ಕೆಯ್ಯೂರು ಗ್ರಾಮಸಭೆ

0

ಹೊಸ ಪಡಿತರ ಚೀಟಿಗೆ ಅವಕಾಶ ಮಾಡಿಕೊಡಿ-ಗ್ರಾಮಸ್ಥರ ಒತ್ತಾಯ, ಸರಕಾರಕ್ಕೆ ಮನವಿ

ಪುತ್ತೂರು: ಈಗಾಗಲೇ ಹೊಸ ಪಡಿತರ ಚೀಟಿ ಪ್ರಕ್ರಿಯೆ ನಿಂತು ಹೋಗಿದ್ದು ಇದರಿಂದ ಬಹಳಷ್ಟು ಜನರಿಗೆ ತೊಂದರೆಯುಂಟಾಗಿದೆ. ಆದ್ದರಿಂದ ಸರಕಾರ ಈ ಕೂಡಲೇ ಹೊಸ ಪಡಿತರ ಚೀಟಿಗೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಕೆಯ್ಯೂರು ಗ್ರಾಮಸಭೆಯಲ್ಲಿ ಆಗ್ರಹಿಸಿದರು. ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ಫೆ.10 ರಂದು ಗ್ರಾಪಂ ಸಭಾಂಗಣದಲ್ಲಿ ಜರಗಿತು. ಗ್ರಾಪಂ ಮಾಜಿ ಸದಸ್ಯ ಕಿಟ್ಟ ಅಜಿಲ ಕಣಿಯಾರುರವರು ವಿಷಯ ಪ್ರಸ್ತಾಪಿಸಿ, ಕೆಲವು ತಿಂಗಳುಗಳಿಂದ ಹೊಸ ಪಡಿತರ ಚೀಟಿ ಮಾಡಲು ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ಬಹಳಷ್ಟು ಬಡವರಿಗೆ ತೊಂದರೆಯಾಗಿದೆ. ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಪಡಿತರ ಚೀಟಿ ಅತೀ ಅವಶ್ಯವಿರುವುದರಿಂದ ಸರಕಾರ ಈ ಕೂಡಲೇ ಹೊಸ ಪಡಿತರ ಚೀಟಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ತಿಳಿಸಿದರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.


ಮಾಡಾವು-ಕುಂಬ್ರ-ಪುತ್ತೂರು ಹೆಚ್ಚುವರಿ ಬಸ್ಸು ಬೇಕು
ಮಾಡಾವು, ಕೆಯ್ಯೂರು ಇತ್ಯಾದಿ ಕಡೆಗಳಿಂದ ಪುತ್ತೂರಿಗೆ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬೆಳಿಗ್ಗಿನ ಜಾವ 7.30 ರಿಂದ ಸರಿಯಾದ ಸರಕಾರಿ ಬಸ್ಸು ಇಲ್ಲದೇ ಇರುವುದರಿಂದ ಬಹಳಷ್ಟು ತೊಂದರೆಯಾಗಿದೆ ಎಂದು ಸದಸ್ಯೆ ಮೀನಾಕ್ಷಿ ವಿ.ರೈಯವರು ಸಭೆಗೆ ತಿಳಿಸಿದರು. ಬೆಳಿಗ್ಗಿನ ಜಾವ ಇರುವ ಬಸ್ಸುಗಳಲ್ಲಿ ರಶ್ ಇರುವುದರಿಂದ ವಿದ್ಯಾರ್ಥಿಗಳಿಗೆ ಹೋಗಲು ಸಮಸ್ಯೆಯಾಗುತ್ತದೆ. ಬಸ್ಸಿನೊಳಗೆ ಮಕ್ಕಳು ತಲೆ ತಿರುಗಿ ಬಿದ್ದ ಘಟನೆಗಳು ಕೂಡ ನಡೆದಿದೆ. ಆದ್ದರಿಂದ ಬೆಳಿಗ್ಗೆ 7.30 ರಿಂದ 8.30 ಗಂಟೆಯೊಳಗೆ ಹೆಚ್ಚುವರಿ ಬಸ್ಸು ಸಂಚಾರ ಆರಂಭಿಸಬೇಕು ಎಂದು ತಿಳಿಸಿದರು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.


ಸ್ವಚ್ಛತಾ ಸೇನಾನಿಗಳಿಗೆ ತೊಂದರೆ ನೀಡಿದರೆ ಕಠಿಣ ಕ್ರಮ
ನಮಗೆ ದಾರಿ ಮಧ್ಯೆ ಒಬ್ಬರು ಮಹಿಳೆ ಬೈತ್ತಾರೆ, ಕಲ್ಲು ಹೊಡೆಯಲು ಬರುತ್ತಾರೆ ಎಂದು ಕೆಯ್ಯೂರು ಗ್ರಾಪಂನ ಸ್ವಚ್ಚತಾ ಸೇನಾನಿ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯವರು, ಸ್ವಚ್ಚತಾ ಸೇನಾನಿಗಳಿಗೆ ಗ್ರಾಮದಲ್ಲಿ ಯಾರೂ ಕೂಡ ತೊಂದರೆ ಕೊಡುವ ಹಾಗಿಲ್ಲ. ಏನಾದರೂ ತೊಂದರೆ ಕಂಡು ಬಂದರೆ ತಕ್ಷಣವೇ 112 ಗೆ ಕರೆ ಮಾಡಿ, ನಾವು ನೀವಿದ್ದಲ್ಲಿಗೆ ಬಂದು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಈ ಬಗ್ಗೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಕೂಡ ಪ್ರತಿಕ್ರಿಯೆ ನೀಡಿ ನಮ್ಮ ಸ್ವಚ್ಛತಾ ಸೇನಾನಿಗಳಿಗೆ ಯಾರೇ ಆದರೂ ತೊಂದರೆ ನೀಡಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಪಂಚಾಯತ್‌ನಲ್ಲಿ ನಾಯಿಗಳಿಗೂ ಒಂದು ಕ್ಲಿನಿಕ್…!?
ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗುತ್ತಿದೆ ಎಂದು ಗ್ರಾಮಸ್ಥರು ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ನೋಡೆಲ್ ಅಧಿಕಾರಿ ಪಶುವೈದ್ಯಾಧಿಕಾರಿ ಡಾ.ಧರ್ಮಪಾಲರವರು, ಬೀದಿ ನಾಯಿಗಳನ್ನು ಕೊಲ್ಲುವ ಹಾಗಿಲ್ಲ ಆದರೆ ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಬಹುದಾಗಿದೆ ಆದರೆ ಅದಕ್ಕೆ ಪಂಚಾಯತ್‌ನಲ್ಲಿ ಒಂದು ಕ್ಲಿನಿಕ್ ಕಟ್ಟಡ ಮಾಡಬೇಕಾಗುತ್ತದೆ. ಏಕೆಂದರೆ ಒಂದು ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ 3 ದಿನಗಳ ಕಾಲ ಅದನ್ನು ಕ್ಲಿನಿಕ್‌ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ ಆ ಬಳಿಕ ಅದನ್ನು ಹೊರಗೆ ಬಿಡಬೇಕಾಗುತ್ತದೆ. ಈಗಾಗಲೇ ನಗರಸಭೆಯಲ್ಲಿ ನಾಯಿಗಳಿಗೆ ಕ್ಲಿನಿಕ್ ಕಟ್ಟಡ ಮಾಡಲು ಯೋಜನೆ ಹಾಕಿದ್ದಾರೆ. ಕೆಯ್ಯೂರು ಪಂಚಾಯತ್‌ನಲ್ಲೂ ಒಂದು ಕಟ್ಟಡ ನಿರ್ಮಿಸಿದರೆ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಬಹುದಾಗಿದೆ ಎಂದು ತಿಳಿಸಿದರು.


ಕಣಿಯಾರುನಲ್ಲಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರ ಮಾಡಬೇಕು ಏಕೆಂದರೆ ಇಲ್ಲಿಗೆ ರಸ್ತೆ ಸಂಪರ್ಕ ಕೂಡ ಇಲ್ಲದೆ ಇರುವುದರಿಂದ ತೊಂದರೆಯಾಗಿದೆ ಎಂದು ಕಿಟ್ಟ ಅಜಿಲ ತಿಳಿಸಿದರು. ಮಾಡಾವು ಸಂಪಾಜೆ ಭಾಗದಲ್ಲಿರುವ ಹಳೆಯ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡುವಂತೆ ಗ್ರಾಮಸ್ಥರು ಕೇಳಿಕೊಂಡರು.ರಸ್ತೆ ಬದಿಗೆ ಆಡುಗಳನ್ನು ಬಿಡಲಾಗುತ್ತಿದೆ ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಪ್ರಮೀತ್‌ರಾಜ್ ಕಟ್ಟತ್ತಾರು ತಿಳಿಸಿದರು.ಕಟ್ಟತ್ತಾರು ಮೇರ್ಲ ಮಧ್ಯೆ ಒಂದು ಬಸ್ಸು ತಂಗುದಾಣದ ಅವಶ್ಯಕತೆ ಇದೆ ಎಂದು ಪ್ರಮೀತ್‌ರಾಜ್ ಸಭೆಗೆ ತಿಳಿಸಿದರು. ಕೆಯ್ಯೂರು ದೇವಿನಗರದಲ್ಲಿ ಒಂದು ಜೇನುಕೃಷಿಯ ಅನಾಥ ಕಟ್ಟಡ ಇದೆ.ಇದನ್ನು ಈಗಾಗಲೇ ತೋಟಗಾರಿಕಾ ಇಲಾಖೆಗೆ ಹಸ್ತಾಂತರ ಮಾಡಿದ್ದರೂ ಅದು ಅನಾಥವಾಗಿದೆ ಆದ್ದರಿಂದ ಅದನ್ನು ಸಾರ್ವಜನಿಕವಾಗಿ ಒಳ್ಳೆಯ ಉದ್ದೇಶಕ್ಕೆ ಕೊಡಬೇಕು ಎಂದು ತಾಪಂ ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ್ ತಿಳಿಸಿದರು.


ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ,ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ತಾರಾನಾಥ ಕಂಪ, ಶೇಷಪ್ಪ ದೇರ್ಲ, ವಿಜಯ ಕುಮಾರ್ ಸಣಂಗಳ, ಜಯಂತಿ ಎಸ್.ಭಂಡಾರಿ, ಮಮತಾ ರೈ, ಶುಭಾಷಿಣಿ, ಮೀನಾಕ್ಷಿ ವಿ.ರೈ, ಗಿರಿಜಾ ಕಣಿಯಾರು, ನೆಬಿಸಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ ಪಂಚಾಯತ್ ವರದಿ ಮಂಡಿಸಿದರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ನಿರ್ಣಯಗಳನ್ನು ದಾಖಲಿಸಿಕೊಂಡು ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ, ಜ್ಯೋತಿ, ಧರ್ಮಣ್ಣ ಸಹಕರಿಸಿದ್ದರು.

ಕಾಡಿಗೆ ಹೋಗಿ ಬೊಬ್ಬೆ ಹೊಡೆಯಲು ಅವಕಾಶ ಕೊಡಿ…!?
ಹಿಂದಿನ ಕಾಲದಲ್ಲಿ ವರ್ಷದಲ್ಲಿ ಎರಡು ಬಾರಿ ಬೇಟೆಯಾಡುವ ಪದ್ಧತಿ ಇತ್ತು ಆದರೆ ಈಗ ಇದು ಕಾನೂನಿನಲ್ಲಿ ಅಪರಾಧವಾಗಿದೆ. ವನ್ಯ ಪ್ರಾಣಿಗಳನ್ನು ಕೊಲ್ಲುವಂತಿಲ್ಲ ಆದರೆ ಇಂದಿನ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಮನುಷ್ಯರ ಭಯ ಇಲ್ಲದಾಗಿದೆ. ಅವುಗಳು ನೇರವಾಗಿ ಕೃಷಿ ಜಮೀನಿಗೆ ನುಗ್ಗುತ್ತಿವೆ ಆದ್ದರಿಂದ ವರ್ಷದಲ್ಲಿ ಎರಡು ಬಾರಿಯಾದರೂ ಜನರು ಕಾಡಿಗೆ ಹೋಗಿ ಬೊಬ್ಬೆ ಹೊಡೆದು ಪ್ರಾಣಿಗಳಿಗೆ ಭಯ ಹುಟ್ಟಿಸಲು ಅರಣ್ಯ ಇಲಾಖೆ ಅವಕಾಶ ಮಾಡಿಕೊಟ್ಟರೆ ಕಾಡು ಪ್ರಾಣಿಗಳು ಮನುಷ್ಯರಿಗೆ ಹೆದರುತ್ತೇವೆ ಎಂದು ಸದಸ್ಯ ಬಟ್ಯಪ್ಪ ರೈ ದೇರ್ಲ ತಿಳಿಸಿದರು. ಈ ರೀತಿ ಮಾಡುವ ಮೂಲಕ ಕಾಡು ಪ್ರಾಣಿಗಳಿಗೆ ಭಯ ಹುಟ್ಟಿಸಿದರೆ ಅದು ಕೃಷಿ ನಾಶ ಮಾಡುವುದು ಜನರಿಗೆ ತೊಂದರೆ ಕೊಡುವುದು ತಪ್ಪುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದರು.

‘ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದನೆ ಕೊಡುವ ಕೆಲಸ ಗ್ರಾಪಂನಿಂದ ಆಗುತ್ತಿದೆ. ಈಗಾಗಲೇ ನೀರಿನ ಶುಲ್ಕ ಪಾವತಿಸದವರ ಸಂಪರ್ಕ ಕಡಿತ ಮಾಡಿದ್ದೇವೆ. ಸಂಪರ್ಕ ಕಡಿತ ಮಾಡುವುದೇ ನಮ್ಮ ಉದ್ದೇಶವಲ್ಲ ಫಲಾನುಭವಿಗಳು ನೀರಿನ ಬಿಲ್ ಕಟ್ಟದಿದ್ದರೆ ಸಮಸ್ಯೆಯಾಗುತ್ತದೆ ಇದನ್ನು ತಿಳಿದುಕೊಳ್ಳಬೇಕಾಗಿದೆ. ಸ್ವಚ್ಛತೆಯಲ್ಲಿ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ವಿಶೇಷವಾಗಿ ಮಕ್ಕಳು ಕೈ ಜೋಡಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ

LEAVE A REPLY

Please enter your comment!
Please enter your name here