





ಪುತ್ತೂರು: ಜಿಲ್ಲೆಯಲ್ಲಿ ಹಿಂದೆ ಮತ್ತು ಈಗ ನಡೆದಿರುವ ಯುವಕರ ಹತ್ಯೆಗಳು ಹಾಗೂ ಆ ಬಳಿಕ ನಡೆದಿರುವ ಅಹಿತಕರ ಘಟನೆಗಳಿಗೆ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರುಗಳು ನಿರಂತರವಾಗಿ ಮಾಡುತ್ತಿರುವ ಕೋಮು ಪ್ರಚೋದನೆ ಕೃತ್ಯ ಹಾಗೂ ದ್ವೇಷ ಭಾಷಣಗಳೇ ಮುಖ್ಯ ಕಾರಣ. ಆದುದರಿಂದ ದ್ವೇಷ ಭಾಷಣ ಮಾಡುವ ಮತ್ತು ಕೋಮು ಪ್ರಚೋದಕ ಹೇಳಿಕೆ ನೀಡುತ್ತಿರುವ ವ್ಯಕ್ತಿ ಎಷ್ಟೇ ದೊಡ್ಡವನಿರಲಿ ಅಂತವರ ವಿರುದ್ಧ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸೊಮೋಟೋ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕ ಎಚ್. ಮಹಮ್ಮದ್ ಅಲಿಯವರು ಗೃಹ ಸಚಿವರಲ್ಲಿ ಆಗ್ರಹಿಸಿರುತ್ತಾರೆ.


ಮೇ 2 ರಂದು ಪುತ್ತೂರಿನಲ್ಲಿ ಬಂದ್ ವಿಚಾರ ತಿಳಿಯದೆ ಅಂಗಡಿ ತೆರೆದಿದ್ದ ಮುಸ್ಲಿಂ ವ್ಯಾಪಾರಸ್ಥರ ಅಂಗಡಿಗಳಿಗೆ ತೆರಳಿ ಅರುಣ್ ಕುಮಾರ್ ಪುತ್ತಿಲ ಮತ್ತು ಮುರಳಿಕೃಷ್ಣ ಹಸಂತಡ್ಕ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲಿ ವ್ಯಾಪಾರಸ್ಥರಿಗೆ ಬೆದರಿಕೆ ಒಡ್ಡಿರುವ ಘಟನೆ ನಡೆದಿರುತ್ತದೆ ಮಾತ್ರವಲ್ಲ 144 ಸೆಕ್ಷನ್ ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿರುತ್ತಾರೆ. ಈ ಬಗ್ಗೆಯೂ ಕ್ರಮ ತೆಗೆದು ಕೊಳ್ಳುವಂತೆ ಎಚ್.ಮಹಮದ್ ಆಲಿರವರು ಆಗ್ರಹಿಸಿರುತ್ತಾರೆ.





ದ ಕ ಜಿಲ್ಲಾ ಕಾಂಗ್ರೆಸ್ ನ ನಿಯೋಗ ಇಂದು ಮಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅವರು ಈ ಆಗ್ರಹವನ್ನು ಮಾಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









