ಭಾರತ್ ಕಟ್ಟಡ ಕಾರ್ಮಿಕರ ಸಂಘದ 7ನೇ ಮಹಾಸಭೆ

0

ಕೋವಿಡ್ ಹೆಸರಿನಲ್ಲಿ ಕಾರ್ಮಿಕ ಮಂಡಳಿಯ ರೂ.6ಸಾವಿರ ಕೋಟಿ ನಾಪತ್ತೆ-ಕೆ.ಪಿ ಜಾನಿ

ಪುತ್ತೂರು: ಕಾರ್ಮಿಕ ಇಲಾಖೆಯಲ್ಲಿ ಬೋಗಸ್ ಕಾರ್ಡ್‌ಗಳನ್ನು ಮಾಡಿದ್ದು ಕಟ್ಟಡ ಕಾರ್ಮಿಕರಿಗಿದ್ದ ಸವಲತ್ತುಗಳ ದುರುಪಯೋಗವಾಗುತ್ತಿತ್ತು. ಕೋವಿಡ್ ಪೂರ್ವದಲ್ಲಿ ಕಾರ್ಮಿಕ ಮಂಡಳಿಯಲ್ಲಿ ರೂ.12 ಸಾವಿರ ಕೋಟಿಯಿದ್ದ ನಿಧಿಯು ಕೋವಿಡ್ ನಂತರ ರೂ.6 ಸಾವಿರ ಕೋಟಿಗೆ ಇಳಿಕೆಯಾಗಿದೆ. ಕೋವಿಡ್ ಹೆಸರಿನಲ್ಲಿ ಆರು ಸಾವಿರ ಕೋಟಿ ರೂಪಾಯಿ ನಾಪತ್ತೆಯಾಗಿದೆ. ನಿವೃತ್ತ ಅಧಿಕಾರಿಗಳ ಹೆಸರಿನಲ್ಲಿಯೂ ಕಟ್ಟಡ ಕಾರ್ಮಿಕರ ಕಾರ್ಡ್‌ಗಳಿದ್ದವು ಎಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯ ಕೆ.ಪಿ ಜಾನಿ ಆರೋಪಿಸಿದರು.


ಲಯನ್ಸ್ ಸೇವಾ ಮಂದಿರದಲ್ಲಿ ಎ.21ರಂದು ನಡೆದ ಭಾರತ್ ಕಟ್ಟಡ ಕಾರ್ಮಿಕರ ಸಂಘದ 7ನೇ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅರ್ಹ ಕಾರ್ಮಿಕರು ಇಂದಿಗೂ ಕಾರ್ಡ್ ಪಡೆದುಕೊಂಡಿಲ್ಲ. ಇಲಾಖೆಯಲ್ಲಿನ ಸೌಲಭ್ಯಗಳ ದುರುಪಯೋಗ ತಡೆಯಲು ಹಾಗೂ ನಿಯಂತ್ರಣ ತರುವ ನಿಟ್ಟಿನಲ್ಲಿ ಕಾರ್ಮಿಕ ಮಂಡಳಿಯ ಹಳೆಯ ಕಾನೂನಗಳಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬವಾಗಿದೆ. ಹೊರತು ಯಾರಿಗೂ ತೊಂದರೆ ಕೊಡುವುದಕ್ಕಾಗಿ ವಿದ್ಯಾರ್ಥಿ ವೇತನ ತಡೆಹಿಡಿಯಲಿಲ್ಲ. ಕೋವಿಡ್ ನಂತರದ ಗೊಂದಲಗಳಿಂದ ಸೌಲಭ್ಯ ವಿತರಿಸಲು ತೊಂದರೆಯಾಗಿದೆ. ಅರ್ಹ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಇಲಾಖೆಯ ಸೌಲಭ್ಯಗಳನ್ನು ವಿತರಿಸಲಾಗುವುದು ಎಂದ ಅವರು ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ಕಾರ್ಮಿಕರ ಬೇಡಿಕೆಗೆ ಬೆಲೆ ಬರಲಿದೆ ಎಂದು ಹೇಳಿದರು.


ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಗರ ಸಭೆಯ ಉಪಾಧ್ಯಕ್ಷ ಬಾಲಚಂದ್ರ ಮರೀಲು ಮಾತನಾಡಿ, ಕಾರ್ಮಿಕರ ಸಂಘಟನೆ ಸವಾಲು ಎದುರಿಸವ ಸಂಘಟನೆಯಾಗಿದೆ. ಸಂಘಟನೆಗೆ ವಿಶೇಷ ಶಕ್ತಿಯಿದೆ. ಸರಕಾರದ ಸೌಲಭ್ಯ ಪಡೆಯಲು ಕಾರ್ಮಿಕರು ಸಂಘಟಿತರಾದಾಗ ಮಾತ್ರ ಸಾಧ್ಯವಾಗಿದ್ದು ಕಾರ್ಮಿಕರು ಸಂಘಟನೆಯನ್ನು ಬಲೀಷ್ಠಗೊಳಿಸಬೇಕು. ಇಲಾಖೆಯಲ್ಲಿ ನೋಂದಾಯಿಸಿಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.


ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ಮಾತನಾಡಿ, ಕಾರ್ಮಿಕರಿಗೆ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಪ್ರತಿಯೊಬ್ಬ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ಪ್ರತಿವರ್ಷ ನವೀಕರಣ ಮಾಡಿಕೊಳ್ಳುವಂತೆ ತಿಳಿಸಿದರು.


ಉಪನ್ಯಾಸಕರು ಮತ್ತು ಲೇಖಕರಾಗಿರುವ ಅಬ್ದುಲ್ ರಜಾಕ್ ಅನಂತಾಡಿ ಮಾತನಾಡಿ, ಕಾರ್ಮಿಕರಿಲ್ಲದ ಜಗತ್ತನ್ನೇ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾರ್ಮಿಕರು ಯಾರೂ ದುಶ್ಚಟಗಳಿಗೆ ಬಲಿಯಾಗಬಾರದು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಶಿಕ್ಷಣದಿಂದ ಬದಲಾವಣೆ ಸಾಧ್ಯವಾಗಿದ್ದು ನಿಮ್ಮ ಮಕ್ಕಳನ್ನು ವಿದ್ಯಾಭ್ಯಾಸ ನೀಡಿ ಬೆಳೆಸಬೇಕು ಎಂದು ಹೇಳಿದರು.


ಸಂಘದ ಕಾನೂನು ಸಲಹೆಗಾರ ದೀಪಕ್ ಬೊಳುವಾರು ಮಾತನಾಡಿ, ಕಾರ್ಮಿಕರಿಗಾಗಿ ಸರಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು ಅವುಗಳನ್ನು ಪಡೆದುಕೊಳ್ಳಲು ಕಟ್ಟಡ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ್ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಯು.ಲೋಕೇಶ್ ಹೆಗ್ಡೆ ಮಾತನಾಡಿ, ಒಂದು ದೇಶದ ಅಭಿವೃದ್ಧಿಯನ್ನು ಗುರುತಿಸುವುದು ಅಲ್ಲಿನ ಕಟ್ಟಡಗಳಿಂದಾಗಿದೆ. ಹೀಗಾಗಿ ಕಾರ್ಮಿಕರು ಯಾರೂ ಸಣ್ಣವರಲ್ಲ. ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಬೆವರಿದೆ. ಕಾರ್ಮಿಕರು ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದರು. ನಿರಂತರ ಹೋರಾಟದಿಂದಾಗಿ ಸರಕಾರ ಕಾರ್ಮಿಕರನ್ನು ಗುರುತಿಸಿದ್ದು ಕಾರ್ಮಿಕರ ಮಂಡಳಿ ಪ್ರಾರಂಭಿದೆ. ಕಾರ್ಮಿಕರಿಗೆ ಮಾಸಿಕ ರೂ.3 ಸಾವಿರ ಪಿಂಚಣಿ ನೀಡುತ್ತಿದ್ದು ಇದನ್ನು ರೂ.5ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯಾಧ್ಯಕ್ಷ ಪೌಲ್ ಡಿ ಸೋಜ, ಉಪಾಧ್ಯಕ್ಷ ಕೊರಗಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಪೌಲ್ ಡಿ’ಸೋಜ, ಅಧ್ಯಕ್ಷ ರುಕ್ಮಯ್ಯ ಗೌಡ ಬನಾರಿಯವರನ್ನು ಸನ್ಮಾನಿಸಲಾಯಿತು. ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಸಂಘದ ಜತೆ ಕಾರ್ಯದರ್ಶಿ ವಸಂತ ಕುಮಾರ್ ಬೆದ್ರಾಳ ಹಾಗೂ ರಾಜ್ಯ ಯುವ ಪ್ರಶಸ್ತಿ ಪಡೆದ ಸದಸ್ಯ ರಾಜೇಶ್ ಮಯ್ಯೂರರವರನ್ನು ಗೌರವಿಸಲಾಯಿತು.

ಜತೆ ಕಾರ್ಯದರ್ಶಿ ವಸಂತ ಬೆದ್ರಾಳ ಪ್ರಾರ್ಥಿಸಿದರು. ಅಧ್ಯಕ್ಷ ರುಕ್ಮಯ್ಯ ಗೌಡ ಸ್ವಾಗತಿಸಿದರು. ಸಂಘ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಪ್ರಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಮಹಮ್ಮದ್ ಸಾಬಿರ್ ಬನ್ನೂರು ವರದಿ ವಾಚಿಸಿದರು. ಕೋಶಾಧಿಕಾರಿ ಬಶೀರ್ ಅಹಮ್ಮದ್ ಬನ್ನೂರು ಲೆಕ್ಕಪತ್ರ ಮಂಡಿಸಿದರು. ಸತ್ಯನಾರಾಯಣ ಹೆಗ್ಡೆ ಉರ್ಲಾಂಡಿ ಕಾರ್ಯಕ್ರಮ ನಿರೂಪಿಸಿ, ಸಲಹೆಗಾರ ಇನಾಸ್ ವೇಗಸ್ ವಂದಿಸಿದರು. ಸದಸ್ಯರಾದ ಸುಧೀರ್ ಸಂಪ್ಯ, ಲೋಕೇಶ್ ಸಂಪ್ಯ, ಜನಾರ್ದನ, ಮಹಮ್ಮದ್ ಅಶ್ರಫ್, ಮೋಹನ ಸಿಂಹವನ, ಕೃಷ್ಣಪ್ಪ, ಇನಾಸ್ ವೇಗಸ್, ರಾಜೇಶ್ ಬೆದ್ರಾಳ ಹಾಗೂ ಜಯಂತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here