ಪುತ್ತೂರು: ಅನುರಾಗ ವಠಾರದಲ್ಲಿ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ವಹಿಸಿ ಮಾತನಾಡಿ, ಹಾಸ್ಯವೆಂಬುದನ್ನು ಹೊರಗಡೆ ಹುಡುಕುವ ಅಗತ್ಯವಿಲ್ಲ. ಅದು ನಮ್ಮೊಡನೆಯೇ ಇದೆ. ಸಹಜವಾಗಿ ಜೀವಿಸುವವರಿಗೆ ಇನ್ನೊಬ್ಬರಲ್ಲಿರುವ ಅಸಹಜತೆ ಬಹಳ ಬೇಗನೆ ತಿಳಿಯುತ್ತದೆ. ಪುಟ್ಟ ಮಕ್ಕಳು ಸಹಜವಾಗಿರುತ್ತಾರೆ. ಸದಾ ಲವಲವಿಕೆಯಿಂದ ಇರುತ್ತಾರೆ ಎಂದು ಹಲವಾರು ಉದಾಹರಣೆಗಳೊಂದಿಗೆ ಹಾಸ್ಯದ ಹಿರಿಮೆಯನ್ನು ಹೇಳುತ್ತಾ ಸಭಿಕರಲ್ಲಿ ನಗೆಯುಕ್ಕಿಸಿದರು.
ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ, ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಡಾI ಶ್ರೀಶ ಕುಮಾರ ಇವರು ಸಂಸ್ಕೃತ ಸಾಹಿತ್ಯದಲ್ಲಿ ಹಾಸ್ಯ ದ ಕುರಿತು ಮಾತನಾಡುತ್ತಾ ಹಲವು ರಸವತ್ತಾದ ಸಂಸ್ಕೃತ ಶ್ಲೋಕಗಳೊಂದಿಗೆ ಅವುಗಳ ಅರ್ಥವನ್ನು ವಿವರವಾಗಿ ನೀಡಿದರು. ಸುದಾಮ ಕೆದಿಲಾಯ, ದತ್ತಾತ್ರೇಯ ರಾವ್, ಪದ್ಮಾವತಿ ರಾಮಕೃಷ್ಣ ಭಟ್, ಮುಂತಾದವರು ತಮ್ಮ ನಗೆ ಚಟಾಕಿಗಳಿಂದ ಹಾಗೂ ಸುಬ್ರಹ್ಮಣ್ಯ ಶರ್ಮರು ತಮ್ಮ ಇಂಪಾದ ಗಾಯನದಿಂದ ಸಭಿಕರನ್ನು ರಂಜಿಸಿದರು.
ಸಂಘದ ಅಧ್ಯಕ್ಷ ಸತ್ಯೇಶ್ ಕೆದಿಲಾಯರು ಸರ್ವರನ್ನೂ ಸ್ವಾಗತಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಪರಿಚಯಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸುವುದರ ಜೊತೆಗೆ, ಸಂಘದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸಿದ ಮಧುರಾ ಬೆಟ್ಟ, ಶಂಕರಿ ಶರ್ಮ, ಅನ್ನಪೂರ್ಣೇಶ್ವರಿ, ಸುಬ್ರಹ್ಮಣ್ಯ ಶರ್ಮ, ರಾಧಾಕೃಷ್ಣ ನಾಯಕ್ ಇವರಿಗೆ ಹೂ ನೀಡಿ ಗೌರವಿಸಿದರು.
ಮಾI ಸನ್ಮಯ್ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಶರ್ಮರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಮೊದಲಿಗೆ ಪಹಲ್ಗಾಮ್ ನಲ್ಲಿ ಇತ್ತೀಚೆಗೆ ಉಗ್ರರಿಂದ ಹತರಾದ ದೇಶದ ಬಂಧುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಧುರಾ ಬೆಟ್ಟ ಧನ್ಯವಾದ ಸಮರ್ಪಿಸಿದರು.