ಪುತ್ತೂರು: ಮುಂದಿನ ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಮುಸ್ಲಿಂ ಸಮುದಾಯ ಈಗಿರುವ ಪರಿಸ್ಥಿತಿಗಿಂತ ಉತ್ತಮ ಸ್ಥಿತಿಯಲ್ಲಿರಬೇಕೆಂದು ನಾವು ಬಯಸುವುದಾದರೆ ನಮ್ಮ ಮಕ್ಕಳು ಉತ್ತಮ ವಿದ್ಯೆಯನ್ನು ಪಡೆಯುವುದು ಅವಶ್ಯ.
ಶಿಕ್ಷಣ ಎನ್ನುವುದು ಮೂಲಭೂತ ಹಕ್ಕು ಮಾತ್ರವಲ್ಲ, ಬದಲಾಗಿ ಸಬಲೀಕರಣಕ್ಕಿರುವ ಪ್ರಮುಖ ಸಾಧನವಾಗಿದೆ. ಹೆಣ್ಣಾಗಲಿ, ಗಂಡಾಗಲಿ ಶಿಕ್ಷಣ ಅವರ ಜೀವನ ಕ್ರಮವನ್ನು ಪರಿವರ್ತಿಸುತ್ತದೆ. ಶಿಕ್ಷಣದ ಬೇರುಗಳು ಕಹಿಯಾಗಿರಬಹುದು ಆದರೆ ಅದರ ಫಲ ಯಾವತ್ತೂ ಸಿಹಿಯಾಗಿರುತ್ತದೆ. ಬಡತನ ಅಥವಾ ಇನ್ನಾವುದೇ ಕಾರಣದಿಂದ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂದು ಅವರಿಗೆ ಮಾರ್ಗದರ್ಶನ ನೀಡಿ, ಧನ ಸಹಾಯ ಮಾಡುವ ಮೂಲಕ ಗುರಿ ಸಾಧಿಸಲು ಸಹಾಯ ಹಸ್ತ ಚಾಚುವ ಹಲವು ಸಂಘ ಸಂಸ್ಥೆಗಳು ನಮ್ಮ ನಡುವೆ ಇದೆಯಾದರೂ ಸಹಾಯ ಯಾಚಿಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ಹಿನ್ನಲೆಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲುದ್ದೇಶಿಸುವ ಸಮುದಾಯದ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ ಹುಟ್ಟಿದ ಸಂಸ್ಥೆಯೇ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್. ವರ್ಷದ ಹಿಂದೆ ಹುಟ್ಟಿಕೊಂಡ ಈ ಸಂಸ್ಥೆ ಈಗ ಪ್ರಥಮ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.
ಸಂಸ್ಥೆಯ ಆ್ಯಪ್ ನಲ್ಲಿ ಈಗಾಗಲೇ ಹಲವು ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, ನುರಿತ ಕೌನ್ಸಿಲರ್ ಗಳ ಮೂಲಕ ಕೌನ್ಸಿಲಿಂಗ್ ನಡೆಸಿ, ವರದಿ ಪಡೆದು ಆರ್ಹತೆ ಆಧಾರದಲ್ಲಿ ಅವರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಗಿದೆ. ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕ ಶ್ರೇಷ್ಠತೆಯನ್ನು ಪಡೆಯಬೇಕೆಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ನ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿವೇತನದಂತಹ ಪ್ರೇರಣಾದಾಯಕ ಕಾರ್ಯಕ್ರಮವನ್ನು ಎ.27ರಂದು ಸಂಸ್ಥೆಯು ಆಯೋಜಿಸಿದೆ. ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ಭವಿಷ್ಯದ ಯೋಜನೆಯನ್ನು ಸಮುದಾಯದ ಜನರಿಗೆ ತಿಳಿಯಪಡಿಸುವುದೇ ಇದರ ಉದ್ದೇಶ.
ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಶ್ರಮಪಟ್ಟು ಸಾಧಿಸಿದ ವಿದ್ಯಾರ್ಥಿಗಳನ್ನು ಗೌರವಿಸುವ ನಿಟ್ಟಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿರಿಸಲು, ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚೆ ನಡೆಯಲಿದ್ದು ವಿದ್ಯಾರ್ಥಿ ವೃತ್ತಿ ಮಾರ್ಗದರ್ಶನ ಮತ್ತು ವಿದ್ಯಾರ್ಥಿ ವೇತನದ ಬಗ್ಗೆ ಖ್ಯಾತ ಪ್ರೇರಕ ರಫೀಕ್ ಮಾಸ್ಟರ್ ಮಾಹಿತಿ ನೀಡಲಿದ್ದಾರೆ. ಶಿಕ್ಷಣವೇ ಪ್ರಗತಿಯ ನಿಜವಾದ ಭೂಮಿಕೆಯಾಗಿದ್ದು, ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಗುರುಜನಗಳ ಯಶೋಗಾಥೆಯ ಸ್ಮರಣೆ, ಶ್ರದ್ಧಾಂಜಲಿಯೂ ಆಗಲಿದೆ. ಸಂಸ್ಥೆಯು ದೂರದೃಷ್ಠಿ ಚಿಂತನೆಯೊಂದಿಗೆ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದ್ದು ಆ್ಯಪ್ ಮೂಲಕವೇ ನೋಂದಾವಣೆ ಮತ್ತು ಇತರ ಪ್ರಕ್ರಿಯೆಗಳು ನಡೆಯುತ್ತಿದೆ. ಅರ್ಹ ವಿದ್ಯಾರ್ಥಿಗಳು ಮುಕ್ತವಾಗಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು, ಕೌನ್ಸೆಲಿಂಗ್ ನಡೆಸಿದ ಬಳಿಕ ಅರ್ಹ ವಿದ್ಯಾರ್ಥಿಗಳು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ಹೇಳಿದ್ದು, ನೂತನವಾಗಿ ಹೆಸರು ನೊಂದಾಯಿಸಲು ಬಯಸುವ ವಿದ್ಯಾರ್ಥಿಗಳು, ಪೋಷಕರು, ಹಿತೈಷಿಗಳು, ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.
ನಗರದ ಬೊಳುವಾರಿನಲ್ಲಿರುವ ಮಹಾವೀರ ಸಭಾಭವನದಲ್ಲಿ ಎ.27ರಂದು ಬೆಳಿಗ್ಗೆ 9:30ರಿಂದ 11:30ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದ.ಕ ಜಿಲ್ಲಾ ಮಾಹಿತಿ ಅಧಿಕಾರಿ ಬಿ ಎ ಖಾದರ್ ಷಾ, ಮೌಂಟನ್ ವ್ಯೂ ಎಜುಕೇಶನ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ, ಕೆಎಂಸಿ ಯ ವೈದ್ಯಕೀಯ ಪ್ರಾಧ್ಯಾಪಕ ಡಾ.ತಾಜುದ್ದೀನ್, ಅಮೆಝೋನ್ ಸೀನಿಯರ್ ಸಾಫ್ಟ್ವೇರ್ ಡೆವಲಪರ್ ಎನ್ಐಟಿಕೆಯ ಇಮ್ರಾನ್ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.