





ಸಹಸ್ರಾರು ಮಂದಿಗೆ ಶಿಕ್ಷಣ ನೀಡಿದ ಹೆಮ್ಮೆಯ ಸಂಸ್ಥೆ


ಪುತ್ತೂರು: ಶಿಕ್ಷಣ ಮತ್ತು ಸೇವೆ ಮೂಲಕ ಲಕ್ಷಾಂತರ ಮಂದಿಗೆ ನೆರವಾಗಿರುವ ಪುತ್ತೂರಿನ ಸಿಸ್ಟರ್ಸ್ ಆಫ್ ದ ಲಿಟ್ಲ್ ಫ್ಲವರ್ ಆಫ್ ಬೆಥನಿ ಸಂಸ್ಥೆ ಹಾಗೂ ಬೆಥನಿ ಲಿಝಿಯೊ ಕಾನ್ವೆಂಟ್ ಇದೀಗ ತನ್ನ ನೂರು ವರ್ಷಗಳ ಪಯಣವನ್ನು ಪೂರೈಸಿರುವ ಸಂಸ್ಥೆಯ ಶತಮಾನೋತ್ಸವದ ಸಂಭ್ರಮದ ಕಾರ್ಯಕ್ರಮಗಳು ಎ.24ರಂದು ಮಾಯಿದೇ ದೇವುಸ್ ಚರ್ಚ್‌ನಲ್ಲಿ ನಡೆಯಲಿದೆ.





ಪುತ್ತೂರಿನ ಮುಖ್ಯ ರಸ್ತೆ ದರ್ಬೆ ಸಚಿನ್ ಟ್ರೇಡಿಂಗ್‌ನ ಮುಂಭಾಗದಲ್ಲಿರುವ ಬೆಥನಿ ಲಿಝಿಯೊ ಕಾನ್ವೆಂಟ್‌ನ್ನು 1925ರ ಮೇ 29ರಂದು ದೇವರ ಸೇವಕ ವಂದನೀಯ ಗುರು ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್ ಅವರ ದಾರ್ಶನಿಕ ನೇತೃತ್ವದಲ್ಲಿ ಸ್ಥಾಪನೆಯಾದ ಲಿಝಿಯೊ ಕಾನ್ವೆಂಟ್, ಆರಂಭದಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಬಾಲಕರ ಶಾಲೆಗೆ ಶಿಕ್ಷಕರನ್ನು ಒದಗಿಸಿತು. ಪುತ್ತೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯವನ್ನು ಮನಗಂಡು, 1928ರಲ್ಲಿ “ಲಿಟ್ಲ್ ಫ್ಲವರ್ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ”ಯನ್ನು ಆರಂಭಿಸಲಾಯಿತು. ಶಿಕ್ಷಣದ ಗುಣಮಟ್ಟ ಮತ್ತು ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಧ್ಯೇಯದೊಂದಿಗೆ ಬೆಳೆದ ಈ ಶಾಲೆಗಳು, 1925ರಲ್ಲಿ ವಿಲೀನಗೊಂಡು “ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ”ಯಾಗಿ ರೂಪುಗೊಂಡವು.
2005ರಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಬೇಡಿಕೆಯನ್ನು ಪೂರೈಸಲು “ಬೆಥನಿ ಆಂಗ್ಲ ಮಾಧ್ಯಮ ಶಾಲೆ”ಯನ್ನು ಸ್ಥಾಪಿಸಲಾಯಿತು. ಸಿಸ್ಟರ್ ಗರ್ಟ್ರೂಡ್‌ರಂತಹ ಧೀಮಂತ ಬೆಥನಿ ಭಗಿನಿಯರು, ಕಾನ್ವೆಂಟಿನ ಬೆಳವಣಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಶಿಕ್ಷಣದೊಂದಿಗೆ ಕರಕುಶಲ ತರಬೇತಿಗಳನ್ನು ನೀಡುವ ಮೂಲಕ ಅವರು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು. ಅನೇಕರು ಈ ಸಂಸ್ಥೆಯ ಭಗಿನಿಯರ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡಿದ್ದಾರೆ ಮತ್ತು ಜೀವನ ಹಾಗೂ ಸಮಾಜದಲ್ಲಿ ಉನ್ನತ ವ್ಯಕ್ತಿತ್ವವನ್ನು ಪಡೆದು ಬಹಳಷ್ಟು ಸಾಧಿಸಿದ್ದಾರೆ. ಅವರು ಇಂದಿಗೂ ಸಹ ತಮ್ಮ ಜೀವನದ ಗುರಿಗಳನ್ನು ತಲುಪಲು ಮತ್ತು ಸಾಧಿಸಲು ನೀಡಿದ ಗುಣಮಟ್ಟದ ಶಿಕ್ಷಣಕ್ಕಾಗಿ ಕೃತಜ್ಞರಾಗಿರುತ್ತಾರೆ. ನೂರು ವರ್ಷಗಳು ಅನೇಕ ಯುವ ಮನಸ್ಸುಗಳನ್ನು ಅವರ ಕನಸುಗಳನ್ನು ನನಸು ಮಾಡಲು ಪೋಷಿಸಿವೆ. ಹುರುಪಿನ ಬೆಥನಿ ಭಗಿನಿಯರು ಮತ್ತು ಶಿಕ್ಷಕರು ಸಂಸ್ಥೆಯ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಈ ಸಂಸ್ಥೆಯ ಭಗಿನಿಯರು ಅವಿರತವಾಗಿ ಶ್ರಮಿಸಿದ್ದಾರೆ. ಮಾತ್ರವಲ್ಲದೆ ಅನೇಕ ಭಗಿನಿಯರು ಸಮಾಜವನ್ನು ಕಟ್ಟಲು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಹಕ್ಕುಗಳನ್ನು ಎತ್ತಿಹಿಡಿಯಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರುವರು.
ಪ್ರಸ್ತುತ ಬೆಥನಿ ಸಂಸ್ಥೆಯ ಮಹಾಮಾತೆಯಾದ ಭಗಿನಿ ರೋಸ್ ಸೆಲಿನ್ ಅವರು ತಮ್ಮ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಮಂಗಳೂರು ಪ್ರಾಂತ್ಯದ ಪ್ರಾಂತೀಯ ಸುಪೀರಿಯರ್ ಆಗಿರುವ ಸಿಸ್ಟರ್ ಲಿಲ್ಲಿ ಪಿರೇರಾ ಅವರು ತಮ್ಮ ಪ್ರೋತ್ಸಾಹ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನ್ವೆಂಟ್‌ನ ಮುಖ್ಯಸ್ಥೆ ಭಗಿನಿ ಪ್ರಶಾಂತಿ ಅವರು ತಮ್ಮ ನಾಯಕತ್ವದೊಂದಿಗೆ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಸ್ತುತ, ಒಟ್ಟು 9 ಬೆಥನಿ ಭಗಿನಿಯರು ಲಿಝಿಯೊ ಕಾನ್ವೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣದ ಜೊತೆಗೆ, ಮಾಯಿದೇ ದೇವುಸ್ ಪುತ್ತೂರು, ಉಪ್ಪಿನಂಗಡಿ, ಶಂಬೂರು, ಬನ್ನೂರು, ನಿಡ್ಪಳ್ಳಿ, ಮರಿಲ್ ಚರ್ಚ್‌ಗಳಲ್ಲಿ ಸೇವೆಯನ್ನು ನೀಡಿದ ಬೆಥನಿ ಭಗಿನಿಯರು ಪ್ರಸ್ತುತ ಶಿಕ್ಷಣದ ಜೊತೆಗೆ ಮಾಯಿದೇ ದೇವುಸ್ ಚರ್ಚ್ ಪುತ್ತೂರು, ಮರಿಲ್, ನಿಡ್ಪಳ್ಳಿ, ಬೆಳ್ಳಾರೆ ಚರ್ಚ್ ಗಳಲ್ಲಿ ಸಕ್ರಿಯವಾಗಿ ಸೇವೆಯಲ್ಲಿ ತೊಡಗಿದ್ದಾರೆ. ಎಸ್‌ಸಿಸಿ ಸಭೆಗಳಿಗೆ ಹಾಜರಾಗುವುದು, ಮನೆಗಳಿಗೆ ಭೇಟಿ ನೀಡುವುದು ಮತ್ತು ಬೆಥನಿ ಲೇ ಅಸೋಸಿಯೇಷನ್ ಮೂಲಕ ದೈವಾನುಭವ, ಸಾಂತ್ವನದ ವ್ಯಕ್ತಿತ್ವ ವಿಕಸನ ಮತ್ತು ಪ್ರೋತ್ಸಾಹ ನೀಡುವುದು ಅವರ ದಿನನಿತ್ಯದ ಸೇವೆಯ ಭಾಗವಾಗಿದೆ.
ಬೆಥನಿ ಸಂಸ್ಥೆಯ ಮೊದಲ ಶಾಖೆಯಾಗಿದ್ದರಿಂದ, ಸಂಸ್ಥಾಪಕ ಪಿತಾ ಅವರು ಈ ಶಾಖೆಗೆ ವಿಶೇಷ ಒಲವು ತೋರುತ್ತಿದ್ದರು. ಆಗಿನ ಮಹಾಮಾತೆ ಮದರ್ ಮಾರ್ತಾ ಅವರೊಂದಿಗೆ ಆಗಾಗ್ಗೆ ಕಾನ್ವೆಂಟ್‌ಗೆ ಭೇಟಿ ನೀಡುತ್ತಿದ್ದರು. ಬೆಥನಿ ಸಂಸ್ಥೆಯ ಈ ಮೊದಲ ಕೇಂದ್ರವು ಸಂಸ್ಥಾಪಕರ ಕಣ್ಮಣಿಯಾಗಿತ್ತು. ಲಿಝಿಯೊ ಕಾನ್ವೆಂಟ್‌ನ ಶತಮಾನೋತ್ಸವವು ಕೇವಲ ಒಂದು ಆಚರಣೆಯಲ್ಲ, ಇದು ನೂರು ವರ್ಷಗಳ ಸೇವಾ ಧ್ಯೇಯದ ಪ್ರತಿಫಲನ. ಶಿಕ್ಷಣ ಮತ್ತು ಧಾರ್ಮಿಕ ಸೇವೆಯ ಮೂಲಕ ಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡಿದ ಈ ಸಂಸ್ಥೆಯು, ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿದೆ.
ಶತಮಾನೋತ್ಸವದ ಸಂಭ್ರಮಾಚರಣೆ
ಬೆಥನಿ ಸಂಸ್ಥೆಯ ಲಿಝಿಯೊ ಕಾನ್ವೆಂಟ್‌ನ ಶತಮಾನೋತ್ಸವ ಸಂಭ್ರಮವು ಪುತ್ತೂರಿನ ಮಾಯಿದೇ ದೇವುಸ್ ಚರ್ಚ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿ’ಸೋಜಾ ಹಾಗೂ ಪುತ್ತೂರು ಧರ್ಮಪ್ರಾಂತ್ಯ ಬಿಷಪ್, ಅತೀ ಧರ್ಮಗುರು ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಪೂಜೆ ನೆರವೇರಿಸಲಿದ್ದಾರೆ. ಬಳಿಕ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಸುಪೀರಿಯರ್ ಜನರಲ್ ರೆ.ಸಿ. ಎಂ. ಡಾ. ರೋಸ್ ಸೆಲಿನ್ ಬಿ.ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಧರ್ಮಪ್ರಾಂತ್ಯ ಬಿಷಪ್ ಅತೀ ಧರ್ಮಗುರು ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮಾಯಿದೇ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್, ಮಂಗಳೂರು ಪ್ರಾಂತ್ಯದ ಪ್ರಾಂತೀಯ ಸುಪೀರಿಯರ್ ಎಂ. ಡಾ. ಲಿಲ್ಲಿ ಪಿರೇರಾ ಬಿ.ಎಸ್., ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಹಾಗೂ ನಗರ ಠಾಣೆಯು ಉಪನಿರೀಕ್ಷಕ ಆಂಜನೇಯ ರೆಡ್ಡಿ ಜಿ.ವಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮಂಗಳೂರು ಪ್ರಾಂತ್ಯದ ಪ್ರಾಂತೀಯ ಸುಪೀರಿಯರ್ ಎಂ.ಡಾ. ಲಿಲ್ಲಿ ಪಿರೇರಾ ಬಿ.ಎಸ್ ಹಾಗೂ ಸುಪಿರಿಯರ್ ಪ್ರಶಾಂತಿ ಬಿ.ಎಸ್ ತಿಳಿಸಿದ್ದಾರೆ.






