ಪುತ್ತೂರು: ಸರ್ವೆ ಗ್ರಾಮದ ನೇರೊಳ್ತಡ್ಕ ಪರಿಸರದಲ್ಲಿ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ, ಆರೋಪ-ಪ್ರತ್ಯಾರೋಪ ನಡೆದ ಘಟನೆ ಫೆ.18ರಂದು ನಡೆಯಿತು. ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ನೇರೋಳ್ತಡ್ಕ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಕೂಡಾ ಅಲ್ಲಿಗೆ ಪರ್ಯಾಯ ವ್ಯವಸ್ಥೆಯನ್ನು ಗ್ರಾ.ಪಂ ಮಾಡಿಲ್ಲ, ಕುಡಿಯಲು ಅಯೋಗ್ಯ ಎಂದು ವರದಿ ಬಂದ ಬೋರ್‌ವೆಲ್ ನೀರಿಗೆ ಅಳವಡಿಸಿದ್ದ ಪಂಪನ್ನು ನೀರಿಲ್ಲದ ಇನ್ನೊಂದು ಬೋರ್‌ವೆಲ್‌ಗೆ ಇಳಿಸಿ ಆ ಪಂಪನ್ನೂ ಹಾಳು ಮಾಡಲಾಗಿದೆ, ನೀರಿನ ಸಮಸ್ಯೆಗೆ ಸಕಾಲದಲ್ಲಿ ಸ್ಪಂಧಿಸಬೇಕಾದ ಗ್ರಾ.ಪಂ ಆಡಳಿತ ಅಲ್ಲಿನ ಸಮಸ್ಯೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸದೇ ಇದ್ದದ್ದು ಯಾಕೆ ಎಂದು ಪ್ರಶ್ನಿಸಿದರು. 15ನೇ ಹಣಕಾಸು ಕ್ರಿಯಾಯೋಜನೆ ಆಗಸ್ಟ್‌ನಲ್ಲಿ ಮಾಡಬೇಕೆಂದು ಸುತ್ತೋಲೆ ಬಂದಿದ್ದರೂ ಇದುವರೆಗೂ ಅಪ್ರೂವಲ್ ಆಗಿಲ್ಲ, ಹಾಗಾದರೆ ನಾವು ಸಭೆ ಮಾಡುವುದು ಕಾಟಾಚಾರಕ್ಕಾ ಎಂದು ಕೇಳಿದರು. ಸದಸ್ಯ ಮಹಮ್ಮದ್ ಆಲಿ ಮಾತನಾಡಿ ನಾವು ಅನೇಕ ಬಾರಿ ಗ್ರಾ.ಪಂ ಗಮನಕ್ಕೆ ತಂದಿದ್ದರೂ ನೇರೋಳ್ತಡ್ಕದಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಮನಸ್ಸು ಮಾಡಿಲ್ಲ ಯಾಕೆ, ನಮ್ಮ ಬೇಡಿಕೆಗೆ ಬೆಲೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಕರುಣಾಕರ ಗೌಡ ಎಲಿಯ ಮಧ್ಯ ಪ್ರವೇಶಿಸಿ ಮಾತನಾಡಿ ಅಲ್ಲಿನ ಸಮಸ್ಯೆಗೆ ಪರಿಹಾರ ಆಗುತ್ತಿದೆ, ಅಧ್ಯಕ್ಷರು, ಪಿಡಿಓ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ, ನೀವು ನೀರಿನ ಸಮಸ್ಯೆ ಇದ್ದರೆ ಇಲ್ಲಿ ಪಂಚಾಯತಲ್ಲಿ ಬಂದು ಮಾತನಾಡಬೇಕೇ ವಿನಃ ಅಲ್ಲಿ ಹೋಗಿ ಮಾತನಾಡುವುದಲ್ಲ, ತಾ.ಪಂ, ಜಿ.ಪಂ ಚುಣಾವಣೆ ಹತ್ತಿರ ಬಂದ ಕಾರಣ ಪ್ರತಿಭಟನೆಯ ನಾಟಕ ಮಾಡುತ್ತಿದ್ದೀರಿ ಎಂದು ಹೇಳಿದರು. ಕಮಲೇಶ್ ಉತ್ತರಿಸಿ ನಾವು ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದೇವೆಯೇ ವಿನಃ ರಾಜಕೀಯ ಮಾಡಿಲ್ಲ, ಅದರ ಅಗತ್ಯವೂ ನಮಗಿಲ್ಲ ಎಂದರು.
ಜನರ ಪರವಾಗಿ ನಾವು ಮಾತ್ರವಲ್ಲ ನೀವು ಕೂಡಾ ಮಾತನಾಡಬೇಕು, ನಿಮಗೂ ಜವಾಬ್ದಾರಿಯಿದೆ, ಇದು ರಾಜಕೀಯ ವಿಷಯವಲ್ಲ ಎಂದು ಕಮಲೇಶ್ ಹಾಗೂ ಮಹಮ್ಮದ್ ಆಲಿ ಹೇಳಿದರು. ಹಾಗಾದರೆ ನೀವು ನಮ್ಮ ವಾರ್ಡ್‌ಗೆ ಬಂದು ಪ್ರತಿಭಟನೆ ಮಾಡಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ ಕರುಣಾಕರ ಗೌಡ ಎಲಿಯ ಅವರು ಜನರನ್ನು ಎಬ್ಬಿಸಿ ಹಾಕಿ ಡೊಂಬರಾಟ ಮಾಡುವುದು ಬೇಡ ಎಂದು ಹೇಳಿದರು.

ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಮಾತನಾಡಿ ಇದು ಉದ್ದೇಶಪೂರ್ವಕ ಚರ್ಚೆ, ಮೇಲೆ ನೋಡಿ ಉಗುಳಿದ್ರೆ ಬೀಳುವುದು ನಮ್ಮ ಮುಖಕ್ಕೆ ಎನ್ನುವ ಜ್ಞಾನ ಸದಸ್ಯರಿಗೆ ಇರಬೇಕು, ಸದಸ್ಯರೇ ಸೇರಿಕೊಂಡು ಊರವರನ್ನು ಸೇರಿಸಿ ಪ್ರತಿಭಟನೆ ಮಾಡುವುದಕ್ಕೆ ಅರ್ಥವಿಲ್ಲ ಎಂದರು. ನಾನು ಬಡವರಿಗೂ ಶ್ರೀಮಂತರಿಗೂ ಒಂದೇ ರೀತಿಯ ನ್ಯಾಯ ಕೊಡುತ್ತೇನೆ, ಎಲ್ಲರಿಗೂ ಸ್ಪಂದನೆ ಮಾಡುತ್ತೇನೆ, ನನ್ನ ಕಾರ್ಯವೈಖರಿ ಸರಿಯಿಲ್ಲ ಎಂದು ಸಾರ್ವಜನಿಕರು ಹೇಳಲಿ ನೋಡೋಣ ಎಂದು ಸವಾಲೆಸೆದರು. ಕಮಲೇಶ್ ಮಾತನಾಡಿ ನಮಗೆ ರಾಜಕೀಯ ಮಾಡಬೇಕಾದರೆ ಪಂಚಾಯತಲ್ಲಿ ಬಹಳಷ್ಟು ವಿಷಯಗಳಿವೆ, 40-50 ಮನೆಯವರು ಕುಡಿಯುವ ನೀರಿಗಾಗಿ ಹಾಹಾಕಾರ ಮಾಡುತ್ತಿರುವಾಗ ನಾವು ಅದನ್ನು ನೋಡಿಯೂ ಸುಮ್ಮನೆ ಕುಳಿತುಕೊಳ್ಳಬೇಕಿತ್ತೇ? ನೀರಿಲ್ಲದೆ ಜನ ಸಾಯಬೇಕಾ? ನೀವು ಮೊದಲೇ ಅಲ್ಲಿನ ಸಮಸ್ಯೆಗೆ ಪರಿಹಾರ ಮಾಡುತ್ತಿದ್ದರೆ ನಮ್ಮ ಪ್ರತಿಭಟನೆ ನಡೆಯುತ್ತಿತ್ತೇ? ಎಂದು ಪ್ರಶ್ನಿಸಿದರು. ಅಧ್ಯಕ್ಷರು ಮನಸ್ಸು ಮಾಡಿದ್ರೆ ಅಲ್ಲಿ ಹೊಸ ಬೋರ್‌ವೆಲ್ ಕೊರೆಸಿ ನೀರು ಕೊಡಬಹುದಿತ್ತು, ನೀವು ಅದನ್ನು ಮಾಡದಿದ್ದಾಗ ನಾವು ಹೋರಾಟ ಮಾಡಲೇಬೇಕಾಗುತ್ತದೆ ಎಂದು ಕಮಲೇಶ್ ಹೇಳಿದರು. ಗ್ರಾಮದ ಜನರ ಪರವಾಗಿ ನಾವು ಧ್ವನಿ ಎತ್ತುವುದನ್ನು ರಾಜಕೀಯ ಎಂದು ಹೇಳುತ್ತಿದ್ದೀರಿ, ಅಂತಹ ಚಿಲ್ಲರೆ ರಾಜಕೀಯದ ಅಗತ್ಯ ನಮಗಿಲ್ಲ, ಜನರ ಪರವಾಗಿ ನಾವು ಮುಂದೆಯೂ ಧ್ವನಿ ಎತ್ತಲಿದ್ದೇವೆ ಎಂದು ಮಹಮ್ಮದ್ ಆಲಿ ಹೇಳಿದರು.
ಕರುಣಾಕರ ಗೌಡ ಎಲಿಯ ಮಾತನಾಡಿ ಅಷ್ಟೂ ಜವಾಬ್ದಾರಿ ನಿಮಗಿದ್ದರೆ ನೀವು ಶಾಸಕರ ಬಳಿ ಹೇಳಿ ನೀರಿನ ವ್ಯವಸ್ಥೆ ಸರಿಪಡಿಸಿ ಎಂದು ಹೇಳಿದರು. ಕಮಲೇಶ್ ಉತ್ತರಿಸಿ ನೀವು ಅಥವಾ ಅಧ್ಯಕ್ಷರು ನಮ್ಮಿಂದ ಆಗುವುದಿಲ್ಲ ಎಂದು ಸ್ಟೇಟ್‌ಮೆಂಟ್ ಕೊಡಿ, ನಾಳೆಯೇ ಶಾಸಕರಲ್ಲಿ ಹೇಳಿ ಬೋರ್‌ವೆಲ್ ವ್ಯವಸ್ಥೆ ಮಾಡಿಸುತ್ತೇವೆ ಎಂದು ಹೇಳಿದರು.
ಪಿಡಿಓ ಮನ್ಮಥ ಉತ್ತರಿಸಿ ಅಲ್ಲಿರುವ ಬೋರ್‌ವೆಲ್‌ನ್ನು ಫ್ಲೆಶಿಂಗ್ ಮಾಡಿ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡುತ್ತೇವೆ, ಕುಡಿಯಲು ಅಯೋಗ್ಯ ಎಂದು ಕಂಡು ಬಂದರೆ ಬದಲಿ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಮನಸ್ಸಿದ್ದರೆ ಎಲ್ಲವೂ ಸಾಧ್ಯ:
ಸದಸ್ಯ ಬಾಬು ಕಲ್ಲಗುಡ್ಡೆ ಮಾತನಾಡಿ ಯಾವುದೇ ಸಮಸ್ಯೆಗೂ ಪರಿಹಾರ ಇದೆ. ಈಗ ವಿಧಾನ ಪರಿಷತ್ ಸದಸ್ಯರು ಸರ್ವೆಯವರು, ಅವರ ಸಂಪರ್ಕ ಎಲ್ಲಿರಿಗೂ ಇದೆ, ಶಾಸಕರ ಸಂಪರ್ಕವೂ ಇದೆ, ಹಾಗಿರುವಾಗ ನಮ್ಮಿಂದ ಪರಿಹರಿಸಲು ಆಗದ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದರೆ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಲು ಸಾಧ್ಯ ಎಂದು ಹೇಳಿದರು. ನಮ್ಮೊಳಗೆ ಡೊಂಬರಾಟ ಆಡುವ ಬದಲು ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ನಾವೆಲ್ಲಾ ಪ್ರಯತ್ನಿಸೋಣ ಎಂದು ಬಾಬು ಕಲ್ಲಗುಡ್ಡೆ ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಯಶೋಧಾ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಉಮೇಶ್ ಗೌಡ ಅಂಬಟ, ದುಗ್ಗಪ್ಪ ಕಡ್ಯ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಬಾಲಕೃಷ್ಣ ಪೂಜಾರಿ, ಪುಷ್ಪಾವತಿ, ಅರುಣಾ ಕಣ್ಣಾರ್ನೂಜಿ, ಕಾವ್ಯ, ಕಮಲಾ, ವಿಜಯ ಕರ್ಮಿನಡ್ಕ, ದೀಪಿಕಾ ಕಲ್ಲಗುಡ್ಡೆ, ಸುನಂದ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೂರಪ್ಪ ವರದಿ, ಅರ್ಜಿ ವಾಚಿಸಿದರು. ಪಿಡಿಓ ಮನ್ಮಥ ಸ್ವಾಗತಿಸಿ ವಂದಿಸಿದರು.
ಸಿಬ್ಬಂದಿಗಳಾದ ಶಶಿಧರ ಕೆ ಮಾವಿನಕಟ್ಟೆ, ಸತೀಶ ಹಿಂದಾರು, ಕವಿತಾ, ಮೋಕ್ಷಾ ಸತೀಶ್ ನರಿಮೊಗರು, ಶ್ರದ್ದಾ ಸಹಕರಿಸಿದರು.