ಪುತ್ತೂರು: ಯೇಸು ಕ್ರಿಸ್ತರು ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭ ಶುಕ್ರವಾರ “ಗುಡ್ ಫ್ರೈಡೇ” ಹಾಗೂ ಅದರ ಮುಂದಿನ ದಿನ ಯೇಸುಕ್ರಿಸ್ತರ ಕೊನೆಯ ಭೋಜನದ ಪವಿತ್ರ ಗುರುವಾರ ಆಚರಣೆ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಯೇಸು ಕ್ರಿಸ್ತರು ಶಿಲುಬೆಗೇರುವ ಮೊದಲು ತನ್ನ 12 ಮಂದಿ ಶಿಷ್ಯರೊಂದಿಗೆ ಕುಳಿತು ಕೊನೆಯ ಭೋಜನ ಮಾಡಿದ ದಿನದ ನೆನಪಿನಲ್ಲಿ ಪವಿತ್ರ ಗುರುವಾರ ಆಚರಣೆ ಮಾಡಲಾಗುತ್ತದೆ. ಮಾಯ್ ದೆ ದೇವುಸ್ ಚರ್ಚ್ನಲ್ಲಿ ಎ.17ರಂದು ಯೇಸುವಿನ ಕೊನೆಯ ದಿನದ ಆಚರಣೆ ಮಾಡಲಾಯಿತು. ಕ್ರಿಸ್ತರು ತನ್ನ 12 ಮಂದಿ ಶಿಷ್ಯರ ಪಾದಗಳನ್ನು ತೊಳೆದು ತ್ಯಾಗ, ಕ್ಷಮೆ, ಪ್ರೀತಿ, ಸೇವೆಯ ಸಂದೇಶ ಸಾರುವ ಪ್ರಕ್ರಿಯೆ ನಡೆಸಲಾಯಿತು. ವಂ.ರೂಪೇಶ್ ತಾವ್ರೋ ಬಲಿಪೂಜೆ ನೆರವೇರಿಸಿದರು. ಮಾಯ್ ದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನಸ್ 12 ಮಂದಿ ಕ್ರೈಸ್ತ ವಿಶ್ವಾಸಿ ಜನರ ಪಾದಗಳನ್ನು ತೊಳೆಯುವ ಆಚರಣೆ ನಡೆಸಿದರು. ಸಹಾಯಕ ಧರ್ಮಗುರು ವಂ.ಲೋಹಿತ್ ಅಜಯ್ ಮಸ್ಕರೇನಸ್ ಆಶೀರ್ವಚನ ನೀಡಿ ಯೇಸು ಸ್ವಾಮಿಯ ಶಿಲುಬೆಯ ಮರಣ ನಮಗೆ ಭರವಸೆಯ ಸಂಕೇತ. ಯೇಸು ಸ್ವಾಮಿ ತನಗೆ ಜನರು ತಿರಸ್ಕರಿಸಿದರೂ, ಅವರ ಜೀವನ ಕಷ್ಟಕರವಾದರೂ, ಶಿಲುಬೆ ಹೊತ್ತು ನಡೆದಾಗ ಬಿದ್ದರೂ ಎದ್ದು ಮುನ್ನಡೆಯುತ್ತಾರೆ. ಯೇಸು ನಿರಾಶೆಗೊಳ್ಳುವುದಿಲ್ಲ. ತಿರಸ್ಕಾರ, ಕಷ್ಟವನ್ನು ಮೆಟ್ಟಿ ನಿಂತು ತನ್ನ ಗುರಿ ತಲುಪುತ್ತಾರೆ. ನಮಗೆ ತಿರಸ್ಕಾರ ಲಭಿಸಿದಾಗ, ಕಷ್ಟ ಬಂದಾಗ ಹಾಗೂ ಬಿದ್ದಾಗ ಎದ್ದು ಮುನ್ನಡೆಯಲು ಯೇಸು ನಮ್ಮ ಭರವಸೆಯ ಮೂಲವಾಗಿದ್ದಾರೆ ಎಂದರು. ವಂ.ಅಶೋಕ್ ರಾಯನ್ ಕ್ರಾಸ್ತಾ, ವಂ.ಮ್ಯಾಕ್ಸಿಂ ಡಿಸೋಜ ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ ಹಾಗೂ ಸಮಿತಿ ಸದಸ್ಯರು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ಎ.18ರಂದು ಶುಭ ಶುಕ್ರವಾರ ಗುಡ್ಫ್ರೈಡೇ ಆಚರಿಸಲಾಯಿತು.
