ಅರ್ಧ ಏಕಾಹ ಭಜನೆ,ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಅನ್ನಪೂರ್ಣ ಪಾಕಶಾಲೆ ಉದ್ಘಾಟನೆ,ಯಕ್ಷಗಾನ
ಸವಣೂರು: ಮನುಷ್ಯ ಭಗವಂತನನ್ನು ಭಜನೆಯ ಮೂಲಕ ಸುಲಭದಲ್ಲಿ ಒಲಿಸಬಹುದು. ಭಜನೆಯಿಂದ ಧಾರ್ಮಿಕ ಚಿಂತನೆಯನ್ನು ಬೆಳೆಯುವುದರ ಜತೆಗೆ ಸಂಸ್ಕಾರ,ಸಂಸ್ಕೃತಿ ಉದ್ದೀಪನಗೊಳ್ಳಲು ಸಾಧ್ಯವಿದೆ ಎಂದು ಉಡುಪಿ ಪಡುಕುತ್ಯಾರು ಆನೆಗುಂದಿ ಸರಸ್ವತೀ ಪೀಠ ಶ್ರೀ ನಾಗ ಧರ್ಮೇಂದ್ರ ವೇದ ಸಂಜೀವಿನಿ ಪಾಠಶಾಲೆಯ ವಿದ್ವಾನ್ ಮೌನೇಶ ಶರ್ಮ ಬಾಳಿಲ ಹೇಳಿದರು.

ಅವರು ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿಯ ರಜತ ಸಂಭ್ರಮದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ರಜತ ಸಂಭ್ರಮದ ನೆನಪಿಗೆ ನಿರ್ಮಾಣಗೊಂಡ ಶ್ರೀ ಅನ್ನಪೂರ್ಣ ಪಾಕಶಾಲೆ ಉದ್ಘಾಟಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಲಿಯುಗದಲ್ಲಿ ಭಕ್ತರಿಗೆ ಭಜನೆಯ ಮೂಲಕ ಭಗವಂತನನ್ನು ಒಲಿಸಬಹುದು ಎಂಬುದು ಪುರಂದರ ದಾಸರೇ ಹೇಳಿದ್ದಾರೆ. ಭಜನೆಯಿಂದ ಊರಿನಲ್ಲಿ ಸಾಮರಸ್ಯದ ಬದುಕು ಸಾಧ್ಯವಾಗುತ್ತದೆ. 25 ವರ್ಷಗಳ ಹಿಂದೆ ತೀರಾ ಹಳ್ಳಿಯಾಗಿದ್ದ ಪಾದೆಬಂಬಿಲದಲ್ಲಿ ಭಜನೆಯ ಮೂಲಕ ಸಂಘಟಿತರಾಗಿ ಭಜನಾ ಮಂದಿರ ನಿರ್ಮಿಸಿ ಸಾಮಾಜಿಕ, ಧಾರ್ಮಿಕ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಧರ್ಮ ಕಾರ್ಯದ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಕಾರ್ಯವನ್ನು ಪಾದೆಬಂಬಿಲದಲ್ಲಿ ಹಿರಿಯ ಕಿರಿಯರು ಜತೆಯಾಗಿ ಮಾಡಿದ್ದಾರೆ. ಮುಂದಿನ ವರ್ಷ ಭಜನಾ ಮಂದಿರವು ಅಭಿವೃದ್ಧಿಯಾಗಲಿ.ಹಂಚಿನ ಮಾಡಿನ ಮಂದಿರವಾಗಲಿ.ನಾವು ಕೈ ಜೋಡಿಸುತ್ತೇವೆ ಎಂದರು.
ಕೊಳ್ತಿಗೆ ಪ್ರಾ.ಕೃ.ಸ.ಸಂ.ದ ಅಧ್ಯಕ್ಷ ತೀರ್ಥಾನಂದ ದುಗ್ಗಳ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್,ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಗ್ರಾ.ಪಂ.ಮಾಜಿ ಸದಸ್ಯ ಸುಧೀರ್ ಕುಮಾರ್ ರೈ ಕುಂಜಾಡಿ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಜನಾರ್ದನ ಗೌಡ ಪಿ., ಸವಣೂರು ಗ್ರಾ.ಪಂ.ಸದಸ್ಯರಾದ ತೀರ್ಥರಾಮ ಕೆಡೆಂಜಿ, ವಿನೋದಾ ರೈ ಚೆನ್ನಾವರ, ಹರಿಕಲಾ ರೈ ಕುಂಜಾಡಿ,ಮಹಿಳಾ ವಿ.ಸೌ.ಸಹಕಾರಿಯ ಉಪಾಧ್ಯಕ್ಷೆ ಇಂದಿರಾ ಬಿ.ಕೆ.,ಶ್ರೀ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಅಂಗಡಿಮೂಲೆ ಉಪಸ್ಥಿತರಿದ್ದರು.

ಅಭಿನಂದನಾ ಕಾರ್ಯಕ್ರಮ
ಈ ಸಂದರ್ಭದಲ್ಲಿ ಪಾಲ್ತಾಡಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ ,ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತೀರ್ಥಾನಂದ ದುಗ್ಗಳ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಜನಾರ್ದನ ಗೌಡ ಪಿ ಅವರನ್ನು ಮತ್ತು ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎ.5ರಂದು ಕೇಶವ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ಬೆಳಿಗ್ಗೆ6ರಿಂದ ಭಗವದ್ಗೀತಾ ಪಾರಾಯಣ, ಬೆಳಿಗ್ಗೆ 6.45ರಿಂದ ಅರ್ಧ ಏಕಾಹ ಭಜನೆ ಪ್ರಾರಂಭ, ಗಣಹೋಮ ನಡೆಯಿತು.

ಅರ್ಧ ಏಕಾಹ ಭಜನೆಗೆ ಹಿರಿಯರಾದ ಪುಟ್ಟಣ್ಣ ಗೌಡ ಅಂಗಡಿಮೂಲೆ ಅವರು ಚಾಲನೆ ನೀಡಿದರು.
ಸಂಜೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ,ಭಜನಾ ಮಂಗಳೋತ್ಸವ, ಮಹಾಪೂಜೆ ನಡೆಯಿತು.ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಬಳಿಕ ಶ್ರೀ ದುರ್ಗಾ ಕಲಾ ಸಂಘ ಪಾದೆಬಂಬಿಲ ಇದರ ವತಿಯಿಂದ ವರಾಹವತಾರ -ಅಗ್ರಪೂಜೆ ಯಕ್ಷಗಾನ ಬಯಲಾಟ ನಡೆಯಿತು.

ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಹೊನ್ನಪ್ಪ ಗೌಡ ಬಿ.ಜೆ. ವಂದಿಸಿದರು. ವಾಣಿ ಶ್ರೀ ಎ.ಎಲ್.ಕಾರ್ಯಕ್ರಮ ನಿರೂಪಿಸಿದರು.ಭಜನಾ ಮಂಡಳಿಯ ಪದಾಧಿಕಾರಿಗಳು ಸಹಕರಿಸಿದರು.
ಸಭಾಭವನ ನಿರ್ಮಾಣ ಯೋಜನೆ
ಭಜನಾ ಮಂಡಳಿಯ ರಜತ ಸಂಭ್ರಮದ ನೆನಪಿಗಾಗಿ ರೂ.6 ಲಕ್ಷ ವೆಚ್ಚದಲ್ಲಿ ಅನ್ನಪೂರ್ಣ ಪಾಕಶಾಲೆ ನಿರ್ಮಿಸಲಾಗಿದ್ದು,ಮುಂದಿನ ವರ್ಷ 30 ಲಕ್ಷ ರೂ ವೆಚ್ಚದಲ್ಲಿ ಭಜನಾ ಮಂದಿರದ ಅಭಿವೃದ್ಧಿ ಹಾಗೂ ಸಭಾಭವನ ನಿರ್ಮಾಣ ಯೋಜನೆಯನ್ನು ಕೈಗೊತ್ತಿಕೊಳ್ಳಲಾಗಿದೆ.