ಕೊಕ್ಕಡ: ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ 5ನೇ ಶಾಖೆ ಉದ್ಘಾಟನೆ

0

  • ಜಿಲ್ಲೆಯಲ್ಲಿ 2ನೇ ಸ್ಥಾನ; ವಿನಯಕುಮಾರ್ ಸೊರಕೆ
  • ಇನ್ನಷ್ಟೂ ಶಾಖೆ ಆರಂಭಿಸಲಿ: ಭಾಗೀರಥಿ ಮುರುಳ್ಯ
  • ಮಾರ್ಗದರ್ಶಕ ಸಹಕಾರ ಸಂಘ: ಸಂಜೀವ ಪೂಜಾರಿ ಬೊಳ್ಳಾಯಿ
  • ಜನಸ್ನೇಹಿಯಾಗಿ ಬೆಳೆಯಲಿ: ಬಾಲಕೃಷ್ಣ ಕೆದಿಲಾಯ
  • ಬ್ಯಾಂಕಿಂಗ್ ವ್ಯವಸ್ಥೆ ಅನಿವಾರ್ಯ: ಡಾ.ಸದಾನಂದ ಕುಂದರ್
  • ಹಿರಿಯರ ಸಮರ್ಪಣೆ: ಡಾ.ಶ್ವೇತಾಆಶಿತ್
  • ತ್ವರಿತ ಸೇವೆ ಸಿಗಬೇಕು: ಬೇಬಿವಸಂತ್
  • ಹಿಂದಿನ ಅಧ್ಯಕ್ಷರುಗಳ ಶ್ರಮದ ಫಲ: ಅಜಿತ್‌ಕುಮಾರ್
  • ಸಂಘದ ಮೂಲಕ ಆರ್ಥಿಕ ಚೈತನ್ಯ : ಡಾ.ರಾಜಾರಾಮ್

ನೆಲ್ಯಾಡಿ: ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ 5ನೇ ಕೊಕ್ಕಡ ಶಾಖೆ ಫೆ.16ರಂದು ಬೆಳಿಗ್ಗೆ ಕೊಕ್ಕಡ ವೈಷ್ಣವಿ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು.


ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಅವರು ಶಾಖೆ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಶೇಂದಿ ಅಮಲು ಪದಾರ್ಥವಲ್ಲ. ಅದಕ್ಕೆ ರೋಗ ತಡೆಯುವ ಶಕ್ತಿ ಇದೆ. ಕೆಲ ಜಿಲ್ಲೆಗಳಲ್ಲಿ ಕೃತಕ ಶೇಂದಿ ತಯಾರಿಸಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಿ ಶೇಂದಿ ಮಾರಾಟ ನಿಷೇಧ ಮಾಡಲಾಗಿತ್ತು. ಆ ಸಂದರ್ಭದಲ್ಲಿ ದ.ಕ.,ಉಡುಪಿ ಜಿಲ್ಲೆಯಲ್ಲಿ ಸುಮಾರು 11 ಸಾವಿರ ಮಂದಿ ಈ ವೃತ್ತಿ ಮಾಡುತ್ತಿದ್ದು ಅವರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಶೇಂದಿ ನಿಷೇಧದ ವಿರುದ್ಧ ದ.ಕ.,ಉಡುಪಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹೋರಾಟವೂ ನಡೆಯಿತು. ಮೂವರು ಶಾಸಕರೂ ರಾಜೀನಾಮೆ ನೀಡಿದ್ದರು. ಆ ಬಳಿಕ ರಾಜ್ಯದಲ್ಲಿ ಬಂಗಾರಪ್ಪ ಅವರ ನೇತೃತ್ವದ ಸರಕಾರ ಬಂದ ವೇಳೆ ನಾನೂ ಶಾಸಕನಾಗಿದ್ದೆ. ಈ ಸಂದರ್ಭದಲ್ಲಿ ಶೇಂದಿ ವೃತ್ತಿ ಬಾಂಧವರ ಹಿತದೃಷ್ಟಿಯಿಂದ ಈ ವೃತ್ತಿ ಮಾಡುತ್ತಿದ್ದವರನ್ನು ಹಾಗೂ ಶೇಂದಿ ಮಾರಾಟಗಾರರನ್ನು ಸೇರಿಸಿಕೊಂಡು ಸಹಕಾರ ಸಂಘ ಆರಂಭಿಸಲಾಯಿತು. ಪುತ್ತೂರು ತಾಲೂಕಿನಲ್ಲಿಯೂ 5 ಮೂರ್ತೆದಾರರ ಸೇವಾ ಸಹಕಾರ ಸಂಘಗಳು ಆರಂಭಗೊಂಡಿದ್ದವು. ಇದೀಗ ಮೂರ್ತೆದಾರಿಕೆ ಕಡಿಮೆಯಾಗುತ್ತಿದ್ದಂತೆ ಮೂರ್ತೆದಾರರ ಸೇವಾ ಸಹಕಾರ ಸಂಘಗಳು ಬ್ಯಾಂಕ್ ಆಗಿ ಪರಿವರ್ತನೆಗೊಂಡು ಉತ್ತಮ ವ್ಯವಹಾರ ಮಾಡುತ್ತಿವೆ.

ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿನ ಮೂರ್ತೆದಾರರ ಸೇವಾ ಸಹಕಾರ ಸಂಘಗಳ ಪೈಕಿ ಕೋಟ ಪ್ರಥಮ ಸ್ಥಾನದಲ್ಲಿದ್ದು ಉಪ್ಪಿನಂಗಡಿ ಸಂಘ 2ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘವು 1ನೇ ಸ್ಥಾನಕ್ಕೆ ಬರಬೇಕು ಎಂದು ಹೇಳಿದರು. ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ದ.ಕ.ಜಿಲ್ಲೆಯಲ್ಲಿ ಉಗಮಗೊಂಡು ಈಗ ದೇಶದೆಲ್ಲೆಡೆ ಪ್ರಸಿದ್ಧಿ ಪಡೆದುಕೊಂಡಿವೆ. ಬ್ಯಾಂಕ್‌ಗಳ ತವರು ಜಿಲ್ಲೆಯಾಗಿರುವ ದ.ಕ., ಸಹಕಾರ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ಆರಂಭಗೊಂಡಿರುವ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ವಿನಯಕುಮಾರ್ ಸೊರಕೆ ಹೇಳಿದರು.

ಇನ್ನಷ್ಟೂ ಶಾಖೆ ಆರಂಭಿಸಲಿ:
ಭದ್ರತಾ ಕೋಶ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಶೇಂದಿ ಭೂಲೋಕದ ಅಮೃತ. ಸಂಪ್ರದಾಯದ ಪ್ರಕಾರ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಶೇಂದಿ ಬಳಕೆ ಮಾಡುತ್ತೇವೆ. ಮೂರ್ತೆದಾರಿಕೆ ಮಾಡುವವರ ಏಳಿಗೆಗಾಗಿ ಆರಂಭಗೊಂಡಿರುವ ಮೂರ್ತೆದಾರರ ಸೇವಾ ಸಹಕಾರ ಸಂಘಗಳು ಇದೀಗ ಬ್ಯಾಂಕಿಂಗ್ ವ್ಯವಹಾರ ಮಾಡುವ ಮೂಲಕ ಹಲವು ಕುಟುಂಬಗಳಿಗೆ ಉದ್ಯೋಗ ನೀಡುವುದರೊಂದಿಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ಸಾಲ ಸೇರಿದಂತೆ ವಿವಿಧ ಸವಲತ್ತು ನೀಡುವ ಮೂಲಕ ಆ ಕುಟುಂಬಗಳಿಗೂ ಆಧಾರವಾಗಿದೆ ಎಂದರು. ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಯುವ ಜನತೆ ಉಳಿಸಿಕೊಳ್ಳಬೇಕು. ಸಹಕಾರ ಮನೋಭಾವನೆ ಇದ್ದಲ್ಲಿ ಸಹಕಾರ ಸಂಘ ಬೆಳೆಯಲಿದೆ. ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘವು ಇನ್ನಷ್ಟೂ ಬೆಳೆಯಲಿ. ಇನ್ನಷ್ಟೂ ಶಾಖೆ ಆರಂಭಿಸುವಂತಾಗಲಿ ಎಂದರು.

ಮಾರ್ಗದರ್ಶಕ ಸಹಕಾರ ಸಂಘ:
ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಬಿ.ಸಿ.ರೋಡು ಇದರ ಅಧ್ಯಕ್ಷರಾದ ಸಂಜೀವ ಪೂಜಾರಿ ಬೊಳ್ಳಾಯಿ ಮಾತನಾಡಿ, ದ.ಕ.,ಉಡುಪಿ ಜಿಲ್ಲೆಯಲ್ಲಿ 28 ಮೂರ್ತೆದಾರರ ಸೇವಾ ಸಹಕಾರಿ ಸಂಘಗಳಿದ್ದು ಈ ಪೈಕಿ 18 ಸಂಘಗಳು ಬ್ಯಾಂಕಿಂಗ್ ಸೇವೆ ಆರಂಭಿಸಿ ಉತ್ತಮ ವ್ಯವಹಾರ ನಡೆಸುವ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರವಾಗಿದೆ. ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ಜಿಲ್ಲೆಯ ಇತರ ಸಂಘಗಳಿಗೆ ಮಾರ್ಗದರ್ಶಕ ಸಂಘವಾಗಿದೆ. ಇಲ್ಲಿ ಈ ಹಿಂದೆ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸದಾನಂದ ಡಿ.ಎಸ್.,ಅವರು ಜಿಲ್ಲೆಯ ಇತರ ಮೂರ್ತೆದಾರರ ಸೇವಾ ಸಹಕಾರ ಸಂಘಗಳಿಗೆ ಮಾರ್ಗದರ್ಶಕರಾಗಿದ್ದರು ಎಂದರು. ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘವೂ ತನ್ನ ವ್ಯಾಪ್ತಿಯನ್ನು ಜಿಲ್ಲಾಮಟ್ಟಕ್ಕೆ ವಿಸ್ತರಿಸಿಕೊಂಡು ಹೆಚ್ಚಿನ ಶಾಖೆ ತೆರೆಯಬೇಕು. ಸಂಘದಲ್ಲಿ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಮುಂದೆ ಡಿಸಿಸಿ ಬ್ಯಾಂಕ್‌ನ ಹಂತಕ್ಕೆ ಬೆಳೆಯುವಂತಾಗಬೇಕೆಂದು ಹೇಳಿದರು.

ಜನಸ್ನೇಹಿಯಾಗಿ ಬೆಳೆಯಲಿ:
ಅಮೃತಾ ನಿಧಿ ಯೋಜನೆ ಉದ್ಘಾಟಿಸಿದ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಕೆದಿಲಾಯ ಮಾತನಾಡಿ, ಇಲ್ಲಿ ಆರಂಭಗೊಂಡಿರುವ ಶಾಖೆಯು ಜನಸ್ನೇಹಿಯಾಗಿ, ಗ್ರಾಹಕರಿಗೆ ಸರಿಯಾದ ಸಹಕಾರ ನೀಡುವ ಮೂಲಕ ಪ್ರಸಿದ್ಧಿ ಹೊಂದಲಿ. ಸಂಘವು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಇನ್ನಷ್ಟೂ ಶಾಖೆ ಆರಂಭಿಸುವಂತಾಗಲಿ ಎಂದು ಹೇಳಿದರು.

ಬ್ಯಾಂಕಿಂಗ್ ವ್ಯವಸ್ಥೆ ಅನಿವಾರ್ಯ:
ಠೇವಣಿ ಪತ್ರ ಬಿಡುಗಡೆಗೊಳಿಸಿದ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಡಾ.ಸದಾನಂದ ಕುಂದರ್ ಅವರು ಮಾತನಾಡಿ, ಈಗಿನ ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಅನಿವಾರ್ಯ ಹಾಗೂ ಅವಶ್ಯಕವೂ ಆಗಿದೆ. ಪುತ್ತೂರು ತಾಲೂಕಿನ ಐದೂ ಮೂರ್ತೆದಾರರ ಸೇವಾ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜನಸ್ನೇಹಿಯಾಗಿ ಎಲ್ಲಾ ಸಮಾಜದವರಿಗೂ ಸೇವೆ ನೀಡುತ್ತಿವೆ. ಈ ಸಂಘ ಇನ್ನಷ್ಟೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.

ಹಿರಿಯರ ಸಮರ್ಪಣೆ: ಡಾ.ಶ್ವೇತಾಆಶಿತ್
ಅತಿಥಿಯಾಗಿದ್ದ ಉಪ್ಪಿನಂಗಡಿ ಅದ್ವಿಕ್ ಮಲ್ಟಿಸ್ಪೆಶಾಲಿಟಿ ದಂತ ಚಿಕಿತ್ಸಾಲಯದ ದಂತ ವೈದ್ಯೆ ಡಾ.ಶ್ವೇತಾಆಶಿತ್ ಅವರು ಮಾತನಾಡಿ, 5ನೇ ಶಾಖೆ ಆರಂಭಿಸಿರುವ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಇದೊಂದು ಮಹತ್ವದ ದಿನವಾಗಿದೆ. ಹಿರಿಯರ ಸಮರ್ಪಣಾ ಮನೋಭಾವನೆಯಿಂದ ಸಂಘ ಈ ಮಟ್ಟಕ್ಕೆ ಬೆಳೆದಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಲು ಸಂಘ ಸಹಕಾರಿಯಾಗಿದೆ ಎಂದರು.

ತ್ವರಿತ ಸೇವೆ ಸಿಗಬೇಕು: ಬೇಬಿವಸಂತ್
ಕೊಕ್ಕಡ ಗ್ರಾ.ಪಂ.ಅಧ್ಯಕ್ಷೆ ಬೇಬಿವಸಂತ್ ಅವರು ಮಾತನಾಡಿ, ಈ ಭಾಗದ ಜನರು ಶಾಖೆಯಲ್ಲಿ ವ್ಯವಹಾರ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಸಿಬ್ಬಂದಿಗಳೂ ತ್ವರಿತ ಸೇವೆ ನೀಡುವ ಮೂಲಕ ಗ್ರಾಹಕರ ಪ್ರೀತಿ, ವಿಶ್ವಾಸಗಳಿಸಬೇಕು. ಈ ರೀತಿಯಾದಲ್ಲಿ ಸಂಘ ಎತ್ತರಕ್ಕೆ ಬೆಳೆಯಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕೆಂದು ಹೇಳಿದರು.

ಹಿಂದಿನ ಅಧ್ಯಕ್ಷರುಗಳ ಶ್ರಮದ ಫಲ:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಅಜಿತ್‌ಕುಮಾರ್ ಪಾಲೇರಿ ಮಾತನಾಡಿ, ಈ ಹಿಂದೆ ಸಂಘದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರುಗಳ, ನಿರ್ದೇಶಕರುಗಳ ಶ್ರಮದ ಫಲದಿಂದ ಸಂಘ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಸಂಘದ ಹಿರಿಯರ ಸಹಕಾರ, ಪ್ರೇರಣೆಯಿಂದಲೇ ೫ನೇ ಶಾಖೆ ಆರಂಭಗೊಂಡಿದೆ. ಇನ್ನಷ್ಟೂ ಶಾಖೆ ಆರಂಭಿಸಲು ಎಲ್ಲರ ಸಹಕಾರ ಬೇಕೆಂದು ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷರೂ, ಹಾಲಿ ನಿರ್ದೇಶಕರೂ ಆದ ಡಾ.ರಾಜಾರಾಮ್ ಕೆ.ಬಿ. ಅವರು, ಮೂರ್ತೆದಾರಿಕೆ ಬಿಲ್ಲವ ಸಮಾಜದ ಉಪಕಸುಬು ಆಗಿದೆ. ಮೂರ್ತೆದಾರಿಕೆಯಿಂದ ಕಿಂಚಿತ್ ಸಂಪಾದನೆ ಆಗುತಿತ್ತು. ಶೇಂದಿ ನಿಷೇಧದ ಸಂದರ್ಭದಲ್ಲಿ ಈ ವೃತ್ತಿ ಬಾಂಧವರು ಅತಂತ್ರ ಸ್ಥಿತಿಗೆ ತಲುಪಿದ್ದರು. ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ವಸಂತ ಬಂಗೇರ ಸಹಿತ ಹಲವು ಹಿರಿಯರು ಮೂರ್ತೆದಾರಿಕೆ ಮಾಡುವವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಮೂರ್ತೆದಾರರ ಸೇವಾ ಸಹಕಾರ ಸಂಘ ಆರಂಭಿಸಲು ಕಾರಣಕರ್ತರಾಗಿದ್ದಾರೆ. ಅದರಂತೆ 1990-91ರಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘ ಆರಂಭಗೊಂಡಿತು. ಆ ಬಳಿಕ ಬ್ಯಾಂಕಿಂಗ್ ವ್ಯವಹಾರವೂ ಆರಂಭಿಸಿ 2023-24ನೇ ಸಾಲಿನಲ್ಲಿ 161 ಕೋಟಿ ರೂ.ವ್ಯವಹಾರ ನಡೆಸಿ 60 ಲಕ್ಷ ರೂ. ನಿವ್ವಳ ಲಾಭಗಳಿಸಿಕೊಂಡಿದೆ. ಉಪ್ಪಿನಂಗಡಿ ಸೂರಜ್ ಕಾಂಪ್ಲೆಕ್ಸ್‌ನಲ್ಲಿ ಸ್ವಂತ ಕಚೇರಿ ಹೊಂದಿದ್ದು ಈಗಾಗಲೇ ಹಿರೆಬಂಡಾಡಿ, ನೆಲ್ಯಾಡಿ, ಉದನೆಯಲ್ಲಿ ಶಾಖೆ ಹೊಂದಿದ್ದು ಇದೀಗ ಕೊಕ್ಕಡದಲ್ಲೂ ಶಾಖೆ ಆರಂಭಿಸುವ ಮೂಲಕ ಸಮಾಜದ ಆರ್ಥಿಕ ಸ್ವಾವಲಂಬನೆಗೆ ಚೈತನ್ಯ ನೀಡುತ್ತಿದೆ. 25 ಕುಟುಂಬಗಳಿಗೆ ಉದ್ಯೋಗ ನೀಡಿದೆ ಎಂದರು.

ಉದ್ಯಮಿ, ಕೊಕ್ಕಡ ವೈಷ್ಣವಿ ಕಾಂಪ್ಲೆಕ್ಸ್ ಮಾಲಕ ರಾಜಾರಾಮ್ ಹೆಬ್ಬಾರ್, ಸಂಘದ ಉಪಾಧ್ಯಕ್ಷ ಶೀನಪ್ಪ ಪೂಜಾರಿ ಹೂವಿನಮಜಲು, ನಿರ್ದೇಶಕರಾದ ಮಾಧವ ಪೂಜಾರಿ ಆರಿಜಾಲು, ಶಶಿಧರ ಕೆ.ಸಿ.ಪಠೇರಿ, ಚಂದ್ರಶೇಖರ ಬಾಣಜಾಲು, ಚೆನ್ನಪ್ಪ ಪೂಜಾರಿ ಕೊಚ್ಚಿಲ, ಚಂದ್ರಕಲಾ ದಾಸರಮೂಲೆ, ಸುನೀತಾ ಕೊಡಿಪಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸ್ಥಾಪಕಾಧ್ಯಕ್ಷ ವರದರಾಜ್ ಎಂ., ಯೋಗಿನಿ ಡೆಂಬಲೆ, ದೇವಪ್ಪ ಪೂಜಾರಿ ಪಡ್ಪು, ಅಶೋಕ್ ಕುಮಾರ್ ಪಡ್ಪು, ಶೇಖರ ಪೂಜಾರಿ ಶಿಬಾರ್ಲ, ವೆಂಕಪ್ಪ ಪೂಜಾರಿ ಮುರದಮೇಲು, ವಿದ್ಯಾನಿಡ್ಡೆಂಕಿ, ಯಶೋಧ, ಸೇಸಪ್ಪ ಪೂಜಾರಿ, ಜನಾರ್ದನ ಬಾಣಜಾಲು, ಕೃಷ್ಣಪ್ಪ ಪೂಜಾರಿ ಕಲ್ಲೇರಿ, ಮಾಧವ ಪೂಜಾರಿ ಕೊಡಪಟ್ಯ, ಶಿವಚಂದ್ರ ನಿಡ್ಡೆಂಕಿ, ತಿಮ್ಮಪ್ಪ ಮರುವೇಲು, ಎಲ್ಯಣ್ಣ ಪೂಜಾರಿ ಸೆಟ್ಲಪಾಲು, ರಾಜೇಶ್ ನೆಲ್ಯಾಡಿ, ನಂದಿನಿ ಡೆಂಬಲೆ, ಸುಮಿತ್ರಾ ಅವರು ಅತಿಥಿಗಳಿಗೆ ಶಾಲು ಹಾಕಿ, ಹೂ ನೀಡಿ ಗೌರವಿಸಿದರು. ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಜಿ.ವಂದಿಸಿದರು. ಸಿಬ್ಬಂದಿಗಳಾದ ನವೀನ್ ಪಡ್ಪು, ಅನಿತಾ ಕಾರ್ಯಕ್ರಮ ನಿರೂಪಿಸಿದರು. ಮೋಕ್ಷಾ ಮತ್ತು ಬಳಗದವರು ಪ್ರಾರ್ಥಿಸಿದರು.

ಕೊಕ್ಕಡ ಸಂತ ಜೋನರ ಬ್ಯಾಪ್ಟಿಸ್ಟ್ ದೇವಾಲಯದ ಧರ್ಮಗುರು ರೆ.ಫಾ.ಅನಿಲ್ ಪ್ರಕಾಶ್ ಡಿ.ಸಿಲ್ವಾ, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಕೆಡೆಂಜಿ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸುನೀಲ್ ದಡ್ಡು, ಉಪ್ಪಿನಂಗಡಿ ಗ್ರಾ.ಪಂ.ಸದಸ್ಯರಾದ ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ನಿವೃತ್ತ ತಹಶೀಲ್ದಾರ್ ಕೃಷ್ಣಪ್ಪ ಪೂಜಾರಿ ಡೆಂಬಳೆ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷ ಜನಾರ್ದನ ಕದ್ರ, ನಿರ್ದೇಶಕ ಲಕ್ಷ್ಮೀಶ ಬಂಗೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್‌ಕುಮಾರ್ ಅಗತ್ತಾಡಿ, ಗೋಳಿತ್ತೊಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪೂವಪ್ಪ ಪಾಲೇರಿ, ಶಾಲಿನಿ ಗೋಳಿತ್ತೊಟ್ಟು, ಡಿಸಿಸಿ ಬ್ಯಾಂಕ್ ನಿವೃತ್ತ ಮೇನೇಜರ್ ಸಿದ್ದಪ್ಪ ಗೌಡ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಜಿನ್ನಪ್ಪ, ಸಿವಿಲ್ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಸೋಮಸುಂದರ ಕೊಡಿಪಾನ, ನಾಣ್ಯಪ್ಪ ಪೂಜಾರಿ, ಚಂದ್ರಶೇಖರ, ಗುರುದೇವನ್, ಸದಾಶಿವ, ನೋಣಯ್ಯ ಪೂಜಾರಿ ಅಂಬರ್ಜೆ, ನೇಮಣ್ಣ ಪೂಜಾರಿ ಪಾಲೇರಿ ಸಹಿತ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು.

ಸನ್ಮಾನ:

ಕೊಕ್ಕಡ ವೈಷ್ಣವಿ ಕಾಂಪ್ಲೆಕ್ಸ್ ಮಾಲಕ ರಾಜಾರಾಮ್ ಹೆಬ್ಬಾರ್, ಸಂಘದ ಸಿಬ್ಬಂದಿ ರಾಜೇಶ್ ನೆಲ್ಯಾಡಿ ಅವರಿಗೆ ಶಾಲು, ಹಾರ, ಸ್ಮರಣಿಕೆ, ಫಲತಾಂಬೂಲ ನೀಡಿ ಗೌರವಿಸಲಾಯಿತು. ಉಪ್ಪಿನಂಗಡಿ ವ್ಯವಸಾಯಿಕ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸುನಿಲ್‌ಕುಮಾರ್ ದಡ್ಡು ಅವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here