವಾಸಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರು ಗಾಯಗೊಂಡವರಾಗಿದ್ದಾರೆ. ಅವರು ತನ್ನ ಪತ್ನಿಯ ತಂಗಿಯ ಮದುವೆಯ ಆಮಂತ್ರಣ ನೀಡುವ ಸಲುವಾಗಿ ಅನಂತಾಡಿಯ ಆತ್ಮೀಯರೊಬ್ಬರ ಕಲ್ಲಿನ ಕೋರೆ ಬಳಿ ತೆರಳಿದ್ದರು. ಆ ಸಂದರ್ಭದಲ್ಲಿ ಅವರ ಪ್ಯಾಂಟಿನ ಕಿಸೆಯಲ್ಲಿದ್ದ ರಿವಾಲ್ವರ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಗುಂಡು ನೇರವಾಗಿ ಅವರ ಕಾಲಿನ ಪಾದದ ಮಾಂಸಕ್ಕೆ ನುಗ್ಗಿದ್ದು, ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿರುವ ಅವರು ಇಂಟಕ್‌ನಲ್ಲಿಯೂ ಗುರುತಿಸಿಕೊಂಡಿದ್ದರು. ಕೆಲವು ಸಮಯಗಳ ಹಿಂದೆ ಪಕ್ಷದೊಳಗಿನ ಸ್ಥಾನ ಹಂಚಿಕೆ ವಿಚಾರವಾಗಿ ಬೇರೆಯವರೊಂದಿಗೆ ಬಿನ್ನಾಭಿಪ್ರಾಯ ಉಂಟಾಗಿ ಅವರೊಳಗೆ ಜಗಳ ನಡೆದಿತ್ತು. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಅವರಿಗೆ ಜೀವ ಬೆದರಿಕೆ ಇದೆ ಎನ್ನುವ ಕಾರಣಕ್ಕೆ ಗನ್ ಲೈಸನ್ಸ್ ಕೂಡ ಪಡೆದಿದ್ದರು. ಅನಂತಾಡಿಯಲ್ಲಿ ಆಕಸ್ಮಿಕವಾಗಿ ಅವರದ್ದೇ ರಿವಾಲ್ವರ್‌ನಿಂದ ಗುಂಡು ತಗಲಿದ್ದು, ಕಾಲಿಗೆ ಗಾಯವಾಗಿದೆ. ಉಳಿದಂತೆ ಯಾವುದೇ ಗಾಯಗಳಿಲ್ಲದೆ ಅವರು ಆರೋಗ್ಯವಾಗಿದ್ದಾರೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.