ಪುತ್ತೂರು: ವಿಜಯ ಮ್ಯೂಸಿಕ್ ಸ್ಕೂಲ್, ಜ್ಞಾನಭಾರತಿ, ಬೆಂಗಳೂರು ಇವರು ಖ್ಯಾತ ಸಂಗೀತ ನಿರ್ದೇಶಕ ದಿ. ರಾಜನ್ ನಾಗೇಂದ್ರ ಸವಿ ನೆನಪಿನಲ್ಲಿ ಸುಗಮ ಸಂಗೀತ ಕ್ಷೇತ್ರದ ಅನುಪಮ ಸೇವೆಗಾಗಿ ನೀಡುವ ಸುಗಮ ಸಂಗೀತ ಸೇವಾ ರತ್ನ ಪ್ರಶಸ್ತಿಗೆ ಪುತ್ತೂರಿನ ಖ್ಯಾತ ಗಾಯಕ ಮತ್ತು ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಸಂಗೀತ ಗುರು ಡಾ. ಕಿರಣ್ ಕುಮಾರ್ ಗಾನಸಿರಿ ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭ ಸಪ್ತಸ್ವರ ಸಂಗೀತೋತ್ಸವವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 9 ರಂದು ನಡೆಯಲಿದೆ.
ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಅನೇಕ ಗಣ್ಯರ ಸಮಕ್ಷಮದಲ್ಲಿ ಕಿರಣ್ ಕುಮಾರ್ ರವರು ಸುಗಮ ಸಂಗೀತ ಸೇವಾ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಕಳೆದ 23 ವರ್ಷಗಳಲ್ಲಿ ಗಾನಸಿರಿ ಕಲಾ ಕೇಂದ್ರ ಸಂಸ್ಥೆಯ ಮೂಲಕ 37 ಸಾವಿರ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿರುವ ಕಿರಣ್ ಕುಮಾರ್ ರವರು ವಿಭಿನ್ನ ಮತ್ತು ವಿಶಿಷ್ಟ ರೀತಿಯ ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುವುದಕ್ಕೆ ಹೆಸರುವಾಸಿವಾಗಿದ್ದಾರೆ.
ಭಾವಗೀತೆಗಳಿಗೆ ಜೀವತುಂಬಿ ಹಾಡುವ ಅದ್ಭುತ ಗಾಯಕರು ಮಾತ್ರವಲ್ಲದೆ, ಲಯ ಪ್ರಧಾನ ಜನಪದ ಗೀತೆಗಳನ್ನೂ ಹಾಡಿ ಮನರಂಜಿಸಬಲ್ಲ ಅದ್ಭುತ ಗಾಯಕರು ಗಾನಸಿರಿ ಕಿರಣ್ ಕುಮಾರ್. ನಾಡಿನಾದ್ಯಂತ 5000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಈಗಾಗಲೇ ಸುಗಮ ಸಂಗೀತ ರತ್ನ, ವಿಶ್ವಮಾನ್ಯ ಕನ್ನಡಿಗ, ಮತ್ತು ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಕಿರಣ್ ಕುಮಾರ್ ರವರು 2022ರಲ್ಲಿ ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ಬೆಂಗಳೂರು ಈ ಸಂಸ್ಥೆಯಿಂದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪಡೆದಿರುತ್ತಾರೆ.