ಪುತ್ತೂರು: ಮೆಸ್ಕಾಂ ಗ್ರಾಮಾಂತರ ಉಪ ವಿಭಾಗ ಕುಂಬ್ರಕ್ಕೆ ಒಳಪಟ್ಟ ಅರಿಯಡ್ಕ, ಶೇಖಮಲೆ, ಜಾರತ್ತಾರು ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ವಿದ್ಯುತ್ ಸಮಸ್ಯೆ ಇರುವುದರಿಂದ ಈ ಭಾಗದ ವಿದ್ಯುತ್ ಬಳಕೆದಾರರು ಮೇ.1 ರಂದು ಕುಂಬ್ರ ಮೆಸ್ಕಾಂ ಕಛೇರಿಗೆ ತೆರಳಿ ವಿದ್ಯುತ್ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿಕೊಡಬೇಕು ಎಂದು ಜ್ಯೂನಿಯರ್ ಇಂಜಿನಿಯರ್ ರವೀಂದ್ರರವರಿಗೆ ಮನವಿ ಸಲ್ಲಿಸಿದರು. ತಕ್ಷಣಕ್ಕೆ ವಿದ್ಯುತ್ ಸಮಸ್ಯೆ ಬಗೆಹರಿಯದೇ ಇದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ವಿದ್ಯುತ್ ಬಳಕೆದಾರರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆಯನ್ನು ನೀಡಿದರು.
ಅರಿಯಡ್ಕ, ಶೇಖಮಲೆ ಹಾಗೂ ಜಾರತ್ತಾರು ಈ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ. ವರ್ಷದ ಮೊದಲ ಮಳೆಗೆ ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಯಾವ ರೀತಿ ಇರಬಹುದು ಎಂದು ಪ್ರಶ್ನಿಸಿದ ಗ್ರಾಹಕರು, ಇತ್ತೀಚಿಗೆ ಬೀಸಿದ ಗಾಳಿಗೆ ಅಲ್ಲಲ್ಲಿ ಮರದ ಗೆಲ್ಲುಗಳು ಮುರಿದು ಬಿದ್ದು ವಿದ್ಯುತ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ತಕ್ಷಣವೇ ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಎಲ್ಲೆಲ್ಲಿ ವಿದ್ಯುತ್ ತಂತಿಯ ಮೇಲ್ಬಾಗದಲ್ಲಿ ಇರುವ ಮರದ ಗೆಲ್ಲುಗಳನ್ನು ತೆರವು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಜೆಇ ರವೀಂದ್ರರವರು ಅರಿಯಡ್ಕ, ಜಾರತ್ತಾರು, ಶೇಖಮಲೆ ಪ್ರದೇಶಗಳಲ್ಲಿ ಮರದ ಗೆಲ್ಲುಗಳನ್ನು ತೆರವು ಮಾಡಬೇಕಾಗಿದೆ. ಇದರಿಂದಲೂ ಸ್ವಲ್ಪಮಟ್ಟಿನ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ತಕ್ಷಣವೇ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮರದ ಗೆಲ್ಲುಗಳನ್ನು ತೆರವು ಮಾಡುವ ಕೆಲಸ ಮಾಡಲಾಗುತ್ತದೆ. ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಲ್ಲಿ ಮೆಸ್ಕಾಂ ಸದಾ ಗ್ರಾಹಕರೊಂದಿಗೆ ಇದೆ ಎಂದು ತಿಳಿಸಿದರು.
ಪ್ರತಿಭಟನೆಯ ಎಚ್ಚರಿಕೆ…?
ವಿದ್ಯುತ್ ಇಲ್ಲದೆ ನಾವು ಬಹಳಷ್ಟು ತೊಂದರೆ ಎದುರಿಸುತ್ತಿದ್ದೇವೆ. ಇದೇ ಸಮಸ್ಯೆ ಮುಂದುವರಿದರೆ ನಾವು ವಿದ್ಯುತ್ ಬಳಕೆದಾರರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪಿ.ಎಂ ಶಾಫಿ ಅರಿಯಡ್ಕರವರು ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸತೀಶ್ ಕರ್ಕೆರ, ಅಶೋಕ್ ಪೂಜಾರಿ ಬೊಳ್ಳಾಡಿ, ಪಿ.ಎಂ ಶಾಫಿ, ಹನೀಫ್ ಪಿ.ಎಂ, ನಾಗೇಶ್ ಪೂಜಾರಿ ಮಡ್ಯಂಗಳ, ಸಂಶುದ್ದೀನ್ ಎ.ಆರ್ ಮತ್ತಿತರರು ಉಪಸ್ಥಿತರಿದ್ದರು.
‘ ಮರದ ಗೆಲ್ಲುಗಳನ್ನು ತೆರವು ಮಾಡುವ ಕೆಲಸ ಆಗಬೇಕಾಗಿದೆ. ಅರಣ್ಯ ಇಲಾಖೆಯೊಂದಿಗೆ ಸೇರಿಕೊಂಡು ಈ ಕೆಲಸವನ್ನು ಶೀಘ್ರದಲ್ಲೇ ಮಾಡಲಾಗುವುದು. ಮೆಸ್ಕಾಂ ಸದಾ ಗ್ರಾಹಕರೊಂದಿಗೆ ಇದೆ. ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಯತ್ನ ಮಾಡಲಾಗುವುದು.’
ರವೀಂದ್ರ , ಜ್ಯೂನಿಯರ್ ಇಂಜಿನಿಯರ್ ಮೆಸ್ಕಾಂ ಕುಂಬ್ರ
‘ ನಿರಂತರ ವಿದ್ಯುತ್ ಸಮಸ್ಯೆಯಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಕುಂಬ್ರ ಮೆಸ್ಕಾಂನಲ್ಲಿ ಪವರ್‌ಮ್ಯಾನ್‌ಗಳ ಕೊರತೆ ಇದೆ ಎಂಬ ವಿಷಯವೂ ನಮಗೆ ಗೊತ್ತಿದೆ. ಮರದ ಗೆಲ್ಲುಗಳ ತೆರವು ವಿಚಾರದಲ್ಲೂ ಆಗಲಿ ನಾವುಗಳು ಮೆಸ್ಕಾಂನೊಂದಿಗೆ ಸಹಕಾರ ನೀಡಲು ಸಿದ್ದರಿದ್ದೇವೆ.’
ಸಂಶುದ್ದೀನ್ ಎ.ಆರ್, ವಿದ್ಯುತ್ ಬಳಕೆದಾರರು ಕುಂಬ್ರ