ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೌಕ್ರಾಡಿ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಫೆ.10ರಂದು ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ ಅವರ ಅಧ್ಯಕ್ಷತೆಯಲ್ಲಿ ಇಚ್ಲಂಪಾಡಿ ರಾಜೀವ್ ಗಾಂಧಿ ಸೇವಾಕೇಂದ್ರದಲ್ಲಿ ನಡೆಯಿತು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ನೋಡೆಲ್ ಅಧಿಕಾರಿಯಾಗಿದ್ದರು. ಜೆಜೆಎಂ ಕಾಮಗಾರಿ ಕುರಿತು ಸಂಬಂಧಿಸಿದ ಇಲಾಖೆಯ ಇಂಜಿನಿಯರ್ ಈಶ್ವರ ಕೆ.ಎಸ್ ಅವರು ಮಾಹಿತಿ ನೀಡುತ್ತಿದ್ದ ವೇಳೆ ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥರಾದ ಜಾನ್ಸನ್ ಗಲ್ಬಾವೋ, ಜಾರ್ಜ್ಕುಟ್ಟಿ ಉಪದೇಶಿ, ಜಿ.ತೋಮಸ್, ಜಾನ್ಸನ್, ಅಲೆಕ್ಸ್ ವರ್ಗೀಸ್, ವರ್ಗೀಸ್ ಅಬ್ರಹಾಂ ಮತ್ತಿತರರು, ಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಈಶ್ವರ ಅವರು, ಇಚ್ಲಂಪಾಡಿ ಗ್ರಾಮಕ್ಕೆ ಜೆಜೆಎಂನಲ್ಲಿ 82 ಲಕ್ಷ ರೂ.ಅನುದಾನ ಬಂದಿದ್ದು ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಕೌಕ್ರಾಡಿ ಗ್ರಾಮದಲ್ಲಿ 2ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹಸ್ತಾಂತರ ಆದ ಬಳಿಕವೇ ಗುತ್ತಿಗೆದಾರರಿಗೆ ಬಿಲ್ಲು ಪಾವತಿಯಾಗಲಿದೆ. ಕಾಮಗಾರಿ ಪೂರ್ಣಗೊಂಡ ನಂತರೇ ಗ್ರಾಮಪಂಚಾಯತ್ಗೆ ಹಸ್ತಾಂತರ ಆಗಲಿದೆ ಎಂದರು. ಆದರೂ ಸಮಧಾನಗೊಳ್ಳದ ಗ್ರಾಮಸ್ಥರು ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಮರ್ಪಕ ಕಾಮಗಾರಿ ನಡೆಸುವಂತೆ ಒತ್ತಾಯಿಸಿದರು. ನಳ್ಳಿ ನೀರಿಗೆ ಅಳವಡಿಸಿದ ಟ್ಯಾಪ್ ಪ್ರದರ್ಶಿಸಿದ ಜಾರ್ಜ್ಕುಟ್ಟಿ ಉಪದೇಶಿ ಅವರು ಸರಿಯಾದ ಟ್ಯಾಪ್ಗಳನ್ನು ಅಳವಡಿಸುವಂತೆಯೂ ಒತ್ತಾಯಿಸಿದರು.

ಅಂಗನವಾಡಿ ಶೌಚಾಲಯ ಕಾಮಗಾರಿ ವಿಚಾರ-ಚರ್ಚೆ:
ಕೊಕ್ಕಡ ಚರ್ಚ್ ಅಂಗನವಾಡಿಯ ಶೌಚಾಲಯ ಕಾಮಗಾರಿ ಅಪೂರ್ಣವಾಗಿರುವ ವಿಚಾರವೂ ಪ್ರಸ್ತಾಪಗೊಂಡು ಬಿರುಸಿನ ಚರ್ಚೆ ನಡೆಯಿತು. 2022-23ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಅನುದಾನದಲ್ಲಿ ಶೌಚಾಲಯ ಕಾಮಗಾರಿ ನಡೆದಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೂ 50 ಸಾವಿರ ರೂ.ಅನುದಾನ ಬಂದಿದೆ. ಆದರೆ ಈ ಅನುದಾನದ ಕಾಮಗಾರಿ ಇನ್ನೂ ನಡೆದಿಲ್ಲ ಎಂದು ಜಾನ್ಸನ್ ಅವರು ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಸ್ಪಷ್ಟನೆ ನೀಡಿದ ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ಅವರು, ಸದ್ರಿ ಅಂಗನವಾಡಿಯ ಶೌಚಾಲಯದ ಮುಂದುವರಿದ ಕಾಮಗಾರಿಗೆ ಇಲಾಖೆಯಿಂದ 40 ಸಾವಿರ ರೂ.ಅನುದಾನ ಮಂಜೂರು ಆಗಿದೆ. ಹೆಬಿಟ್ಯುಟ್ ಸೆಂಟರ್ ಸಂಸ್ಥೆಯವರಿಗೆ ಟೆಂಡರ್ ಆಗಿದೆ. ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ಮುಂದಿನ ಮಾರ್ಚ್ 31ರೊಳಗೆ ಕಾಮಗಾರಿ ಮುಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಇದಕ್ಕೆ ಒಪ್ಪದ ಜಾನ್ಸನ್ ಅವರು ಕಳೆದ ಎರಡುಮೂರು ವರ್ಷದಿಂದ ಕಾಮಗಾರಿ ನಡೆಸದೇ ಇರುವ ಸಂಸ್ಥೆಯವರು ಮಾ.31ರೊಳಗೆ ಹೇಗೆ ಮುಗಿಸಿಕೊಡಲಿದ್ದಾರೆ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಮೇಲ್ವಿಚಾರಕಿ ಪುಷ್ಪಾವತಿ ಹಾಗೂ ಜಾನ್ಸನ್ ಅವರ ಮಧ್ಯೆ ಸುಮಾರು ಹೊತ್ತು ಚರ್ಚೆಯೂ ನಡೆಯಿತು. ಬಳಿಕ ಈ ವಿಚಾರಕ್ಕೆ ತೆರೆ ಎಳೆಯಲಾಯಿತಾದರೂ ಚರ್ಚೆಯಿಂದ ಬೇಸರಗೊಂಡ ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ಅವರು ಸಭೆಯ ಮಧ್ಯೆಯೇ ವೇದಿಕೆಯಿಂದ ನಿರ್ಗಮಿಸಿದ ಘಟನೆಯೂ ನಡೆಯಿತು.
ಅಪೂರ್ಣ ಅಂಬೇಡ್ಕರ್ ಭವನ:
ನೇತ್ರಾಳ ಎಂಬಲ್ಲಿರುವ ಅಂಬೇಡ್ಕರ್ ಭವನ ಕಾಮಗಾರಿ ಅಪೂರ್ಣವಾಗಿರುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂತು. ಇದಕ್ಕೆ ಪ್ರತಿಕ್ರಿಯಸಿದ ಸದಸ್ಯ ಹನೀಫ್ ಅವರು, ನೇತ್ರಾಳದಲ್ಲಿ ಅಂಬೇಡ್ಕರ್ ಭವನ ಹಾಗೂ ಈ ಕಟ್ಟಡದ ಕೆಳಗೆ ಅಂಗಡಿ ಕೋಣೆ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣ ಆಗಬೇಕಿದೆ ಎಂದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉದಯಕುಮಾರ್ ಅವರು, ಮುಂದಿನ ಬಜೆಟ್ನಲ್ಲಿ ಅನುದಾನ ಇಟ್ಟು ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಇಚ್ಲಂಪಾಡಿಯ ರಾಜೀವಗಾಂಧಿ ಸೇವಾ ಕೇಂದ್ರ ಹಾಗೂ ಜಿಮ್ ಕಟ್ಟಡದ ಕಾಮಗಾರಿಯ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು.
27.33 ಲಕ್ಷ ರೂ.ವಿದ್ಯುತ್ ಬಿಲ್ ಬಾಕಿ:
ಗ್ರಾಮ ಪಂಚಾಯತ್ನಿಂದ ಮೆಸ್ಕಾಂಗೆ ಪಾವತಿಸಲು 27.33 ಲಕ್ಷ ರೂ.ಬಾಕಿ ಇರುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂತು. ಇಷ್ಟೊಂದು ಬಿಲ್ಲು ಬಾಕಿ ಇರಿಸಿದ್ದು ಇದಕ್ಕೆ ವರ್ಷಕ್ಕೆ 27 ಸಾವಿರ ರೂ.ಬಡ್ಡಿ ಪಾವತಿಸಬೇಕಾಗುತ್ತದೆ. ಇದರಿಂದ ಅಭಿವೃದ್ಧಿ ಕೆಲಸ ಹೇಗೆ ಸಾಧ್ಯ ಎಂದೂ ಗ್ರಾಮಸ್ಥ ಜಾನ್ಸನ್ ಹಾಗೂ ಇತರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉದಯಕುಮಾರ್ ಅವರು, ಮುಂದಿನ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗೆ ಅನುದಾನ ಕಡಿಮೆ ಮಾಡಿ ವಿದ್ಯುತ್ ಬಿಲ್ಲು ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಮಾತನಾಡಿದ ಸದಸ್ಯ ಹನೀಫ್ ಅವರು ಕುಡಿಯುವ ನೀರಿಗೆ ಸಂಬಂಧಿಸಿದ ಸ್ಥಾವರಗಳಿಗೆ ಹೆಚ್ಚಿನ ವಿದ್ಯುತ್ ಬಿಲ್ಲು ಬರುತ್ತಿದೆ. ಇದು ಹೊರೆಯಾಗುತ್ತಿದೆ ಎಂದರು. ಗ್ರಾಮ ಪಂಚಾಯತ್ನಿಂದ ನೀರು ಪೂರೈಕೆಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಜಾನ್ಸನ್ ಅವರು ಆರೋಪಿಸಿದರು.
ಆಸ್ಪತ್ರೆ, ಹೊರಠಾಣೆ ಮೇಲ್ದರ್ಜೆಗೇರಿಸಿ:
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ನೆಲ್ಯಾಡಿ ಹೊರಠಾಣೆ ಮೇಲ್ದರ್ಜೆಗೇರಿಸುವಂತೆ ಹಾಗೂ ಹೆಚ್ಚಿನ ಸಿಬ್ಬಂದಿ ಒದಗಿಸುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ಇಚ್ಲಂಪಾಡಿಗೆ 108 ಆಂಬುಲೆನ್ಸ್ ಬೇಕು:
ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ ಹೋಗುವ ಪ್ರವಾಸಿಗರ ನೂರಾರು ವಾಹನಗಳು ಇಚ್ಲಂಪಾಡಿ-ಪೆರಿಯಶಾಂತಿ ಮಾರ್ಗವಾಗಿ ಸಂಚರಿಸುತ್ತಿವೆ. ಇಚ್ಲಂಪಾಡಿ ಭಾಗದಲ್ಲಿ ಪದೇ ಪದೇ ಅಪಘಾತಗಳೂ ನಡೆಯುತ್ತಿವೆ. ಆದ್ದರಿಂದ ಇಚ್ಲಂಪಾಡಿಗೆ 108 ಆಂಬುಲೆನ್ಸ್ ಒದಗಿಸಬೇಕು ಎಂದು ಜಿ.ತೋಮಸ್ ಅವರು ಒತ್ತಾಯಿಸಿದರು. ಅಲ್ಲದೇ ಇಚ್ಲಂಪಾಡಿ ಪೇಟೆಯಲ್ಲಿ ಹಂಪ್ಸ್ ಅಳವಡಿಸುವಂತೆಯೂ ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಡಾ.ಶಿಶಿರ ಅವರು ನೆಲ್ಯಾಡಿ ಆಸ್ಪತ್ರೆಗೆ 108 ಆಂಬುಲೆನ್ಸ್ ಒದಗಿಸುವಂತೆ ಲಿಖಿತವಾಗಿ ಮನವಿ ಮಾಡಿದ್ದೇನೆ ಎಂದರು.
ಉಪಕೇಂದ್ರಗಳಲ್ಲಿ ಕೌನ್ಸಿಲಿಂಗ್ ನಡೆಸಬೇಕು:
ಕೆಲವೊಂದು ಮನೆಯವರಿಗೆ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅವರು ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಮನೆಯವರನ್ನು ಉಪಕೇಂದ್ರಗಳಿಗೆ ಕರೆಸಿ ಕೌನ್ಸಿಲಿಂಗ್ ಮಾಡಬೇಕು ಎಂದು ಜಾನ್ಸನ್ ಒತ್ತಾಯಿಸಿದರು.
ಇಲಾಖಾಧಿಕಾರಿಗಳ ಗೈರು ಹಾಜರಿಗೆ ಆಕ್ರೋಶ:
ಸಭೆ ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಸಿದ ಅಧ್ಯಕ್ಷ ಉದಯಕುಮಾರ್ ಅವರು, ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ಕಳಿಸಲಾಗಿದೆ. ದೂರವಾಣಿ ಮೂಲಕವೂ ಸಂಪರ್ಕಿಸಿದ್ದು ಬರುವುದಾಗಿ ತಿಳಿಸಿದ್ದಾರೆ ಎಂದರು. ಸಭೆಯಲ್ಲಿ ಗ್ರಾಮಸ್ಥರ ಕೊರತೆ ಬಗ್ಗೆಯೂ ಅಸಮಾಧಾನ ಸೂಚಿಸಿದ ಜಾನ್ಸನ್ ಗಲ್ಬಾವೋ ಮತ್ತಿತರರು, ಗ್ರಾಮ ಪಂಚಾಯತ್ ವತಿಯಿಂದ ಸಮರ್ಪಕವಾಗಿ ಮೈಕ ಪ್ರಚಾರ ಮಾಡಿಲ್ಲ ಎಂದು ಹೇಳಿದರು. ಮುಂದಿನ ಗ್ರಾಮಸಭೆಯಲ್ಲಿ ಸಮರ್ಪಕವಾಗಿ ಪ್ರಚಾರ ಮಾಡಲಾಗುವುದು ಎಂದು ಪಿಡಿಒ ದೇವಿಕಾ ಅವರು ತಿಳಿಸಿದರು.
ಸದಸ್ಯರ ಗೈರು ಹಾಜರಿಗೂ ಆಕ್ಷೇಪ:
ಗ್ರಾ.ಪಂ.ನ ಕೆಲ ಸದಸ್ಯರು ವಾರ್ಡ್ಸಭೆ, ಗ್ರಾಮಸಭೆಗೂ ಹಾಜರಾಗದೇ ಇರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಸದಸ್ಯರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಸಭಾ ಭತ್ಯೆ ನೀಡಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ದೇವಿಕಾ ಅವರು, ವಾರ್ಡ್ಸಭೆ, ಗ್ರಾಮಸಭೆಗೆ ಗೈರು ಹಾಜರಿಯಾದ ಸದಸ್ಯರಿಗೆ ನೋಟಿಸ್ ಜಾರಿಗೊಳಿಸುವುದಾಗಿ ಹೇಳಿದರು. ಒಂದೇ ಅವಧಿಯಲ್ಲಿ ಎರಡು ವಾರ್ಡ್ಗಳಲ್ಲಿ ಸಭೆ ನಡೆಸದಂತೆಯೂ ಗ್ರಾಮಸ್ಥರು ಒತ್ತಾಯಿಸಿದರು.
ಉಪ್ಪಿನಂಗಡಿ ವಲಯ ಗಸ್ತು ಅರಣ್ಯ ಪಾಲಕ ದಿವಾಕರ ರೈ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್ ಎಂ., ಸಿಆರ್ಪಿ ಪ್ರಕಾಶ್ ಬಿ., ಮೆಸ್ಕಾಂ ಜೆಇ ರಾಮಣ್ಣ, ಅಂಗನವಾಡಿ ವಲಯ ಮೇಲ್ವಿಚಾರಕಿ ಪುಷ್ಪಾವತಿ ಡಿ.ಎಂ., ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಜೆಜೆಎಂನ ಇಂಜಿನಿಯರ್ ಈಶ್ವರ ಕೆ.ಎಸ್., ನೆಲ್ಯಾಡಿ ಠಾಣೆಯ ಹೆಡ್ಕಾನ್ಸ್ಸ್ಟೇಬಲ್ ಪ್ರವೀಣ್, ಅಲ್ಪಸಂಖ್ಯಾತ ಇಲಾಖೆಯ ಕಮಲ್ ಅವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ವನಿತಾ ಎಂ., ಸದಸ್ಯರಾದ ಸುಧಾಕರ, ಹನೀಫ್ ಎಂ., ಜನಾರ್ದನ, ಕುರಿಯಾಕೋಸ್ ಯಾನೆ ರೋಯಿ ಟಿ.ಎಂ., ದಿನೇಶ್, ಡೈಸಿವರ್ಗೀಸ್, ಶೈಲಾ, ಭವಾನಿ, ಸಂಧ್ಯಾ ಪಿ.ಎಸ್., ರತ್ನಾವತಿ, ಪುಷ್ಪಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಪಿಡಿಒ ದೇವಿಕಾ ಸ್ವಾಗತಿಸಿದರು. ಸಿಬ್ಬಂದಿಗಳಾದ ಕಸ್ತೂರಿ, ಮಂಜುಳಾ ವರದಿ ವಾಚಿಸಿದರು. ಇತರೇ ಸಿಬ್ಬಂದಿಗಳು ಸಹಕರಿಸಿದರು.