ಅಭಿವೃದ್ಧಿ ಕುಂಠಿತಗೊಂಡಿಲ್ಲ -ಅಧ್ಯಕ್ಷರ ಸ್ಪಷ್ಟನೆ
ಮುಂಡೂರು ಗ್ರಾ.ಪಂ.ನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವುದು ಸುಳ್ಳು. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಬೇಕಾದ ಸದಸ್ಯರೇ ಪಂಚಾಯತ್ ವಿರುದ್ಧ ಆರೋಪ ಮಾಡುತ್ತಿರುವುದರ ಹಿಂದೆ ರಾಜಕೀಯ ದುರುದ್ದೇಶ ಮತ್ತು ವೈಯಕ್ತಿಕ ದ್ವೇಷ ಸಾಧಿಸುವ ಉದ್ದೇಶ ಇದೆ ಎಂದು ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಪ್ರತಿಕ್ರಿಯಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರ ಅವಽಯಲ್ಲಿ ಗ್ರಾ.ಪಂ ಅಡ್ವಾನ್ಸ್ ವರ್ಕ್ ಮಾಡಿದ್ದ ಬಿಲ್ ಬಾಕಿಯಿಟ್ಟಿದ್ದು ಅದನ್ನು ನಾವು ಕೊಡುವ ಕೆಲಸ ಮಾಡಿದ್ದೇವೆ. ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ನನ್ನ ವಿರುದ್ಧ ಸ್ಪರ್ಧಿಸಿ ಸೋತ ಹಿನ್ನೆಲೆಯಲ್ಲಿ ಕಮಲೇಶ್ ಅವರು ಹತಾಶೆಗೊಂಡಿದ್ದು ಆ ಬಳಿಕ ನನ್ನ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದಾರೆ. ರಾಜಕೀಯ ಪ್ರೇರಿತ ಆರೋಪಗಳಿಂದ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಪುತ್ತೂರು: ಮುಂಡೂರು ಗ್ರಾ.ಪಂ ಬಿಜೆಪಿ ಬೆಂಬಲಿತರು ಉತ್ತಮ ಆಡಳಿತ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ 4 ವರ್ಷಗಳ ಆಡಳಿತ ಅವಽಯಲ್ಲಿ ಮುಂಡೂರು ಗ್ರಾ.ಪಂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಲಭ್ಯವಿರುವ ಅನುದಾನದಲ್ಲಿ ಇನ್ನೂ ಕ್ರಿಯಾಯೋಜನೆ ತಯಾರಿಸುವಲ್ಲಿ ವಿಫಲರಾಗಿದ್ದಾರೆ.ಮುಂದಿನ ಮೂರು ನಾಲ್ಕು ದಿನದೊಳಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಂಡೂರು ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಎಚ್ಚರಿಕೆ ನೀಡಿದ್ದಾರೆ.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 15ನೇ ಹಣಕಾಸು ಯೋಜನೆಯನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮಾಡಲು ಅವಕಾಶವಿದ್ದರೂ ಕೂಡಾ ಈ ತನಕ ಕ್ರಿಯಾಯೋಜನೆ ಅಂತಿಮಗೊಳಿಸಿ ಅನುಮೋದನೆ ಪಡೆದಿಲ್ಲ. ಬಂದ ಅನುದಾನವನ್ನು ಖರ್ಚು ಮಾಡಲು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದರೂ ಸ್ಪಂದನೆ ಸಿಕ್ಕಿಲ್ಲ.ಈ ನಡುವೆ 2020ರಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಇದ್ದ ಸಂದರ್ಭದಲ್ಲಿ ಸರ್ವೆ ಗ್ರಾಮದ ನೆಕ್ಕಿಲು ಎಂಬಲ್ಲಿ 24 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಮುಂದಿನ ಕ್ರಿಯಾಯೋಜನೆಯಲ್ಲಿ ಅದರ ಅಭಿವೃದ್ಧಿ ಕಾರ್ಯ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬದಲಾದ ಆಡಳಿತ ಬಂದ ಮೇಲೆ ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ 11 ತುರ್ತು ಕುಡಿಯುವ ನೀರು ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿತ್ತು. ಆದರೆ ಈ ತನಕ ಬೋರ್ವೆಲ್ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿಲ್ಲ. ಪ್ರಸ್ತುತ ದಿನದಲ್ಲಿ ಗುತ್ತಿಗೆದಾರರು ಬೋರ್ವೆಲ್ ಕೊರೆಯಲು ನಿರಾಕರಿಸುತ್ತಿದ್ದಾರೆ. ಹಲವು ಸಮಸ್ಯೆಗಳಿಗೆ ಪಂಚಾಯತ್ ಸ್ಪಂದಿಸದ ಕಾರಣ ಗ್ರಾಮ ಸಭೆಗೆ ಜನರು ಭಾಗವಹಿಸುತ್ತಿಲ್ಲ. ಹಾಗಾಗಿ ಕಳೆದ ಗ್ರಾಮ ಸಭೆಯಲ್ಲಿ ಕೋರಂ ಕೊರತೆಯಿಂದ ರದ್ದಾಗಿತ್ತು. ಈ ನಡುವೆ ಪಂಚಾಯತ್ ಸ್ಥಾಯಿ ಸಮಿತಿ ಸಭೆಯೂ ನಡೆಸಿಲ್ಲ. ಗ್ರಾ.ಪಂ ಸಮಸ್ಯೆಗಳನ್ನು ನಿಯಮಾನುಸಾರ ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾಪಿಸಿ ಬಗೆಹರಿಸಲು ಪ್ರಯತ್ನಿಸಿದರೂ ಕೂಡಾ ಬಿಜೆಪಿ ಬೆಂಬಲಿತ ಆಡಳಿತ ಸದಸ್ಯರೇ ಅಽಕ ಸಂಖ್ಯೆಯಲ್ಲಿರುವುದರಿಂದ ಯಾವುದೇ ಸ್ಪಂದನೆ ಅಧ್ಯಕ್ಷರಿಂದ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಜನರ ಸಮಸ್ಯಗಳನ್ನು ಬಗೆ ಹರಿಸಬೇಕು ಇಲ್ಲವಾದಲ್ಲಿ ಮೂರು ನಾಲ್ಕು ದಿನದೊಳಗೆ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ತಾ.ಪಂ, ಜಿ.ಪಂ.ಗಳಿಗೂ ಪಂಚಾಯತ್ ಸಮಸ್ಯೆಗಳ ಕುರಿತು ದೂರು ನೀಡಲಿದ್ದೇವೆ ಎಂದವರು ತಿಳಿಸಿದರು. ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಮಹಮ್ಮದ್ ಆಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.