ಪುತ್ತೂರು: ಒಂದು ಘಟನೆಯನ್ನು ಆಧಾರವಾಗಿರಿಸಿಕೊಂಡು ಇಡೀ ಹಿಂದೂ ಧರ್ಮದ ವಿರುದ್ಧ ಟೂಲ್ ಕಿಟ್ ನಡೆಸುವುದನ್ನು ವಿರೋಧಿಸುತ್ತೇವೆ ಎಂದು ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷದ್ ಪ್ರಮುಖರು ತಿಳಿಸಿದ್ದಾರೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆಕೆಗೆ ನ್ಯಾಯ ಸಿಗಬೇಕೆಂಬುದು ಎಲ್ಲರ ಆಗ್ರಹ. ಆದರೆ ಖಾಸಗಿ ಯೂ ಟ್ಯೂಬ್ ಚಾನೆಲ್ ಒಂದರಲ್ಲಿ ಪ್ರಕರಣದ ಮೂಲಕ ಹಿಂದೂ ಧರ್ಮವನ್ನು ಅವಹೇಳನೆ ಮಾಡಲಾಗುತ್ತಿದೆ ಎಂದು ಪ್ರಮುಖರು ಆರೋಪಿಸಿದ್ದಾರೆ. ಈ ಬಗ್ಗೆ ವಿಶ್ವಹಿಂದೂ ಪರಿಷದ್ ಮಂಗಳೂರು ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ್ ಧರ್ಮಸ್ಥಳ, ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು ಪೂವಪ್ಪ, ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ, ಕೋಶಾಧಿಕಾರಿ ಮಾದವ ಪೂಜಾರಿ ಮಾತನಾಡಿದರು.
ಬೆಳ್ತಂಗಡಿಯ ಸೌಜನ್ಯ ಅವರ ಕೊಲೆಗೆ ಯಾರು ಕಾರಣಕರ್ತರಿದ್ದಾರೆ ಅವರಿಗೆ ಸರಿಯಾದ ಶಿಕ್ಷೆ ಕಾನೂನು ಪ್ರಕಾರ ಆಗಬೇಕೆನ್ನುವ ಆಗ್ರಹ ವಿಶ್ವಹಿಂದೂ ಪರಿಷದ್ ನಿಂದ ಮೊದಲಿಂದಲೂ ಇದೆ. ಮುಂದಕ್ಕೂ ಇದೆ. ಯಾವುದೇ ಹೆಣ್ಣು ಮಗಳಿಗೆ ದೌರ್ಜನ್ಯ ಆದಾಗ ವಿಶ್ವಹಿಂದೂ ಪರಿಷದ್ ಅದನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಹೋರಾಟಕ್ಕೆ ಇಳಿಯುತ್ತದೆ. ಯಾರು ಸಂತ್ರಸ್ತರಿರುತ್ತಾರೋ ಅವರ ಪರವಾಗಿಯೇ ನಾವು ಇರುವುದು. ಅದೇ ರೀತಿ ಯಾವ ಕಾರಣಕ್ಕೂ ಕೂಡಾ ಒಂದು ಘಟನೆಯನ್ನು ಟೂಲ್ ಕಿಟ್ ಆಗಿ ಉಪಯೋಗಿಸಿ ಧರ್ಮದ ಬಗ್ಗೆ ನಂಬಿಕೆ ಇಲ್ಲದೆ, ಹಿಂದೂ ಧರ್ಮದ ಅವಹೇಳನ ಮಾಡುವವರು ಅಥವಾ ಅನ್ಯಮತೀಯರು ಯಾವತ್ತೂ ಕೂಡಾ ಹಿಂದೂ ಧರ್ಮವನ್ನು ಅವಹೇಳನ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಂತವರು ಸೌಜನ್ಯ ವಿಚಾರವನ್ನು ಟೂಲ್ ಕಿಟ್ ಆಗಿ ಬಳಸಲು ನಮ್ಮ ವಿರೋಧವಿದೆ. ಆಕೆಯ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಆದರೆ ಅದರ ಜೊತೆಗೆ ಅದನ್ನು ಉಪಯೋಗಿಸಿ ಹಿಂದೂ ಧರ್ಮ, ನೂರಾರು ವರ್ಷಗಳ ಇತಿಹಾಸ ಇರುವ ಕ್ಷೇತ್ರಕ್ಕೆ ಅಲ್ಲಿರುವ ಆಚಾರ ವಿಚಾರಗಳಿಗೆ ಅವಹೇಳನ ಮಾಡುವ ಕೆಲಸವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದವರು ತಿಳಿಸಿದ್ದಾರೆ.