ಪುತ್ತೂರಿನವರು ಸ್ಮರಿಸುವ ಕೆಲಸವನ್ನು ಜುಬಿನ್ರವರು ಮಾಡಿದ್ದಾರೆ-ಡಿಸಿ ಮುಲ್ಲೈ ಮುಹಿಲನ್
ಪುತ್ತೂರು: ಪುತ್ತೂರು ಉಪವಿಭಾಗಾಧಿಕಾರಿಯಾಗಿ 13 ತಿಂಗಳು ಕರ್ತವ್ಯ ನಿರ್ವಹಿಸಿ ಪದೋನ್ನತಿಗೊಂಡು ರಾಯಚೂರು ಜಿಲ್ಲೆಯ ಮಹಾನಗರಪಾಲಿಕೆ ಆಯುಕ್ತರಾಗಿ ವರ್ಗಾವಣೆಗೊಂಡ ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರರವರಿಗೆ ಪುತ್ತೂರು ಉಪವಿಭಾಗದ ಎಲ್ಲಾ ಸರಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಿತು.
ಉಪವಿಭಾಗದ ಎಲ್ಲಾ ಸರಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಪರವಾಗಿ ಸಹಾಯಕ ಆಯುಕ್ತರನ್ನು ಸನ್ಮಾನಿಸಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾತನಾಡಿ, ಪುತ್ತೂರು ಉಪವಿಭಾಗದಲ್ಲಿ ಜುಬಿನ್ ಮೊಹಾಪಾತ್ರರವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಜುಬಿನ್ರವರ ಮೇಲೆ ಒಳ್ಳೆಯ ನಂಬಿಕೆ ಇತ್ತು. ಇವರಿಂದ ನನಗೂ, ಉಪವಿಭಾಗಕ್ಕೂ ಒಳ್ಳೆಯ ಶಕ್ತಿ ಬಂದಿತ್ತು ಎಂದರು. ಪುತ್ತೂರು ಉಪವಿಭಾಗಕ್ಕೆ ಒಳ್ಳೆಯ ಇತಿಹಾಸ ಇದೆ. ಇಲ್ಲಿ ಕರ್ತವ್ಯಕ್ಕೆ ಬಂದವರೆಲ್ಲರೂ ಉತ್ತಮ ಕೆಲಸ ನಿರ್ವಹಿಸಿ ಒಳ್ಳೆಯ ಪೋಸ್ಟಿಂಗ್ ಪಡೆದಿದ್ದಾರೆ. ಜುಬಿನ್ರವರು ಪುತ್ತೂರಿನವರು ಸ್ಮರಿಸುವ ಕೆಲಸವನ್ನು ಮಾಡಿ ಪುತ್ತೂರಿನ ಜನರ, ಅಧಿಕಾರಿಗಳ ಮನ ಗೆದ್ದಿದ್ದಾರೆ. ಸುಬ್ರಹ್ಮಣ್ಯ ಜಾತ್ರಾ ಸಂದರ್ಭದಲ್ಲಿಯೂ ಉತ್ತಮ ವ್ಯವಸ್ಥೆ ಸಂಘಟಿಸಿದ್ದಾರೆ. ಜಾತ್ರೆ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ ಎಂದರು. ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿ, ಒಳ್ಳೆಯ ಗುರಿ, ಉದ್ಧೇಶ ಇರಬೇಕು ಮುಂದೆ ಬರುವ ಅಧಿಕಾರಿಗೂ ಒಳ್ಳೆಯ ಸಹಕಾರ ನೀಡಿ ಎಂದು ಹೇಳಿ ಶುಭಹಾರೈಸಿದರು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವೀ ಸ್ಥಾನಿಕ್ ಮಾತನಾಡಿ ಜುಬಿನ್ ಮೊಹಾಪಾತ್ರರವರು ಉತ್ತಮ ಕೆಲಸಗಾರರು. ಶ್ರಮವಿಲ್ಲದೆ ಕರ್ತವ್ಯ ನಿರ್ವಹಣೆ ಮಾಡಿದವರು. ಕಂದಾಯ ಇಲಾಖೆಯಲ್ಲಿ ಇಂತಹ ಅಧಿಕಾರಿ ಇರಬೇಕು ಇದರಿಂದ ಬಡವರ ಪರ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.
ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಜುಬಿನ್ ಮೊಹಾಪಾತ್ರರವರು ಯಾವುದೇ ಅಹಂವಿಲ್ಲದ ವ್ಯಕ್ತಿ. ಯಾರಲ್ಲಿಯೂ ತಾರತಮ್ಯ ಮಾಡದೆ ಎಲ್ಲರಲ್ಲಿಯೂ ಅನ್ಯೋನ್ಯತೆಯಿಂದ ಇದ್ದರು. ಹೆಸರಿಗೆ ತಕ್ಕಂತೆ ಜುಬಿನ್ರವರು ಪುತ್ತೂರು ಉಪವಿಭಾಗದಲ್ಲಿ ಮಹಾಪಾತ್ರರಾಗಿದ್ದರು. ಇವರು ಒರಿಸ್ಸಾ ರಾಜ್ಯದವರಾದರೂ ಕನ್ನಡ ಮಾತನಾಡುವ ಮೂಲಕ ಕನ್ನಡದ ಕಂಪನ್ನು ಪಸರಿಸಿದ್ದಾರೆ ಎಂದು ಹೇಳಿ ಅವರ ಮುಂದಿನ ಜೀವನಕ್ಕೆ ಶುಭಹಾರೈಸಿದರು.
ಉಪತಹಶೀಲ್ದಾರ್ ಸುಲೋಚನಾ, ಸಹಾಯಕ ಆಯುಕ್ತರ ಕಛೇರಿಯ ಮ್ಯಾನೇಜರ್ ಚಂದ್ರಶೇಖರ್, ಉಪ್ಪಿನಂಗಡಿ ಹೋಬಳಿಯ ಗ್ರಾಮಾಡಳಿತ ಅಧಿಕಾರಿ ಚಂದ್ರ ನಾಯಕ್, ಗ್ರಾಮಾಡಳಿತ ಅಧಿಕಾರಿ ಮರಿಯಪ್ಪ ಅನಿಸಿಕೆ ವ್ಯಕ್ತಪಡಿಸಿದರು. ಪ್ರೊಬೆಷನರಿ ಸಹಾಯಕ ಆಯುಕ್ತ ಶ್ರವಣ್ ಕುಮಾರ್, ಕಡಬ ತಹಶೀಲ್ದಾರ್ ಪ್ರಭಾಕರ್ ಕಜೂರೆ, ಸುಳ್ಯ ತಹಶೀಲ್ದಾರ್ ಮಂಜುಳಾ, ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ, ಪ್ರೊಬೆಷನರಿ ಐಎಎಸ್ ಅಧಿಕಾರಿ ಸಾಯಿಕೃಷ್ಣ, ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಜುಬಿನ್ ಮೊಹಾಪಾತ್ರರವರ ತಂದೆ ನಿವೃತ್ತ ಸೇನಾನಿ ಆರ್.ಎನ್.ಮೊಹಾಪಾತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪತಹಶೀಲ್ದಾರ್ ಸುಲೋಚನಾ ಪ್ರಾರ್ಥಿಸಿ, ಕಂದಾಯ ನಿರೀಕ್ಷಕ ಗೋಪಾಲ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
ಜುಬಿನ್ ಮೊಹಾಪಾತ್ರರವರಿಗೆ ಸನ್ಮಾನ
ಪುತ್ತೂರು ಉಪವಿಭಾಗದ ಎಲ್ಲಾ ಸರಕಾರಿ ಅಧಿಕಾರಿ, ಸಿಬಂದಿಗಳ ವತಿಯಿಂದ ಶಲ್ಯ, ಪೇಟ, ಶ್ರೀಮಹಾಲಿಂಗೇಶ್ವರ ದೇವರ ಫೊಟೊ, ಹಣ್ಣುಹಂಪಲು ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಸುಳ್ಯ, ಪುತ್ತೂರು, ಕಡಬ ಕಂದಾಯ ಇಲಾಖೆ ಹಾಗೂ ಎಲ್ಲಾ ಅಧಿಕಾರಿ ಸಿಬಂದಿಗಳಿಂದ ಸನ್ಮಾನ ನಡೆಯಿತು.
ಹಲವು ಸವಾಲುಗಳನ್ನು ಎದುರಿಸಿ ಕರ್ತವ್ಯ ನಿರ್ವಹಿಸಿದ್ದೇನೆ-ಜುಬಿನ್ ಮೊಹಾಪಾತ್ರ
ಸನ್ಮಾನ ಸ್ವೀಕರಿಸಿ ಮಾತನಾಡಿd ಜುಬಿನ್ ಮೊಹಾಪಾತ್ರ, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ರವರೊಂದಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿದೆ. ಇಲ್ಲಿ ಹಲವು ಸವಾಲು ಎದುರಿಸಿದ್ದೇನೆ. ಕಂದಾಯ ಇಲಾಖೆಯ ಮೂಲಕ ಬಡವರ ಪರ ಕೆಲಸ ಮಾಡಲು ಸಾಧ್ಯವಿದೆ ಎಂದ ಅವರು ಕರ್ತವ್ಯ ನಿರ್ವಹಿಸುವಾಗ ಸಿಟ್ಟು, ಜಗಳ ಇರುವುದು ಸಾಮಾನ್ಯ. ನನ್ನ ಕ್ರಮದಿಂದ ನೋವಾಗಿದ್ದರೆ ಕ್ಷಮಿಸಿ ಎಂದರು. ಪುತ್ತೂರಿನಲ್ಲಿ ಉತ್ತಮ ಅಧಿಕಾರಿ ಸಿಬ್ಬಂದಿಗಳ ತಂಡ ಇದೆ. ನನಗೆ ಎಲ್ಲಾ ಸಮಯದಲ್ಲಿಯೂ ಸಹಕಾರ ನೀಡಿದ್ದಾರೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದ ಅವರು ಪುತ್ತೂರು ಉಪವಿಭಾಗ ಮಾದರಿಯಾಗಲಿ ಎಂದರು.
ಚಿತ್ರ:ಪದ್ಮಾ ಪುತ್ತೂರು